ಕೆಂಪು ಹಳದಿ ಬಣ್ಣದಲ್ಲಿ ಮಿಂಚಿದ ನಾರಿಯರು

| Published : Nov 06 2025, 01:30 AM IST

ಸಾರಾಂಶ

70 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಐಕ್ಯ ಫೌಂಡೇಶನ್ ಹಾಗೂ ಇನ್ನರ್ ವೀಲ್‌ಸಂಸ್ಥೆ ಸಹಯೋಗದಲ್ಲಿ ಬುಧವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡಕ್ಕಾಗಿ ನಡಿಗೆ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಬಣ್ಣದ ಉಡುಪು ತೊಟ್ಟಿದ್ದ ನೂರಾರು ಮಹಿಳೆಯರು ನಡಿಗೆ ನಡೆದು ಸಾರ್ವಜನಿಕರ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ತುಮಕೂರು 70 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಐಕ್ಯ ಫೌಂಡೇಶನ್ ಹಾಗೂ ಇನ್ನರ್ ವೀಲ್‌ಸಂಸ್ಥೆ ಸಹಯೋಗದಲ್ಲಿ ಬುಧವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡಕ್ಕಾಗಿ ನಡಿಗೆ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಬಣ್ಣದ ಉಡುಪು ತೊಟ್ಟಿದ್ದ ನೂರಾರು ಮಹಿಳೆಯರು ನಡಿಗೆ ನಡೆದು ಸಾರ್ವಜನಿಕರ ಗಮನ ಸೆಳೆದರು.ಸಿದ್ಧಗಂಗಾ ಆಸ್ಪತ್ರೆ ಬಳಿಯಿಂದ ಆರಂಭವಾದ ಕನ್ನಡಕ್ಕಾಗಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅವರು, ಮಹಿಳೆಯರೇ ಸೇರಿ ವಿಭಿನ್ನವಾಗಿ ಆಕರ್ಷಣೀಯವಾಗಿ ಕನ್ನಡಕಾರ್ಯಕ್ರಮ ಆಚರಿಸಿದ್ದಾರೆ. ಕನ್ನಡ ನಾಡುನುಡಿ ಬಗ್ಗೆ ಜನರಲ್ಲಿ ಅರಿವೂ ಮೂಡಿಸುತ್ತಿದ್ದಾರೆ. ಜಿಲ್ಲೆಯ ಅನೇಕ ಮಹನೀಯರು ಕಲೆ ಸಂಸ್ಕೃತಿಯಲ್ಲಿ ನಾಡಿಗೆ ಕೊಡುಗೆ ಕೊಟ್ಟಿದ್ದಾರೆ, ಅವರಲ್ಲಿ ಮಹಿಳೆಯರೂ ಹೆಚ್ಚಿದ್ದಾರೆ. ಇಂದು ಕನ್ನಡಕ್ಕಾಗಿ ನಡಿಗೆಯಲ್ಲಿ ನಮ್ಮಜಾನಪದ ವಾದ್ಯಗಳ ಮೆರವಣಿಗೆ ಮಾಡಿ ನಾಡುನುಡಿಯ ಹಿರಿಮೆ ಮೆರೆಸುವ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಮಹಿಳೆಯರೇ ಸೇರಿಕೊಂಡು ಕ್ರಿಯಾಶೀಲವಾಗಿ ಕನ್ನಡ ಹಬ್ಬ ಆಚರಿಸುತ್ತಿದ್ದಾರೆ. ಈ ಆಚರಣೆ ನಿರಂತರವಾಗಿ ನಡೆಯಲಿ, ಮಕ್ಕಳಲ್ಲಿ ಕನ್ನಡಪ್ರೀತಿ ಬೆಳೆಸಲಿ ಎಂದು ಆಶಿಸಿದರು.ಐಕ್ಯ ಫೌಂಡೇಶನ್‌ ಅಧ್ಯಕ್ಷೆ ರೇಖಾ ಮಾತನಾಡಿ, ಮಕ್ಕಳಿಗೆ ತಾಯಿಯೇ ಮೊದಲ ಗುರು. ತಾಯಿಯರು ತಮ್ಮ ಮಕ್ಕಳಿಗೆ ಶುದ್ಧ ಕನ್ನಡ ಕಲಿಸಿ, ಕನ್ನಡ ಅಭಿಮಾನ ಬೆಳೆಸಬೇಕು, ಮನೆ ಮನೆಯಲ್ಲಿ ಕನ್ನಡ ಭಾಷೆ ಮೊಳಗಬೇಕು.ಈ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಹೇಳಿದರು.ವಿದ್ಯಾವಾಹಿನಿ ವಿದ್ಯಾಸಂಸ್ಥೆಯ ಪ್ರಿಯಾ ಅವರು, ಎಲ್ಲರಲ್ಲೂ ಕನ್ನಡ ಪ್ರೇಮ ಜಾಗೃತರಾಗಬೇಕು. ಮಾತೃಭಾಷೆಯ ಬಗ್ಗೆ ಸದಾಗೌರವ ಹೊಂದಬೇಕು. ಮನೆಗಳಲ್ಲಾಗಲಿ ಹೊರಗೆಯಾಗಲಿ ಕನ್ನಡವನ್ನೇ ಬಳಸಬೇಕು, ಕನ್ನಡವನ್ನೇ ಮೆರೆಸಬೇಕು ಎಂದರು.ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಮಹಾತ್ಮಗಾಂಧಿ ಕ್ರೀಡಾಂಗಣದವರೆಗೆ ಕನ್ನಡದ ನಡಿಗೆ ಸಾಗಿತು. ನಂತರ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ಸಂಭ್ರಮದಿಂದ ನಡೆಯಿತು. ಟಿ.ವಿ. ಧಾರಾವಾಹಿಗಳ ಕಲಾವಿದರಾದ ಬಿ.ಎಸ್.ಹರ್ಷ, ಜಿ.ಜೆ.ಪ್ರಿಯಾಂಕ, ಶ್ವೇತ ಬಸಯ್ಯ, ಸಂಜನ್ ನಾಗರಾಜ್, ಪ್ರಿಯಾ ಸಂಗಡಿಗರಿಂದಕನ್ನಡ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್, ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್, ಇನ್ನರ್ ವೀಲ್ ಸಂಸ್ಥೆಅಧ್ಯಕ್ಷೆ ಮಂಜುಳಾ ಲೋಕೇಶ್, ಲೇಖಕ ಡಾ.ಡಿ.ಎನ್.ಯೋಗೇಶ್ವರಪ್ಪ, ತುಮಕೂರು ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಬೆಳ್ಳಾವೆ ಶಿವಕುಮಾರ್, ಎಂ.ಜಿ.ಸಿದ್ಧರಾಮಯ್ಯ, ಟಿ.ಆರ್.ಸದಾಶಿವಯ್ಯ, ರುದ್ರಮೂರ್ತಿ ಎಲೆರಾಂಪುರ, ಕರಣಂ ರಮೇಶ್, ಚಿಕ್ಕಹನುಮಯ್ಯ ಸೇರಿದಂತೆ ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.