ವೈದ್ಯರೊಂದಿಗೆ ಅನಾರೋಗ್ಯದ ಬಗ್ಗೆ ಯಾವುದನ್ನು ಮುಚ್ಚಿಡಬೇಡಿ. ಮುಜುಗರ ಬಿಟ್ಟು ಮುಕ್ತ ಮನಸ್ಸಿನಿಂದ ಮಾಹಿತಿ ನೀಡಿ, ಸಂವಾದ ನಡೆಸುವಂತೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ಮತ್ತು ಮಹಿಳಾ ಸಿಬ್ಬಂದಿ ಪ್ರಶ್ನೆಗಳಿಗೆ ಉತ್ತರಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ ಹೆಣ್ಣು ಮಕ್ಕಳು ಸೃಷ್ಟಿಯ ಶಕ್ತಿ, ಅವರು ಆರೋಗ್ಯವಾಗಿದ್ದರೆ ಇಡೀ ಸಮಾಜವೇ ಆರೋಗ್ಯವಾಗಿರುತ್ತದೆ. ಆ ಕಾರಣದಿಂದ ಪ್ರತಿಯೊಬ್ಬ ಹೆಣ್ಣುಮಗಳು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸದಾ ಜಾಗೃತಿ ವಹಿಸಬೇಕು ಎಂದು ಜನತಾ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು, ಆಕೃತಿ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಆರೋಗ್ಯವೇ ಭಾಗ್ಯ ಎನ್ನುವ ನಾಣ್ಣುಡಿಯಂತೆ ಎಲ್ಲರ ಆರೋಗ್ಯ ರಕ್ಷಣೆಯಾಗಬೇಕಿದೆ. ರೋಗಗಳು ಬಾರದಂತೆ ಜಾಗೃತಿ ವಹಿಸುವುದು ಉತ್ತಮ. ಸ್ವಚ್ಛತೆ ಮತ್ತು ಆರೋಗ್ಯ ಬಗ್ಗೆ ಎಲ್ಲರಿಗೂ ಕಾಳಜಿ ಇರಬೇಕು. ಫಾಸ್ಟ್‌ಫುಡ್- ಜಂಕ್‌ಫುಡ್‌ಗಳಿಂದ ದೂರವಿದ್ದು ತರಕಾರಿ, ಸೊಪ್ಪು, ಹಣ್ಣುಗಳನ್ನು ಸೇವಿಸುವುದರೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡುವಂತೆ ತಿಳಿಸಿದರು.
ಪುರುಷರಿಗಿಂತ ಹೆಣ್ಣು ಮಕ್ಕಳು, ಮಹಿಳೆಯರು ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಲವರು ಅಂಜಿಕೆಯಿಂದ ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳದೆ ಒಳಗೊಳಗೆ ಅನುಭವಿಸುತ್ತಿರುತ್ತಾರೆ. ಮುಂದೆ ಅದು ಜೀವಕ್ಕೇ ಅಪಾಯವನ್ನು ಉಂಟುಮಾಡುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ವೈದ್ಯರೊಂದಿಗೆ ಹಂಚಿಕೊಂಡು ಆರೋಗ್ಯ ಸಮಸ್ಯೆಗಳಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆದು ಸುಖಮಯ ಜೀವನ ನಡೆಸುವಂತೆ ತಿಳಿಸಿದರು.ಆಕೃತಿ ಆಸ್ಪತ್ರೆಯ ವೈದ್ಯರಾದ ಡಾ. ಸುಹಾಸ್, ಡಾ.ಸೋನಾಲಿ, ಡಾ ಶ್ರುತಿ ಇವರುಗಳು ಸಮಾಜದ ಹೆಣ್ಣು ಮಕ್ಕಳ ಆರೋಗ್ಯ ಕಾಳಜಿಯಿಂದ ಹೀಗೆ ಉಚಿತವಾಗಿ ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಇಲ್ಲಿ ಬಂದು ಆರೋಗ್ಯ ಅಭಿಯಾನವನ್ನು ಯಶಸ್ವಿಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಪ್ಲಾಸ್ಟಿಕ್ ಸರ್ಜರಿ ತಜ್ಞೆ ಡಾ.ಸೋನಾಲಿ ಉಚ್ಚಿಲ್ ಮಾತನಾಡಿ, ಮಹಿಳೆಯರು ಈ ದಿನಮಾನಗಳಲ್ಲಿ ಅನುಭವಿಸುತ್ತಿರುವ ಬಹುತೇಕ ಅನಾರೋಗ್ಯದ ವಿಚಾರವಾಗಿ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.ವೈದ್ಯರೊಂದಿಗೆ ಅನಾರೋಗ್ಯದ ಬಗ್ಗೆ ಯಾವುದನ್ನು ಮುಚ್ಚಿಡಬೇಡಿ. ಮುಜುಗರ ಬಿಟ್ಟು ಮುಕ್ತ ಮನಸ್ಸಿನಿಂದ ಮಾಹಿತಿ ನೀಡಿ, ಸಂವಾದ ನಡೆಸುವಂತೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ಮತ್ತು ಮಹಿಳಾ ಸಿಬ್ಬಂದಿ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಪಿಇಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ನೀಲಕಂಠ, ಉಪ ಪ್ರಾಂಶುಪಾಲ ಡಾ.ಎಸ್. ಕೆ. ವೀರೇಶ್, ಮಹಿಳಾ ಕುಂದು ಕೊರತೆ ಸಮಿತಿಯ ಸಂಚಾಲಕಿ ಡಾ. ಎಸ್.ಶ್ರುತಿ, ಉಪನ್ಯಾಸಕರು ಮತ್ತು ಸಮಸ್ತ ಮಹಿಳಾ ಸಿಬ್ಬಂದಿ, ವಿದ್ಯಾರ್ಥಿನಿಯರು ಹಾಜರಿದ್ದರು.