ಮಹಿಳಾ ದಿನಾಚರಣೆ ಬರೀ ಆಚರಣೆಯಲ್ಲ ಜಾಗೃತಿ, ಸಮಾನತೆಯ ಸಂಕೇತ

| Published : Mar 20 2025, 01:16 AM IST

ಮಹಿಳಾ ದಿನಾಚರಣೆ ಬರೀ ಆಚರಣೆಯಲ್ಲ ಜಾಗೃತಿ, ಸಮಾನತೆಯ ಸಂಕೇತ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ದಿನಾಚರಣೆ ಕೇವಲ ಆಚರಣೆಯಲ್ಲ ಅದೊಂದು ಅರಿವು, ಜಾಗೃತಿ, ಸಮಾನತೆಯ ಸಂಕೇತವಾಗಿದ್ದು ಮಹಿಳೆಯು ಸಮುದಾಯದ ಸಂವೇದನೆಯನ್ನು ಉಳಿಸಿಕೊಂಡು ಮರುಸೃಷ್ಟಿಯ ಕಡೆಗೆ ಹೋಗಬೇಕೆಂಬುದನ್ನು ಸೂಚಿಸುವ ದಿನ ಎಂದು ನಗರದ ಕಲ್ಪತರು ಕಾಲೇಜಿನ ಉಪ ಪ್ರಾಂಶುಪಾಲರಾದ ಗೀತಾಲಕ್ಷ್ಮಿ ತಿಳಿಸಿದರು

