ಚಂಬು ಹಿಡಿದು ಮಹಿಳೆಯರಿಂದ ಪ್ರತಿಭಟನೆ

| Published : May 04 2025, 01:35 AM IST

ಸಾರಾಂಶ

ಮಳೆ ನೀರು ಮುಂದೆ ಹೋಗದಂತಾಗಿ ನಿಂತಲ್ಲೆ ನಿಲ್ಲುತ್ತಿದೆ. ಇದರಿಂದ ಗಲೀಜು ಉಂಟಾಗಿ ಸೊಳ್ಳೆಗಳು ಹೆಚ್ಚಾಗಿವೆ

ಕನಕಗಿರಿ: ಪಟ್ಟಣದ ೯ನೇ ವಾರ್ಡ್‌ನಲ್ಲಿರುವ ಮಹಿಳೆಯರ ಸಾಮೂಹಿಕ ಶೌಚಾಲಯದಲ್ಲಿ ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳ ಗೂಡಾಗುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಪಂ ಮುಂದೆ ೧೧ ಹಾಗೂ ೧೨ನೇ ವಾರ್ಡ್‌ನ ನಿವಾಸಿಗಳು ಶನಿವಾರ ಚಂಬು ಹಿಡಿದು ಪ್ರತಿಭಟಿಸಿದರು.

೯ನೇ ವಾರ್ಡ್‌ನಲ್ಲಿ ಶೌಚಾಲಯಕ್ಕೆ ಮಹಿಳೆಯರು ಹೋಗದಂತಾಗಿದೆ. ಮಳೆ ನೀರು ಮುಂದೆ ಹೋಗದಂತಾಗಿ ನಿಂತಲ್ಲೆ ನಿಲ್ಲುತ್ತಿದೆ. ಇದರಿಂದ ಗಲೀಜು ಉಂಟಾಗಿ ಸೊಳ್ಳೆಗಳು ಹೆಚ್ಚಾಗಿವೆ. ಶೌಚಾಲಯವಿಲ್ಲದ ಮನೆಗಳ ಮಹಿಳೆಯರು ಮಾತ್ರ ಇಲ್ಲಿಗೆ ಶೌಚ ಮಾಡಲು ಬರುತ್ತಾರೆ. ಹೀಗೆ ಬಂದ ಮಹಿಳೆಯರು ಶೌಚ ಮಾಡದಂತ ದುಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲೂ ಶೌಚ ಮಾಡಲು ಜಾಗೆ ಇಲ್ಲ.ಸಾಮೂಹಿಕ ಶೌಚಾಲಯದಲ್ಲಿ ಈ ಪರಿಸ್ಥಿತಿ ಹೀಗಾದರೆ ಮಹಿಳೆಯರು ಏನು ಪರಿಸ್ಥಿತಿ ಹೇಗೆ? ಎಂದು ವಾರ್ಡ್‌ನ ನಿವಾಸಿಗಳಾದ ವಿರೂಪಮ್ಮ ಬೇರಿಗಿ, ರುದ್ರಮ್ಮ ತೆಗ್ಗಿನಮನಿ, ನಾರಾಯಣಮ್ಮ ಚಿತ್ರಿಕಿ ದೂರಿದರು.

ಮುಖಂಡ ಹನುಮಂತರೆಡ್ಡಿ ಮಾತನಾಡಿ, ಮಹಿಳೆಯರು ಶೌಚ ಮಾಡಲು ಹರಸಾಹಸ ಪಡುತ್ತಿದ್ದಾರೆ. ಕೆಲವೇ ಕೆಲವು ಫಲಾನುಭವಿಗಳಿಗೆ ಮಾತ್ರ ಶೌಚಾಲಯ ನಿರ್ಮಿಸಿಕೊಂಡಿರುವ ಹಣ ನೀಡಲಾಗಿದೆ. ಸಧ್ಯ ಶೌಚಾಲಯ ನಿರ್ಮಿಸಿಕೊಳ್ಳಲು ಇಚ್ಛಿಸುವ ಫಲಾನುಭವಿಗಳಿಗೆ ಅನುದಾನ ನೀಡುತ್ತಿಲ್ಲ. ಕೆಲ ನಿವಾಸಿಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗೆ ಕೊರತೆಯಿಂದ ಸಾಮೂಹಿಕ ಶೌಚಾಲಯಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಮುಖ್ಯಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಮಹಿಳೆಯರ ಶೌಚಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ, ೯ನೇ ವಾರ್ಡ್‌ನ ಸಾಮೂಹಿಕ ಶೌಚಾಲಯ ಸ್ವಚ್ಛತೆಗೆ ತಕ್ಷಣವೇ ಕ್ರಮ ವಹಿಸಲಾಗುವುದು. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಪಪಂ ಅನುದಾನ ನೀಡಿದೆ. ಹೊಸದಾಗಿ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೂ ಅನುದಾನ ನೀಡಲಾಗುವುದು. ಶುದ್ಧೀಕರಿಸಿದ ನೀರಿನ ಘಟಕಗಳಲ್ಲಿ ಕೆಲ ತಾಂತ್ರಿಕ ಮತ್ತು ವೊಲ್ಟೆಜ್ ಇಲ್ಲದ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಈ ಕುರಿತು ಪರಿಶೀಲಿಸಿ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.

ರಾಮಲಿಂಗಮ್ಮ ಚಿತ್ರಿಕಿ, ರಾಜಮ್ಮ ಕೊರೆಡ್ಡಿ, ಸುಮಂಗಲಮ್ಮ ಆರೇರ, ಶಿವಮ್ಮ ಆರೇರ್, ಈರಮ್ಮ, ಯಮನಮ್ಮ, ರತ್ನಮ್ಮ, ರೇಣುಕಮ್ಮ, ಪದ್ಮಾವತಿ ಮಹಿಪತಿ ಸೇರಿದಂತೆ ಇತರರಿದ್ದರು.

ವಿವಿಧ ವಾರ್ಡ್‌ಗಳಲ್ಲಿರುವ ಶುದ್ಧ ಕುಡಿಯವ ನೀರಿನ ಘಟಕದಲ್ಲಿ ವಿದ್ಯುತ್ ವೊಲ್ಟೆಜ್ ಸಮಸ್ಯೆಯಿಂದ ನೀರಿನ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಹಾಕಿದ ೫ ನಾಣ್ಯಕ್ಕೆ ೨೨ಲೀಟರ್ ಬರಬೇಕು.ಆದರೆ, ಕೆಲವು ಬಾರಿ ೧೦ ಲೀಟರ್ ಸಹ ಬರುವುದಿಲ್ಲ. ಬೇಸಿಗೆಯಾಗಿರುವುದರಿಂದ ಈ ಸಮಸ್ಯೆ ಉಲ್ಬಣಿಸಿದ್ದು, ತಕ್ಷಣಕ್ಕೆ ಸರಿಪಡಿಸಬೇಕು ಎಂದು ರೈತ ಮುಖಂಡ ಗಣೇಶರೆಡ್ಡಿ ಹೇಳಿದ್ದಾರೆ.