ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿನ ಅಕ್ಷರಸ್ಥೆ ಮಹಿಳೆಗೆ ಆರ್ಥಿಕ, ಆಸ್ತಿ ಸ್ವಾತಂತ್ರ್ಯ ದೊರಕಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಎಂ.ಶ್ರೀಲತಾ ಹೇಳಿದರು.

ನಗರದ ಗಾಂಧಿನಗರದಲ್ಲಿರುವ ಕನ್ನಿಕಶಿಲ್ಪ ನವೋದಯ ಸಭಾಂಗಣದಲ್ಲಿ ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಆಯೋಜಿಸಿದ್ದ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಪ್ರಯುಕ್ತ ನೀ ಮಾಯೆಯೋ ನಿನ್ನೊಳು ಮಾಯೆಯೊ ಕಾದಂಬರಿ ಬಿಡುಗಡೆ ಮತ್ತು ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದ ಸ್ಥಿತಿ ಮತ್ತು ಸ್ವಾತಂತ್ರ್ಯ ನಂತರ ಪರಿಸ್ಥಿತಿಯೊಳಗೆ ನಾಗರೀಕ ಸಮಾಜದಲ್ಲಿ ಮಹಿಳೆಯರ ಸಬಲೀಕರಣ ಕಾಣಬಹುದಾಗಿದೆ, ಅಕ್ಷರಸ್ಥ ಮಹಿಳೆಯರಿಗೆ ಸಂವಿಧಾನಾತ್ಮಕವಾದರೂ ಆರ್ಥಿಕ ಸ್ವಾತಂತ್ರ್ಯ ಮತ್ತು ಆಸ್ತಿಸ್ವಾತಂತ್ರ್ಯ ಲಭಿಸಬೇಕಿದೆ ಎಂದು ನುಡಿದರು.

ಆಧುನಿಕ ಯುಗದಲ್ಲಿ ವಿದ್ಯೆ ಸಿಕ್ಕಿದ ಮಾತ್ರಕ್ಕೆ ವಿದ್ಯಾವಂತ ಮಹಿಳೆಯರು ಎನ್ನಲಾಗದು. ಅವರನ್ನು ಅಕ್ಷರಸ್ಥ ಮಹಿಳೆಯರು ಎನ್ನಬಹುದು, ಅಸಮಾನತೆ, ಲಿಂಗ ತಾರತಮ್ಯ, ಉದ್ಯೋಗಸ್ಥಳದಲ್ಲಿ ಅಗೌರವ ತಾಂಡವವಾಡುತಿದೆ, ಕಾನೂನು ರಕ್ಷಣೆ ಇದ್ದರೂ ಸಬಲೀಕರಣ ಸಾಧ್ಯವಾಗಿಲ್ಲ. ಹಳ್ಳಿಗಾಡಿನ ಮಹಿಳೆಯರಿಗೆ ಅಕ್ಷರಸ್ಥ ಮಹಿಳೆಯರು ನೆರವಾಗಬೇಕಿದೆ ಎಂದು ಎಚ್ಚರಿಸಿದರು.


ಅಕ್ಷರಸ್ಥೆ ಕನ್ನಿಕಾ ತನ್ನಲ್ಲಿರುವ ಅಗಾಧ ಪ್ರತಿಭೆಯನ್ನು ಅನಾವರಣಗೊಳಿಸಿ ೩೦ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಈಗ ಕಾದಂಬರಿ ಬಿಡುಗಡೆಗೊಳಿಸಿದ್ದಾರೆ. ನವೋದಯ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡಿ ರಾಜ್ಯ, ರಾಷ್ಟಮಟ್ಟದಲ್ಲಿ ಗುರುತಿಸಿಕೊಂಡು ಬುಕ್ ಆಫ್ ರೆಕಾರ್ಡ್ ದಾಖಲಿಸುವ ಮೂಲಕ ಮಹಿಳಾ ಲೋಕಕ್ಕೆ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ೧೩ಮಂದಿ ಮಹಿಳೆಯರಿಗೆ ಗಣ್ಯರ ಸಮ್ಮುಖದಲ್ಲಿ ಮಹಿಳಾ ಸಾಧಕಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಎಂ.ಐ.ಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ.ಜಿ.ಉಷಾರಾಣಿ, ಮಳವಳ್ಳಿ ಶಾಂತಿಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಎಂ.ಎಸ್.ಅನಿತಾ, ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ, ಸಾಹಿತಿ ಕನ್ನಿಕ ಮತ್ತಿತರರಿದ್ದರು.ಗ್ರಾಮಕ್ಕೆ ಮೂಲ ಸೌಕರ್ಯ ಇಲ್ಲ; ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಮಂಡ್ಯ:

ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸದ ಸರ್ಕಾರ ಹಾಗೂ ಶಾಸಕರ ಕ್ರಮ ಖಂಡಿಸಿ ಮೇಲುಕೋಟೆ ವಿಧಾನಸಭ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಅವ್ವೇರಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಎಲ್ಲಾ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಕೈಗೊಂಡಿದ್ದಾರೆ.

ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಮನವಿ ಮಾಡಿದ್ದರು. ಅಲ್ಲದೇ, ಹತ್ತಾರು ಬಾರಿ ಮನವಿ ಮಾಡಿದರೂ ಸಿಗದ ಸ್ಪಂದನೆ‌ ಹಿನ್ನೆಲೆಯಲ್ಲಿ ಶಾಸಕ ಹಾಗೂ ಸರ್ಕಾರದ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಕ್ಕೆ ರಸ್ತೆ, ಚರಂಡಿ, ನೀರು‌ ಕಲ್ಪಿಸಿಲ್ಲ. ಹೀಗಾಗಿ ರಾಜಕೀಯ ನಾಯಕರು ಗ್ರಾಮಕ್ಕೆ ಬರುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಬರಬೇಕು ಅಂದರೆ ‌ಮೊದಲು ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 12 ವರ್ಷದ ಬಳಿಕ‌‌ ಗ್ರಾಮದಲ್ಲಿ ಮಾ.17 ರಂದು ಬಸವೇಶ್ವರ ಹಬ್ಬ ನಡೆಯುತ್ತಿದೆ. ಬಸವೇಶ್ವರ ಅಗ್ನಿಕೊಂಡೋತ್ಸವದ ವೇಳೆ ರಸ್ತೆ ಡಾಂಬರೀಕರಣಕ್ಕಾಗಿ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಾದಿ ಹಿಡಿದರು.

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಮತದಾನ ಮಾಡೋದಿಲ್ಲ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುತ್ತೇವೆ. ನಮಗೆ ರಾಜಕಾರಣಿಗಳೇ ಬೇಡ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಪ್ರತಿಭಟಿಸಿದರು.