ಕನ್ನಡಪ್ರಭ ವಾರ್ತೆ ತಿಪಟೂರು

ಮಹಿಳಾ ದಿನಾಚರಣೆ ಕೇವಲ ಆಚರಣೆಯಲ್ಲ ಅದೊಂದು ಅರಿವು, ಜಾಗೃತಿ, ಸಮಾನತೆಯ ಸಂಕೇತವಾಗಿದ್ದು ಮಹಿಳೆಯು ಸಮುದಾಯದ ಸಂವೇದನೆಯನ್ನು ಉಳಿಸಿಕೊಂಡು ಮರುಸೃಷ್ಟಿಯ ಕಡೆಗೆ ಹೋಗಬೇಕೆಂಬುದನ್ನು ಸೂಚಿಸುವ ದಿನ ಎಂದು ನಗರದ ಕಲ್ಪತರು ಕಾಲೇಜಿನ ಉಪ ಪ್ರಾಂಶುಪಾಲರಾದ ಗೀತಾಲಕ್ಷ್ಮಿ ತಿಳಿಸಿದರು. ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಕಲ್ಪತರು ಮಹಿಳಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಇಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬಂದು ಹೊಸ ಕುತೂಹಲ, ಹೊಸ ಹುಡುಕಾಟ, ಆಲೋಚನೆಯೊಂದಿಗೆ ಸಮಾಜದಲ್ಲಿ ತಮ್ಮ ಇರುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕಿದೆ. ಮಹಿಳೆಯರಲ್ಲಿ ಆತ್ಮಸ್ಥೈರ್ಯ, ಸ್ವಾವಲಂಬನೆ, ಪುರುಷ ಪ್ರಧಾನ ಸಮಾಜದೊಂದಿಗೆ ಮಹಿಳೆ ಹೇಗೆ ಬದುಕು ಕಟ್ಟಿಕೊಂಡು ಸ್ವಾತಂತ್ರ್ಯಗಳಾಗಿ ಜೀವಿಸಬೇಕೆಂಬ ಪರಿಕಲ್ಪನೆಯನ್ನು ಮಹಿಳೆಯರಲ್ಲಿ ತುಂಬಬೇಕೆಂಬ ದೃಷ್ಟಿಯಿಂದ ಹಿಂದಿನಿಂದಲೂ ಮಹಿಳಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಆಚರಣೆ ಕೇವಲ ಆಡಂಬರವಾಗದೆ ತನ್ನನ್ನು ತಾನು ಜಾಗೃತಗೊಳಿಸಿಕೊಂಡು ಅಂತರಂಗದ ಬೆಳಕನ್ನು ಕಸಿದುಕೊಳ್ಳದೆ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ವೀರಶೈವ ಲಿಂಗಾಯತ ಸಮಾಜದಲ್ಲಿ ಶತಶತ ಮಾನಗಳ ಹಿಂದೆಯೇ ಮಹಿಳೆಗೆ ಸ್ವಾತಂತ್ರ್ಯ ಕೊಡುವ ಮೂಲಕ ಮುಖ್ಯವಾಹಿನಿಗೆ ತಂದಿರುವುದಕ್ಕೆ ನಾವು ಧನ್ಯವಾದ ಹೇಳಬೇಕಿದೆ. ಹಿಂದೆ ಅನುಭವ ಮಂಟಪದಲ್ಲಿಯೂ ಅಕ್ಕಮಹಾದೇವಿ ಸೇರಿ ಹಲವರು ಸಹ ಇದ್ದರೆಂದು ಹೇಳಲಾಗುತ್ತದೆ. ಅಲ್ಲಿಂದ ಇಲ್ಲಿನವರೆಗೂ ಸಹ ಮಹಿಳೆ ಶಕ್ತಿಯುತವಾಗಿ ಮುನ್ನಡೆದಿರುವುದು ಸಹ ಹೆಮ್ಮೆಯ ವಿಷಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಸಾವಿತ್ರಿ ಸ್ವಾಮಿ ಮಾತನಾಡಿ, ಮಹಿಳೆ ಹುಟ್ಟುತ್ತಲೇ ತ್ಯಾಗ, ಸಮಾಜ ಮುಖಿಯಾಗಿದ್ದು, ಪ್ರತಿ ಮಹಿಳೆಯರಲ್ಲೂ ಆತ್ಮಸ್ಥೈರ್ಯ, ಸ್ವಾಭಿಮಾನದ ಛಲ ಇದ್ದು, ಸಾಧಿಸಿ ತೋರುವ ಆತ್ಮವಿಶ್ವಾಸ ಅವರಲ್ಲಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೂ ಅವರಿಗೆ ಪ್ರೋತ್ಸಾಹ ನೀಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ದೌರ್ಜನ್ಯ ದಬ್ಬಾಳಿಕೆಗಳು ಇಂದಿಗೂ ನಡೆಯುತ್ತಿವೆ. ಎಷ್ಟೋ ಮಹಿಳೆಯರು ಸಮಾಜದ ಸೇವೆಗಾಗಿ ತಮ್ಮ ಜೀವನವನ್ನೆ ಸಮರ್ಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೆಣ್ಣಿಗೆ ಗೌರವ, ಪ್ರೋತ್ಸಾಹ, ಸಹಕಾರ ನೀಡುವುದನ್ನು ಕಲಿಯಬೇಕಿದೆ ಎಂದರು. ಈ ಸಂದರ್ಭದಲ್ಲಿ ರಾಜೀವ್‌ಗಾಂಧಿ ವಿಶ್ವವಿದ್ಯಾನಿಲಯದಲ್ಲಿ ಎಂಡಿಎಸ್‌ನಲ್ಲಿ ಚಿನ್ನದ ಪದಕ ಪಡೆದ ಡಾ. ಎಂ.ಎಸ್.ಪ್ರಗತಿರನ್ನು ಸನ್ಮಾನಿಸಲಾಯಿತು. ನಂತರ ಕವಿತಾ, ಮೋನಿಕಾರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುಧಾ, ಉಮಾನಾರಾಯಣಗೌಡ, ಖಜಾಂಚಿ ಸರೋಜ, ಕ್ರೀಡಾ ಕಾರ್ಯದರ್ಶಿ ನಾಗಲ, ವನಜಾ, ಪ್ರವಾಸ ಕಾರ್ಯದರ್ಶಿ ಪ್ರಭಾ ವಿಶ್ವನಾಥ್, ನಿರ್ದೇಶಕರಾದ ಸ್ವರ್ಣಗೌರಿ, ಭಾಗ್ಯಮೂರ್ತಿ, ರಶ್ಮಿ, ವೇದಸುರೇಶ್, ಪ್ರೇಮ, ರೇಖಾಅನೂಪ್, ಜಯತಂಡಗ, ಆಶಾಮಂಜುನಾಥ್, ಸುಮಂಗಲ, ಜಯಶೀಲ, ಲತಾಮೂರ್ತಿ, ಜಮುನಾ ಮತ್ತಿತರರಿದ್ದರು.