ಹೆಣ್ಣಿನ ಪರಿಶ್ರಮವೇ ದೇಶದ ಶಕ್ತಿಯಾಗಿದೆ: ಚನ್ನಬಸಪ್ಪ

| Published : Nov 02 2023, 01:01 AM IST

ಹೆಣ್ಣಿನ ಪರಿಶ್ರಮವೇ ದೇಶದ ಶಕ್ತಿಯಾಗಿದೆ: ಚನ್ನಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಚಿತ್ರದುರ್ಗ, ದಾವಣಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಮಾಜಮುಖಿ ಕೆಲಸಗಳ ಮೂಲಕವೇ ಆರ್ಯವೈಶ್ಯ ಸಮಾಜದ ಮಹಿಳಾ ವಿಭಾಗವು ರಾಜ್ಯದಲ್ಲಿಯೇ ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು. ಅಖಿಲ ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾ ಹಾಗೂ ವಾಸವಿ ಮಹಿಳಾ ಸಂಘ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಚಿತ್ರದುರ್ಗ, ದಾವಣಗೆರೆ ಈ ಐದು ಜಿಲ್ಲೆಗಳ ಆರ್ಯವೈಶ್ಯ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ವಾಸವಿ ಯುವಜನ ಸಮಾಜ, ವಾಸವಿ ಮಹಿಳಾ ಸಂಘ ಸೇರಿದಂತೆ ಈ ಸಮಾಜದ ಎಲ್ಲ ಸಂಘಟನೆಗಳ ಧ್ಯೇಯೋದ್ದೇಶ ಸಮಾಜ ಸೇವೆಯೇ ಆಗಿದೆ. ಸಮಾಜಮುಖಿಯಾಗಿ ಕೆಲಸದ ಜೊತೆಗೆ ದೇಶಭಕ್ತಿಯ ಕೆಲಸಗಳನ್ನು ಕೂಡ ವಾಸವಿ ಮಹಿಳಾ ಸಂಘ ಮಾಡುತ್ತಿದೆ ಎಂದು ಶ್ಲಾಘಿಸಿದರು. ಮಹಿಳಾ ಸಂಘ ಎಂಬುದು ಒಂದರ್ಥದಲ್ಲಿ ಸೇವಾ ಕೇಂದ್ರವಾಗಿದೆ. ಇಂತಹ ಎಲ್ಲ ಕೆಲಸಗಳಿಗೆ ಸಮಾಜದ ಹಿರಿಯರ ಸಹಕಾರ ಇರುವುದು ಶ್ಲಾಘನೀಯ. ಹೆಣ್ಣಿನ ಪರಿಶ್ರಮವೇ ದೇಶದ ಶಕ್ತಿಯಾಗಿದೆ. ಕುಟುಂಬದ ಕಣ್ಣಾಗಿ ಕೆಲಸ ಮಾಡುವ ಹೆಣ್ಣಿನ ಸಾಮರ್ಥ್ಯ, ಶ್ರಮ ಅತ್ಯಂತ ಮಹತ್ವದ್ದು. ಎಲ್ಲಿ ಹೆಣ್ಣಿಗೆ ಗೌರವ ಸಿಗುತ್ತದೋ, ಅಲ್ಲಿ ನೆಮ್ಮದಿ ಇರುತ್ತದೆ. ಆರ್ಯವೈಶ್ಯ ಮಹಿಳಾ ಮಹಾಸಭಾವು ಹೆಣ್ಣಿಗೆ ಘನತೆ ತಂದುಕೊಡುವ ಕೆಲಸ ಮಾಡಿದೆ ಎಂದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಯೋಜನೆಗಳ ಕಿರುಪತ್ರ ಬಿಡುಗಡೆ ಮಾಡಿ ಮಾತನಾಡಿ, ಶಿವಮೊಗ್ಗದ ವಾಸವಿ ಮಹಿಳಾ ಸಂಘವು ಬಹಳ ಹಿಂದಿನ ದಿನಗಳಿಂದಲೇ ವೈಚಾರಿಕತೆಯನ್ನು ಮಹಿಳೆಯರಲ್ಲಿ ಬೆಳೆಸಿದೆ. 70- 80ರ ದಶಕದಲ್ಲಿದ್ದ ಅನೇಕ ಅನಿಷ್ಟ ಪದ್ಧತಿಗಳನ್ನು ಬಿಡಿಸಲು ಈ ಸಂಘಟನೆ ಸಾಕಷ್ಟು ಶ್ರಮ ವಹಿಸಿ ಯಶಸ್ವಿಯಾಗಿದೆ. ಹಾಗೆಯೇ ಮುಷ್ಟಿಅಕ್ಕಿ ಯೋಜನೆ ಮೂಲಕ ಬಡವರಿಗೆ ಅನ್ನ ದಾನ ಮಾಡುವ ಕಾರ್ಯಕ್ರಮವನ್ನು ಕೂಡ ಹಾಕಿಕೊಂಡು ರಾಜ್ಯದ ಗಮನ ಸೆಳೆದಿದೆ ಎಂದು ಹೇಳಿದರು. ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಬೇಕಾಗಿದ್ದು, ವಾಸವಿ ಮಹಿಳಾ ಸಂಘ ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಮಾಡುತ್ತಿರುವುದು ಸಂತೋಷದ ವಿಚಾರ. ಕೇಂದ್ರ ಸರ್ಕಾರದ ರಾಜಕೀಯವಾಗಿ ಮಹಿಳೆಯರಿಗೆ ಶೇ.22ರಷ್ಟು ಮೀಸಲಾತಿ ನೀಡಲು ಮುಂದಾಗಿದೆ. ಇದರ ಪ್ರಯೋಜನವನ್ನು ನಮ್ಮ ಸಮಾಜದ ಮಹಿಳೆಯರು ಸೇರಿದಂತೆ ಎಲ್ಲರೂ ಬಳಸಿಕೊಳ್ಳಬೇಕಿದೆ. ಹಾಗೆಯೇ ನಮ್ಮ ನಿಗಮದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವೆಲ್ಲವೂ ಮಹಿಳೆಯರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು. ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ರಾಧಿಕಾ ಜಗದೀಶ್, ಅಖಿಲ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷೆ ಸುಧಾಮೂರ್ತಿ, ಪದಾಧಿಕಾರಿಗಳಾದ ಅರುಣ, ವಿದ್ಯಾ, ಶಕುಂತಲಾ, ರಂಜನಾ, ವಿಜಯಾ ದತ್ತಕುಮಾರ್, ಗೀತಾ, ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಎಸ್.ಕೆ. ಶೇಷಾಚಲ, ಅಶ್ವತ್ಥನಾರಾಯಣ ಶೆಟ್ಟಿ, ದತ್ತಕುಮಾರ್, ಅರವಿಂದ್ ಮುಂತಾದವರಿದ್ದರು. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಮಹಿಳೆಯರು ಪಾಲ್ಗೊಂಡಿದ್ದರು. - - - -ಫೋಟೋ: ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಐದು ಜಿಲ್ಲೆಗಳ ಆರ್ಯವೈಶ್ಯ ಮಹಿಳಾ ಸಮಾವೇಶವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು.