ಸಾರಾಂಶ
ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವಿನೋರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಿಳೆಯರು ಹಗಲುರಾತ್ರಿ ಎನ್ನದೇ ಕೊಡಗಳನ್ನು ಹಿಡಿದು ಗ್ರಾಮದಲ್ಲಿ ಓಡಾಡುತ್ತಾ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ.
ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವಿನೋರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಿಳೆಯರು ಹಗಲುರಾತ್ರಿ ಎನ್ನದೇ ಕೊಡಗಳನ್ನು ಹಿಡಿದು ಗ್ರಾಮದಲ್ಲಿ ಓಡಾಡುತ್ತಾ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ.
ಗ್ರಾಮಸ್ಥರಾದ ಪಾಲಮ್ಮ, ಸಣ್ಣಪಾಲಮ್ಮ, ಬೋರಮ್ಮ, ಪಾಲಕ್ಕ, ಬೋರಯ್ಯ, ಓಬಯ್ಯ, ಪಾಲಯ್ಯ ಮುಂತಾದವರು ಗ್ರಾಮದ ಕುಡಿಯುವ ನೀರಿನ ಸಮಸ್ಯೆ ನೈಜ ಸ್ಥಿತಿಯ ಬಗ್ಗೆ ಮಾಹಿತಿ ನೀಡಿ, ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಪಟ್ಟಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಹರಿಸುತ್ತಿಲ್ಲ, ವಿಶೇಷವಾಗಿ ನೀರಗಂಟಿ ವ್ಯವಸ್ಥೆ ಇಲ್ಲ, ತಾಲೂಕು ಆಡಳಿತ ಈ ಹಿಂದೆ ಪ್ರತಿದಿನ 5 ಟ್ಯಾಂಕ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. ಆದರೆ, ಈಗ ಇಡೀ ದಿನಕ್ಕೆ ಕೇವಲ ಒಂದು ಟ್ಯಾಂಕರ್ ಮಾತ್ರ ಬಂದುಹೋಗುತ್ತದೆ. ಟ್ಯಾಂಕರ್ ಬಂದಕೂಡಲೇ ನೂರಾರು ಮಹಿಳೆಯರು ಕುಡಿಯುವ ನೀರಿಗೆ ಮುಗಿಬೀಳುತ್ತಾರೆ. ಮನೆಯಲ್ಲಿ ವೃದ್ಧರು, ಮಕ್ಕಳು, ಮಹಿಳೆಯರು ಕುಡಿಯುವ ನೀರಿಲ್ಲದೆ ಪ್ರತಿನಿತ್ಯ ಪರದಾಡುತ್ತಾರೆ. ತಾಲೂಕು ಆಡಳಿತ ಈ ಬಗ್ಗೆ ತುರ್ತು ಗಮನಹರಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಸರ್ಕಾರವನ್ನು ಆಗ್ರಹ ಪಡಿಸಿದ್ದಾರೆ.