ಸಾರಾಂಶ
ಗದಗ ನಗರದಲ್ಲಿ ಅಕ್ರಮ ಬಡ್ಡಿ ದಂಧೆಕೋರರನ್ನು ತಕ್ಷಣವೇ ಗಡಿಪಾರು ಮಾಡುವಂತೆ ಆಗ್ರಹಿಸಿ ಗುರುವಾರ ನೂರಾರು ಮಹಿಳೆಯರು ನಗರದ ಟಿಪ್ಪು ಸುಲ್ತಾನ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗದಗ: ನಗರದಲ್ಲಿ ಅಕ್ರಮ ಬಡ್ಡಿ ದಂಧೆಕೋರರನ್ನು ತಕ್ಷಣವೇ ಗಡಿಪಾರು ಮಾಡುವಂತೆ ಆಗ್ರಹಿಸಿ ಗುರುವಾರ ನೂರಾರು ಮಹಿಳೆಯರು ನಗರದ ಟಿಪ್ಪು ಸುಲ್ತಾನ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಬಡ್ಡಿ ದಂಧೆ (ಮೈಕ್ರೋ ಫೈನಾನ್ಸ್) ವ್ಯಾಪಕವಾಗಿ ಹೆಚ್ಚುತ್ತಿದ್ದು, ಇವುಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಸಹ ಮುಂದಾಗಿರುವುದು ತಮಗೆ ಗೊತ್ತಿರುವ ಸಂಗತಿ. ಗದಗ ಜಿಲ್ಲೆ ವಿಶೇಷವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಹ ಬಡ್ಡಿ ದಂಧೆಕೋರರು ವ್ಯಾಪಕವಾಗಿ ಬೆಳೆದು ನೂರಾರು ಕುಟುಂಬಗಳಿಗೆ ಕಂಟಕ ಪ್ರಾಯರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಇತ್ತೀಚೆಗೆ ಪೊಲೀಸ್ ಇಲಾಖೆ ಸಹ ಇಂಥ ಬಡ್ಡಿ, ದಂಧೆಕೋರರ ಮೇಲೆ ದಾಳಿ ಮಾಡಿ ಅಪಾರ ಅಕ್ರಮ ಸಂಪತ್ತು ವಶಪಡಿಸಿಕೊಂಡಿರುವುದು ರಾಜ್ಯಾದ್ಯಂತ ಸುದ್ದಿಯಾಗಿದೆ. ಆದರೆ ಬಡ್ಡಿ, ಕುಳಗಳ ಜಾಲ ಆಳವಾಗಿ ಈ ಭಾಗದಲ್ಲಿ ನೆಲೆಯೂರಿದ್ದು ಕೆಲವು ಬಾರಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದರೂ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಬಡ್ಡಿ ದಂಧೆಕೋರರಾದ ಸುನೀಲ್ ಶೇಟ್, ಪೂನಮ್ ಶೇಟ್, ಅಶೋಕ್ ಬಾಕಳೆ, ಯಲ್ಲಪ್ಪ ಮಿಸ್ಕಿನ್, ವಿಕಾಸ್ ಮಿಸ್ಕಿನ್, ಈರಣ್ಣ ಅರಸಿದ್ಧಿ, ಶಿವಾನಂದ ಮತ್ತು ಸಹಚರರು ಅನೇಕ ಕುಟುಂಬಗಳ ಪಾಲಿಗೆ ಮುಳ್ಳಾಗಿದ್ದಾರೆ. ಅನೇಕ ಅಸಹಾಯಕ ಮಹಿಳೆಯರು ಸಹ ಇವರ ಶೋಷಣೆಗೆ ನಲುಗಿ ಹೋಗಿದ್ದು ಕೆಲವರು ಇವರ ಕಾಟ ತಾಳಲಾರದೇ ಊರನ್ನೇ ಬಿಟ್ಟು ಹೋಗಿದ್ದಾರೆ. ನಗರದಲ್ಲಿ ಬಡ್ಡಿ ದಂಧೆ ವಿಷಜಾಲವನ್ನು ಬೇರು ಸಮೇತ ಕಿತ್ತು ಹಾಕಲು ಇವರನ್ನು ಗಡಿಪಾರು ಮಾಡಿ ಸೂಕ್ತ ಶಿಕ್ಷೆ ನೀಡಬೇಕು ಹಾಗೂ ಇವರಿಂದ ಶೋಷಣೆಗೆ ಒಳಗಾದವರಿಗೆ ನ್ಯಾಯ ಕೊಡಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.