ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಅವರು ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಹಿಳಾ ಸಂವಾದ ಸಮಾರಂಭದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಸಾರ್ವಜನಿಕರಿಂದ ಸ್ವೀಕೃತವಾದ ದೂರರ್ಜಿಗಳನ್ನು ಶುಕ್ರವಾರ ಸ್ವೀಕರಿಸಿದರು.ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಹಿಳಾ ಸ್ಪಂದನಾ ಕಾರ್ಯಕ್ರಮ, ಮಹಿಳಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಪೋಷಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷೆ ಕಾರ್ಯಕ್ರಮಕ್ಕೆ ಬಾರದ ಡಿಸಿ, ಜಿಪಂ ಹಾಗೂ ಎಸ್ಪಿ ಮತ್ತಿತರ ಅಧಿಕಾರಿಗಳ ನಡೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರ ಸಮಸ್ಯೆಗಳ ಅಹವಾಲು ಸ್ವೀಕರಿಸಲಾಗಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅವುಗಳಿಗೆ ಸ್ಪಂದಿಸಿ ಪರಿಹರಿಸುವ ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಗಳು ಇಲ್ಲದೇ ಇರುವುದು ತರವಲ್ಲವೆಂದು ಸಿಟ್ಟಿಗೆದ್ದರು. 15 ದಿನದೊಳಗೆ ವರದಿ ನೀಡಲು ಸೂಚನೆ: ಸ್ವೀಕೃತವಾದ ದೂರು ಅರ್ಜಿಗಳನ್ನು ಆಯಾ ಇಲಾಖೆಯ ಆಯುಕ್ತರಿಗೆ ಕಳುಹಿಸಲಾಗುವುದು. ಈ ಸಂಬಂಧ ಆಯಾ ಇಲಾಖೆಗಳು ಸಹ 15 ದಿನಗಳೊಳಗೆ ವರದಿ ಕಳುಹಿಸಲು ಸೂಚಿಸಲಾಗಿದೆ ಎಂದು ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಜಿಲ್ಲೆಯಲ್ಲಿ ಕುಬ್ಜ ಮಕ್ಕಳ ಸಂಖ್ಯೆ ಹಾಗೂ ಅಪೌಷ್ಠಿಕತೆ, ರಕ್ತಹೀನತೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ದೂರುಗಳು ಬಂದಿವೆ. ಕಾರ್ಖಾನೆ ನೀರು ನದಿಗೆ, ಜಮೀನಿಗೆ ಹರಿದು ಕಲುಷಿತ ವಾಗುತ್ತಿದೆ. ಯರಮರಸ್ ಸುತ್ತಲಿನ ಪ್ರದೇಶದಲ್ಲಿ ಪರಿಸರ ಮಾಲಿನ್ಯವಾಗಿದೆ ಎಂದು ದೂರುಗಳು ಬಂದಿವೆ. ಇದಕ್ಕೆ ನೀವೇನು ಮಾಡಿದ್ದೀರಿ ಸಂವಾದದ ವೇಳೆ ಅಧಿಕಾರಿಗಳಿಗೆ ಕೇಳಿ ಅರ್ಜಿದಾರರಿಗೆ ಸ್ಪಂದನೆ ನೀಡಲಾಗಿದೆ. ಇದು ಇಲ್ಲಿಗೆ ಮುಕ್ತಾಯವಾಗದು. ಅಧಿಕಾರಿಗಳು ಜನರ ಬಳಿ ಹೋಗಬೇಕು. ಜಾಗೃತಿ ಮೂಡಿಸಬೇಕು. ಜನತೆಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಎಲ್ಲ ಕಚೇರಿಗಳ ಗೋಡೆಗಳ ಮೇಲೆ ಮಹಿಳಾ ಸಹಾಯವಾಣಿ ಸಂಖ್ಯೆಯನ್ನು ಬರೆಯಿಸಲು ಎಲ್ಲ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಪರಿಶೀಲಿಸಲಾಗುವುದು. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಮಹಿಳಾ ಗ್ರಾಮ ಸಭೆಗಳನ್ನು ಕಡ್ಡಾಯ ನಡೆಸಲು ಮಾನ್ಯ ಮುಖ್ಯಮಂತ್ರಿಗಳು ಸೂಚಿಸಿದ್ದು, ರಾಯಚೂಉ ಜಿಲ್ಲೆಯಲ್ಲಿ ಈ ಕ್ರಮವಾಗಿದೆಯಾ ಎಂಬುದರ ಬಗ್ಗೆ ಪರಿಶೀಲಿಸಲಾ ಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಸ್ಪಿ ಪುಟ್ಟಮಾದಯ್ಯ ಎಂ., ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಸೇರಿ ಇತರರು ಇದ್ದರು.