ದೇಶದ ಉನ್ನತಿಗೆ ಮಹಿಳೆಯರ ಪಾತ್ರ ಪ್ರಮುಖವಾದುದು: ವಿವೇಕ್ ಆಳ್ವ

| Published : Nov 22 2024, 01:16 AM IST

ಸಾರಾಂಶ

ಮಂಗಳೂರು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಮನೋವಿಜ್ಞಾನ ಉಪನ್ಯಾಸಕಿ ಸಾರ ಕ್ರಾಸ್ತ ‘ವಿದ್ಯಾರ್ಥಿನಿಯರಲ್ಲಿ ಮಾನಸಿಕ ಯೋಗಕ್ಷೇಮ’ ಕುರಿತು ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕೆಲವು ದೇಶಗಳು ಆರ್ಥಿಕವಾಗಿ ಹಿಂದುಳಿಯಲು ಮಹಿಳಾ ಉದ್ಯೋಗಿಗಳ ಪ್ರಮಾಣ ಕಡಿಮೆ ಇರುವುದು ಪ್ರಮುಖ ಕಾರಣವಾಗಿದೆ. ಯಾವುದೇ ದೇಶ ಅಥವಾ ಸಂಸ್ಥೆ ಉನ್ನತಿಯನ್ನು ಕಾಣಲು ಮಹಿಳೆಯರ ಪಾತ್ರ ಮುಖ್ಯ. ಮಹಿಳೆಯರು ವಿವಿಧ ವೃತ್ತಿರಂಗಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಘಟಕ ‘ಸಕ್ಷಮ’ದ ವತಿಯಿಂದ ನಡೆದ ಮಹಿಳಾ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ‘ಎಂಪವರ್‌ಹರ್’ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಡಾ.ಪಿ ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ವೃತ್ತಿ ಜೀವನದ ಸಮತೋಲನ ಮತ್ತು ವೃತ್ತಿ ಜೀವನದಲ್ಲಿ ಮಹಿಳೆಯರ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಗೃಹಿಣಿಯರಿಗೆ ಮತ್ತು ಮಹಿಳಾ ಉದ್ಯೋಗಿಗಳಿಗೆ ಹೋಲಿಸಿದರೆ ಮಹಿಳಾ ಉದ್ಯೋಗಿಗಳು ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಿರುತ್ತಾರೆ. ಮಹಿಳಾ ಉದ್ಯೋಗಿಗಳ ಮಾನಸಿಕ ಆರೋಗ್ಯವು ಸಂಸ್ಥೆಯ ಏಳಿಗೆಯ ಮೇಲೂ ಪರಿಣಾಮ ಬೀರಬಲ್ಲದು. ಮಹಿಳೆಯರಿಗೆ ವೃತ್ತಿ ಜೀವನ ಮತ್ತು ಕೌಟುಂಬಿಕ ಜೀವನವನ್ನು ಜೊತೆಯಲ್ಲೇ ಸಂಭಾಳಿಸಲು ಕಷ್ಟವಾದಾಗ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ನಾವು ವೃತ್ತಿಯನ್ನು ನಿರ್ವಹಿಸುವ ರೀತಿಯಲ್ಲಿ ನಮ್ಮ ಮಾನಸಿಕ ಆರೋಗ್ಯ ನಿರ್ಧಾರವಾಗುತ್ತದೆ. ನಾವು ಮಾಡುವ ಕೆಲಸವನ್ನು ಖುಷಿಯಿಂದ ನಿರ್ವಹಿಸಿದಾಗ ಮಾನಸಿಕ ಸಮಸ್ಯೆಗಳು ತಗ್ಗುತ್ತದೆ ಎಂದರು. ಸಿಟ್ಟು, ಬೇಸರ, ದ್ವೇಷ, ಅಸಹನೆ, ಕೀಳರಿಮೆಗಳಂತಹ ಭಾವನೆಗಳು ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಭಾವನೆಗಳ ನಿಯಂತ್ರಣದಿಂದ ಸಂತೋಷದಾಯಕ ಜೀವನ ಸಾಧ್ಯ ಎಂದರು.

ಮಂಗಳೂರು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಮನೋವಿಜ್ಞಾನ ಉಪನ್ಯಾಸಕಿ ಸಾರ ಕ್ರಾಸ್ತ ‘ವಿದ್ಯಾರ್ಥಿನಿಯರಲ್ಲಿ ಮಾನಸಿಕ ಯೋಗಕ್ಷೇಮ’ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಕ್ಷಮ ಮಹಿಳಾ ಘಟಕದ ಮಾಸಿಕ ಇ -ಪೋಸ್ಟರ್ ‘ಶಿರೋಸ್’ ಬಿಡುಗಡೆ ಮಾಡಲಾಯಿತು.

ಆಳ್ವಾಸ್‌ ಫಾರ್ಮಸಿಯ ಮುಖ್ಯ ನಿರ್ವಾಹಕಿ ಡಾ. ಗ್ರೀಷ್ಮ ಆಳ್ವ, ಮೂಡಬಿದಿರೆಯ ಮಹಿಳಾ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷೆ ಶೋಭಾ ಹೆಗ್ಡೆ, ಸಕ್ಷಮ ಘಟಕದ ಅಧ್ಯಕ್ಷೆ ಡಾ. ಮೂಕಾಂಬಿಕಾ ಮತ್ತಿತರರು ಇದ್ದರು. ಪದವಿ ಪೂರ್ವ ಕಾಲೇಜಿನ ಅಧ್ಯಾಪಕಿ ಮಲ್ಲಿಕಾ ಎಂ.ಆರ್. ನಿರೂಪಿಸಿದರು. ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಉಪ ಪ್ರಾಂಶುಪಾಲೆ ವನಿತಾ ವಂದಿಸಿದರು.