ಸಾರಾಂಶ
ಗದಗ: ಪರಿವರ್ತನಶೀಲ ಸಮಾಜಕ್ಕೆ ಸ್ತ್ರೀ ಶಕ್ತಿ ಶಿವ ಶಕ್ತಿಯಾಗಬೇಕಾಗಿದೆ ಎಂದು ಸಮಾಜ ಸೇವಾ ಕಾರ್ಯಕರ್ತೆ ಸುರೇಖಾ ಪಿಳ್ಳಿ ಹೇಳಿದರು.ಇಲ್ಲಿಯ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠ ಶಾಲೆಯ ಬಸವ ಯೋಗ ಕೇಂದ್ರ ಹಾಗೂ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಡೆದ ಮಹಾಶಿವರಾತ್ರಿ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದು ಸ್ತ್ರೀ ಶಕ್ತಿ ಎಲ್ಲ ಕ್ಷೇತ್ರಗಳಲ್ಲೂ ಗೆಲವು ಸಾಧಿಸಿರುವುದು ಸಂತೋಷದ ವಿಷಯವಾಗಿದೆ. ಆದರೆ ಅದೇ ಸ್ತ್ರೀ ಶಕ್ತಿ ಮೇಲೆ ಅತ್ಯಾಚಾರ, ಶೋಷಣೆಗಳಾಗುತ್ತಿರುವ ವಿಷಯ ಮಾಧ್ಯಮಗಳ ಮೂಲಕ ತಿಳಿದಾಗ ವಿಷಾದವೆನಿಸುತ್ತದೆ. ಸ್ತ್ರೀ ಮೇಲಿನ ದೌರ್ಜನ್ಯ, ಶೋಷಣೆಗಳು ದೂರಾಗಬೇಕಾದರೆ ನಾವೆಲ್ಲ ಮುಖ್ಯವಾಗಿ ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿ ತೊರೆದು ಭಾರತೀಯ ಸಂಸ್ಕೃತಿ-ಸಂಸ್ಕಾರಗಳನ್ನು ಪಾಲಿಸಿದ್ದಾದರೆ ಸ್ತ್ರೀ ಶಕ್ತಿ ಒಂದು ಮಹಾನ್ ಶಕ್ತಿಯಾಗಿ ಬೆಳೆಯುವುದು. ಇದರಿಂದ ಸಮಾಜವು ಪರಿವರ್ತನಗೊಂಡು ಪ್ರಗತಿ ಸಾಧಿಸಲು ಸಾಧ್ಯವಾಗುವುದು ಎಂದರು.
ಮಹಿಳೆಯರು ತಮ್ಮ ಬದುಕಿನಲ್ಲಿ ನಿತ್ಯ ಜಾಗ್ರತರಾಗಿದ್ದು, ಸು ವಿಚಾರ, ಸುಸಂಸ್ಕೃತರಾಗಿ ಇರುವುದೇ ಮಹಾಶಿವರಾತ್ರಿಯಾಗಿದೆ ಮತ್ತು ಮಹಿಳೆ ಕೇವಲ ಮನೆಗೆ ಸೀಮಿತವಾಗಿರದೆ ನೆರೆ-ಹೊರೆಯವರ ಹಾಗೂ ಸಮಾಜದ ಏಳಿಗೆಗೆ ಸಹಕರಿಸುವ ಗುರಿ ಹೊಂದಿ, ಆ ಗುರಿ ಸಾಧನೆಯ ಅವಲೋಕನವೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದೆ. ಇಂದು ಮಹಿಳೆಯರಿಗೆ ಸಾಕಷ್ಟು ಸೌಲಭ್ಯಗಳಿವೆ. ಅವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.ಈ ವೇಳೆ ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಹಾಗೂ ಡಾ. ಎಂ.ವಿ. ಐಹೊಳ್ಳಿ ಮಾತನಾಡಿದರು.ಸುನಂದಾ ಜ್ಯಾನೋಪಂತರ ಶಿವ ಸ್ತ್ರೋತ್ರ ಹೇಳಿದರು. ವಿಜಯಾ ಚನ್ನಶೆಟ್ಟಿ ಶಿವರಾತ್ರಿ ಮಹಿಮೆ ತಿಳಿಸಿದರು. ವೀಣಾ ಗೌಡರ ಮಹಿಳೆಯ ಮಹಿಮೆ ತಿಳಿಸುವ ಕವನ ವಾಚನ ಮಾಡಿದರು. ವಿಜಯಲಕ್ಷ್ಮೀ ಆನೇಹೊಸೂರ ಭಕ್ತಿ ಗೀತೆ ಹಾಡಿದರು. ಸಹನಾ ಪಿಳ್ಳಿ ಆರೋಗ್ಯ-ಆಹಾರ ಕುರಿತು ಸುದೀರ್ಘವಾಗಿ ಮಾತನಾಡಿದರು.
ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಜಯಶ್ರೀ ವಸ್ತ್ರದ, ಶೋಭಾ ಭಾಂಡಗೆ, ಮಹಾದೇವಿ ಚರಂತಿಮಠ, ವಿಜಯಲಕ್ಷ್ಮೀ ಉಪವಾಸಿ, ರಾಜೇಶ್ವರಿ ಭಾಂಡಗೆ, ವಿಜಯಲಕ್ಷ್ಮೀ ಮೇಕಳಿ, ಶಕುಂತಲಾ ಬ್ಯಾಳಿ ಇದ್ದರು. ಜಯಶ್ರೀ ದಾವಣಗೆರೆ ಸ್ವಾಗತಿಸಿದರು. ಶಾಂತಾ ಮುಂದಿನಮನಿ ನಿರೂಪಿಸಿದರು. ಸುಲೋಚನಾ ಐಹೊಳ್ಳಿ ವಂದಿಸಿದರು.