ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರನ್ನು ಗುರುತಿಸಿಲ್ಲ: ಬಿಳಿಮಲೆ

| Published : Aug 12 2024, 01:34 AM IST

ಸಾರಾಂಶ

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಡಾ.ಟಿ.ಲಕ್ಷ್ಮೀನಾರಾಯಣ ಅವರ ಐದು ನಾಟಕಗಳನ್ನು ಒಳಗೊಂಡ ‘ಸ್ವಾತಂತ್ರ್ಯ ಸಮರ-ಕರುನಾಡು ಅಮರ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ವಾತಂತ್ರ್ಯ ಹೋರಾಟಕ್ಕೆ ಕೋಟ್ಯಂತರ ಮಹಿಳೆಯರು ತಮ್ಮದೇ ಆದ ಕಾಣಿಕೆ ಸಲ್ಲಿಸಿದ್ದರೂ ಅದು ದಾಖಲೆಯಾಗಿಲ್ಲ. ಹೋರಾಟಗಾರರನ್ನು ಗುರುತಿಸುವಾಗ ಅನುಸರಿಸುವ ಮಾನದಂಡವೇ ತಪ್ಪಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಡಾ.ಟಿ.ಲಕ್ಷ್ಮೀನಾರಾಯಣ ಅವರ ಐದು ನಾಟಕಗಳನ್ನು ಒಳಗೊಂಡ ‘ಸ್ವಾತಂತ್ರ್ಯ ಸಮರ-ಕರುನಾಡು ಅಮರ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಿಟೀಷರಿಂದ ಪತಿಯನ್ನು ರಕ್ಷಿಸಿದ, ಸ್ವಾತಂತ್ರ್ಯ ಹೋರಾಟಗಾರರಿಗೆ ಊಟ ಮಾಡಿ ಬಡಿಸಿದ, ಆಶ್ರಯ ಕಲ್ಪಿಸಿದ, ಪತಿಯ ಅನುಪಸ್ಥಿತಿಯಲ್ಲಿ ಮಕ್ಕಳನ್ನು ಪೋಷಿಸಿದ, ಸಂಸಾರವನ್ನು ಯಶಸ್ವಿಯಾಗಿ ನಿಭಾಯಿಸುವ ಜೊತೆ ಜೊತೆಗೇ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕಾಣಿಕೆ ನೀಡಿದ ಕೋಟ್ಯಂತರ ಮಹಿಳೆಯರು ದೇಶದಲ್ಲಿದ್ದಾರೆ. ಆದರೆ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವಾಗ ಅನುಸರಿಸುವ ಮಾನದಂಡವೇ ಸರಿ ಇಲ್ಲದೇ ಇರುವುದರಿಂದ ಮಹಿಳೆಯರ ತ್ಯಾಗ ದಾಖಲಾಗಿಲ್ಲ ಎಂದು ವಿಷಾದಿಸಿದರು.

ಇತಿಹಾಸ ಮರೆತ ಜನತೆ:

ಇತಿಹಾಸದ ಘಟನೆಗಳ ಬಗ್ಗೆ ಜನತೆ ತಿಳಿದುಕೊಳ್ಳಬೇಕು. ಕಳೆದ ತಲೆಮಾರಿನ ಹೋರಾಟವನ್ನೇ ನಾವು ಮರೆಯುತ್ತಿದ್ದೇವೆ. ಚರಿತ್ರೆಯನ್ನು ಜನರು ತಿಳಿದುಕೊಂಡು ಮುಂದಿನ ತಲೆ ಮಾರಿಗೆ ದಾಟಿಸಬೇಕು. ಆದರೆ ನಾವು ಸ್ವಾತಂತ್ರ್ಯ ಹೋರಾಟದ ಇತಿಹಾಸ ಮರೆತಿದ್ದೇವೆ. ತಿಳುವಳಿಕೆ ಇರಬೇಕೂ ಎಂದೂ ನಮಗೆ ಅನಿಸುತ್ತಿಲ್ಲ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಲೀಲಾ ಸಂಪಿಗೆ ಮಾತನಾಡಿ, ಕೋಟ್ಯಂತರ ಜನರ ಸ್ವಾತಂತ್ರ್ಯ ಹೋರಾಟ ದಾಖಲಾಗಿಲ್ಲ. ನಾವು ಯಾವ ಸ್ವಾತಂತ್ರ್ಯ ಅನುಭವಿಸಬೇಕಿತ್ತೋ ಅದನ್ನು ಅನುಭವಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಕ್ಕಿಂತ ಪ್ರಬಲವಾದ ಹೋರಾಟವನ್ನು ರೂಪಿಸಬೇಕಿದೆ. ಇದಕ್ಕೆ ಸಜ್ಜಾಗೋಣ ಎಂದು ಕರೆ ನೀಡಿದರು.

ಕುಪ್ಪಂ ದ್ರಾವಿಡ ವಿವಿಯ ಪ್ರೊ.ಎಂ.ಎನ್‌.ವೆಂಕಟೇಶ್‌, ನಿವೃತ್ತ ಪೊಲೀಸ್‌ ಅಧಿಕಾರಿ ಡಾ.ಬಿ.ಕೆ.ಶಿವರಾಂ, ಲೇಖಕ ಡಾ.ಟಿ.ಲಕ್ಷ್ಮೀನಾರಾಯಣ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಬಿ.ಎಂ.ಮುತ್ತಯ್ಯ, ಚಿತ್ರ ನಿರ್ದೇಶಕ ಪೃಥ್ವಿ ಕೊಣನೂರು ಮತ್ತಿತರರು ಉಪಸ್ಥಿತರಿದ್ದರು.