ಮಹಿಳೆಯರು ಮನೋಬಲ ವೃದ್ಧಿಸಿಕೊಳ್ಳಿ

| Published : Mar 27 2024, 01:05 AM IST

ಸಾರಾಂಶ

ಮಹಿಳೆ ಮನೆಯಿಂದ ಹೊರ ಬಂದು ಸಮಾಜದಲ್ಲಿ ಬೆರೆಯಲು ಮಹಿಳಾ ಸಂಘಟನೆಗಳು ಶ್ರಮಿಸಬೇಕು

ಗದಗ: ಮಹಿಳೆಯರು ಕೌಟುಂಬಿಕ ಕಾರ್ಯ ಚಟುವಟಿಕೆಗಳಿಗೆ ಸೀಮಿತವಾಗಿರದೆ ಕಲೆ, ಸಾಹಿತ್ಯ, ವಿಜ್ಞಾನ, ರಕ್ಷಣೆ, ಕ್ರೀಡೆ, ಉದ್ದಿಮೆಗಳಂತಹ ಹತ್ತು ಹಲವಾರು ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಸಾಧಿಸುತ್ತಿದ್ದಾರೆ. ಈ ಸಾಧನೆಗೆ ದೈಹಿಕ ಸಾಮರ್ಥ್ಯ ಜತೆಗೆ ಮನೋಬಲವೂ ಬೇಕಾಗುತ್ತದೆ ಎಂದು ಡಿಜಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಸುವರ್ಣಾ ನಿಡಗುಂದಿ ಹೇಳಿದರು.

ಗದಗ ನಗರದ ಸಿದ್ಧಲಿಂಗ ನಗರದಲ್ಲಿರುವ ಎಸ್.ವೈ.ಬಿ.ಎಂ.ಎಸ್. ಯೋಗ ಪಾಠಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ 15 ನೆಯ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕುಂಟಾಬಿಲ್ಲೆ, ಲಗೋರಿ, ಆಣೆಕಲ್ಲು ಮುಂತಾದ ಕ್ರೀಡೆಗಳಿಂದ ಮಹಿಳೆಯರ ಮನ ಪ್ರಫುಲ್ಲಗೊಳ್ಳುವುದು. ಮೊಬೈಲ್ ಗೇಮ್, ಟಿವಿ ಧಾರಾವಾಹಿ ಕೂಡ ಮನಸ್ಸಿಗೆ ಖುಷಿ ಕೊಡುವವೆಂದು ತಾವು ಭಾವಿಸಬಹುದು. ಆದರೆ ಮನೋಲ್ಲಾಸ ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸುವವು. ಮಹಿಳೆ ಕಬಡ್ಡಿ, ಖೋ-ಖೋಗಳಂತಹ ದೈಹಿಕ ಶ್ರಮದಾಟ ಆಡುವುದು ಕಷ್ಟಸಾಧ್ಯ. ಈ ದಿಸೆಯಲ್ಲಿ ಮಹಿಳೆಯರಲ್ಲಿ ಮನೋಬಲ ಹೆಚ್ಚಿಲು ಮನೋಲ್ಲಾಸ ಕ್ರೀಡೆಗಳು ಸಹಕಾರಿಯಾಗಿವೆ ಎಂದರು.

ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರವು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನಡಿಗೆ, ಯೋಗಾಸನ, ಲಗೋರಿ, ಆಶುಭಾಷಣ ಇನ್ನಿತರೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಮಹಿಳೆ ಮನೆಯಿಂದ ಹೊರ ಬಂದು ಸಮಾಜದಲ್ಲಿ ಬೆರೆಯಲು ಮಹಿಳಾ ಸಂಘಟನೆಗಳು ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ ನಿವೃತ್ತ ಮುಖ್ಯೋಪಾಧ್ಯಯ ಶಿವನಗೌಡ ಗೌಡರ ಪ್ರಾಚೀನ ಕಾಲದಲ್ಲಿ ಮೈತ್ರೆಯಿ, ಗಾರ್ಗೈಯಿ, ಅನಸೂಯ, ಇತ್ತೀಚೆಗೆ ಅಕ್ಕಮಹಾದೇವಿ, ಮದರ ಥೇರೆಸಾ, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಮುಂತಾದ ಮಹಿಳಾ ಸಮಾನತೆ ಕುರಿತು ಬಸವಾದಿ ಶರಣರ ಆಶಯದ ಕುರಿತು ಮಾತನಾಡಿದರು.

ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಜಯಶ್ರೀ ವಸ್ತ್ರದ, ಸದಸ್ಯೆ ಗಿರಿಜಾ ಅಂಗಡಿ, ಮಾರ್ಗದರ್ಶಕ ಡಾ.ಎಂ.ವಿ.ಐಹೊಳ್ಳಿ ಉಪಸ್ಥಿತರಿದ್ದರು. ಭಾರತಿ ಪಾಟೀಲ (ಪಲ್ಲೇದ) ಸ್ಪರ್ಧಿಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಕ್ರೀಡಾಕೂಟದಲ್ಲಿ ವೇಗದ ನಡಿಗೆ, ಲಗೋರಿ ಸ್ಟ್ಯಾಂಡ ಬೀಳಿಸುವುದು, ಯೋಗಾಸನ, ಯೋಗ ಆಶುಭಾಷಣ, ಪುಟಾಣಿ-ಕಡ್ಲಿಬೇಳೆ ಬೇರ್ಪಡಿಸುವದು ಹೀಗೆ ಒಟ್ಟು 5 ಸ್ಪರ್ಧೆಗಳು ಜರುಗಿದವು. 30 ಜನ ಸ್ಪರ್ಧಿಗಳು ಭಾಗವಹಿಸಿದ್ದರು.

ದೈಹಿಕ ಶಿಕ್ಷಕ ಎಸ್.ಎಂ. ಬುರಡಿ ಕ್ರೀಡಾಕೂಟದ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಗೌರಿ ಜೀರಂಕಳಿ ಪ್ರಾರ್ಥಿಸಿದರು. ಶಾಂತಾ ಕುಂದಗೋಳ ಸ್ವಾಗತಿಸಿದರು. ಸುಲೋಚನಾ ಐಹೊಳ್ಳಿ ಪರಿಚಯಿಸಿದರು. ವಿಜಯಲಕ್ಷ್ಮೀ ಮೇಕಳಿ ವಂದಿಸಿದರು. ಶಾಂತಾ ಮುಂದಿನಮನಿ ನಿರೂಪಿಸಿದರು.