ಸೈಬರ್ ಅಪರಾಧಗಳು, ಸಾಮಾಜಿಕ ಜಾಲತಾಣಗಳ ನಕಲಿ ಪ್ರೇಮಜಾಲ ಮತ್ತು ಬ್ಲ್ಯಾಕ್‌ಮೇಲ್ ವಿರುದ್ಧ ಯುವತಿಯರು ಮತ್ತು ವಿದ್ಯಾರ್ಥಿನಿಯರು ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿ ಹೇಳಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಸೈಬರ್ ಅಪರಾಧಗಳು, ಸಾಮಾಜಿಕ ಜಾಲತಾಣಗಳ ನಕಲಿ ಪ್ರೇಮಜಾಲ ಮತ್ತು ಬ್ಲ್ಯಾಕ್‌ಮೇಲ್ ವಿರುದ್ಧ ಯುವತಿಯರು ಮತ್ತು ವಿದ್ಯಾರ್ಥಿನಿಯರು ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿ ಹೇಳಿದರು.ಇಲ್ಲಿನ ಜಿಲ್ಲಾಡಳಿತ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿಲಾಗಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಅರಿವು ಕಾರ್ಯಕ್ರಮವನ್ನು ಉದ್ಪಾಟಿಸಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯೂ ಈ ನಾಡಿನ ಶಕ್ತಿ ಮತ್ತು ಗೌರವದ ಸಂಕೇತವಾಗಿದ್ದಾರೆ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ದೇವತೆಯ ಸ್ಥಾನ ನೀಡಲಾಗಿದೆ. ಆದರೆ, ವಾಸ್ತವದಲ್ಲಿ ಮಹಿಳೆಯರಿಗೆ ಹಕ್ಕುಗಳು ಮತ್ತು ಗೌರವ ಸಿಗದಿದ್ದಲ್ಲಿ, ಅದನ್ನು ಧೈರ್ಯವಾಗಿ ಹೋರಾಡಿ ಪಡೆದುಕೊಳ್ಳುವ ಶಕ್ತಿಯನ್ನು ಹೆಣ್ಣುಮಕ್ಕಳು ಬೆಳೆಸಿಕೊಳ್ಳಬೇಕು ಎಂದರು.
ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಇತರ ಆಪ್‌ಗಳ ಮೂಲಕ ಅಪರಿಚಿತರ ಜೊತೆ ಸ್ನೇಹ ಬೆಳೆಸುವಾಗ ವಿದ್ಯಾರ್ಥಿನಿಯರು ಜಾಗರೂಕರಾಗಿರಬೇಕು. ಆನ್‌ಲೈನ್‌ನಲ್ಲಿ ಅಪರಿಚಿತರ ಪ್ರೇಮ ಬಲೆಗೆ ಬಿದ್ದು ವಂಚನೆ, ಮಾನವ ಕಳ್ಳಸಾಗಾಣಿಕೆ ಹಾಗೂ ಶೋಷಣೆಗೆ ಒಳಗಾದ ಅನೇಕ ನೈಜ ಘಟನೆಗಳನ್ನು ವಿದ್ಯಾರ್ಥಿನಿಯರ ಗಮನಕ್ಕೆ ತಂದರು.ಖಾಸಗಿ ವಿಡಿಯೋಗಳು ಮತ್ತು ಆನ್‌ಲೈನ್ ಬೆದರಿಕೆಗಳಿಗೆ ಹೆದರಿ ಯಾರೂ ಮೌನವಾಗಿ ಕಿರುಕುಳ ಸಹಿಸಬಾರದು ಮತ್ತು ಆತ್ಮಹತ್ಯೆ ಮಾಡಿಕೊಳ್ಳಬಾರದು ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಪೋಲಿಸ್ ಇಲಾಖೆ ಅಥವಾ ಮಹಿಳಾ ಆಯೋಗಕ್ಕೆ ದೂರು ನೀಡಬೇಕು ಎಂದರು.
ವಿದ್ಯಾರ್ಥಿನಿ ಪ್ರೀತಿ ಮಾತನಾಡಿ, ಅಂಬೇಡ್ಕರ್ ವಸತಿ ನಿಲಯದಲ್ಲಿ ಕುಡಿಯುವ ನೀರು, ಬಿಸಿನೀರು, ನೈರ್ಮಲ್ಯ ಹಾಗೂ ಊಟದ ಗುಣಮಟ್ಟದ ಕುರಿತು ಸುಧಾರಣೆಯಾಗಬೇಕಿದೆ ಎಂದು ಹಾಸ್ಟೆಲ್‌ಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮುಕ್ತವಾಗಿ ಅಧಿಕಾರಿಗಳ ಗಮನಕ್ಕೆ ತಂದರು.ಜೆ.ಎಚ್.ಪಟೇಲ್ ಬಡಾವಣೆಯ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕಾಲೇಜು ಸಮಯಕ್ಕೆ ಅನುಕೂಲವಾಗುವಂತೆ ಬೆಳಿಗ್ಗೆ 7.30 ಮತ್ತು 8.30 ಬಸ್ ಸೌಲಭ್ಯವಿದ್ದು, ಬಸ್ಸಿನಲ್ಲಿ ಓಡಾಡಲು ಆಗುವುದಿಲ್ಲ, ಎಲ್ಲಾ ವಿದ್ಯಾರ್ಥಿಗಳು ಅದೇ ಸಮಯಕ್ಕೆ ಕಾಲೇಜಿಗೆ ತೆರಳಬೇಕಾಗಿರುವುದರಿಂದ 8.00 ಮತ್ತು 8.30 ಗಂಟೆಗೆ ಹೆಚ್ಚುವರಿಯಾಗಿ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.
ಆಪತ್ಕಾಲದಲ್ಲಿ ಮತ್ತು ತಕ್ಷಣದ ಪೋಲಿಸ್ ರಕ್ಷಣೆಗಾಗಿ 112 ಉಚಿತ ಸಹಾಯವಾಣಿಗೆ ಕರೆ ಮಾಡಬೇಕು, ಮಕ್ಕಳ ನೆರವಿಗಾಗಿ 1098 ಹಾಗೂ ಮಹಿಳೆಯರ ಸುರಕ್ಷತೆಗಾಗಿ 181 ಸಹಾಯವಾಣಿಗಳು ಲಭ್ಯವಿದ್ದು, ಸೈಬರ್ ಕ್ರೈಂ ಗೆ ಸಂಬಂಧಿಸಿದ ವಿಷಯಕ್ಕೆ 1930ಗೆ ಕರೆಮಾಡಿ ಎಂದರು.ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ 16 ಹೊಸ ಹಾಸ್ಟೆಲ್‌ಗಳು ಮಂಜೂರಾಗಿದ್ದು, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಜತೆಗೆ ಬಾಡಿಗೆ ಕಟ್ಟಡಗಳಲ್ಲಿರುವ ಹಾಸ್ಟೆಲ್‌ಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಸರಿಪಡಿಸುವ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಬಿಸಿಎಂ ಅಧಿಕಾರಿ ರೇಣುಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.