ತರೀಕೆರೆ, ಮಹಿಳಾ ಸಂಘ ಸಂಸ್ಥೆಗಳು ಇನ್ನು ಹೆಚ್ಚಿನ ರೀತಿಯಲ್ಲಿ ಯೋಜಿತ ಮತ್ತು ಸುಸಜ್ಜಿತವಾಗಿ ಸಾಮಾಜಿಕ ಕಳಕಳಿಯ ವಿಚಾರಗಳೊಂದಿಗೆ ಬೆಳೆಯಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

- 80ನೇ ವಸಂತಕ್ಕೆ ಪಾಪಾರ್ಪಣೆ ಮಾಡಿದ ದಾನಿ ಪಾಗೂ ಸಮಾಜ ಸೇವಕಿ ಶ್ಯಾಮಲ ಮಂಜುನಾಥ್ ಅವರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಹಿಳಾ ಸಂಘ ಸಂಸ್ಥೆಗಳು ಇನ್ನು ಹೆಚ್ಚಿನ ರೀತಿಯಲ್ಲಿ ಯೋಜಿತ ಮತ್ತು ಸುಸಜ್ಜಿತವಾಗಿ ಸಾಮಾಜಿಕ ಕಳಕಳಿಯ ವಿಚಾರಗಳೊಂದಿಗೆ ಬೆಳೆಯಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.ಮಮತಾ ಮಹಿಳಾ ಸಮಾಜದಿಂದ ಸಮಾಜದಲ್ಲಿ ನಡೆದ ತರೀಕೆರೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ದೇಣಿಗೆ ನೀಡುತ್ತಿರುವ ದಾನಿ ಹಾಗೂ ಸಮಾಜ ಸೇವಕಿ ಶ್ಯಾಮಲ ಮಂಜುನಾಥ್ ಅವರು 80ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಅವರಿಗೆ ಸನ್ಮಾನ ಹಾಗೂ ಸಾಹಿತಿ ದಿ. ಎಸ್. ಎಲ್ ಭೈರಪ್ಪನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಮತ ಮಹಿಳಾ ಸಮಾಜದ ಕಟ್ಟಡದ ಅಭಿವೃದ್ದಿಗೆ 5 ಲಕ್ಷ ರು.ಗಳ ದೇಣಿಗೆ ನೀಡುವ ಜತೆಗ ನಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರ ಪತ್ನಿ ವಾಣಿ ಶ್ರೀನಿವಾಸ್ ಮಾತನಾಡಿ ಮಹಿಳಾ ಸಂಘ ಸಂಸ್ಥೆಗಳು ಕೇವಲ ಒಂದು ಕಟ್ಟಡದೊಳಗಿನ ಚಟುವಟಿಕೆಗಳಿಗೆ ಸೀಮಿತವಾಗಿರದೆ ಕಾಂಪೌಂಡ್ ದಾಟಿ ಕೆಲಸ ಕಾರ್ಯಗಳನ್ನು ಮಾಡಿಬೇಕಿದೆ. ಸಂಘ ಸಂಸ್ಥೆಗಳಿಗಾಗಿಯೇ ಸರ್ಕಾರದಿಂದ ಹಲವು ಯೋಜನೆಗಳು ಸಹಾಯಧನ ಇದೆ ಅದನ್ನು ಸದುಪಯೋಗಪಡಿಸಿ ಕೊಳ್ಳು ವಂತೆ ಸಲಹೆ ನೀಡಿದರು.

ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ ವ್ಯಕ್ತಿ ತನ್ನ ಸುತ್ತಮುತ್ತಲಿನ ಸ್ತ್ರೀಯನ್ನು ಗೌರವ ಪ್ರೀತಿಯಿಂದ ನೋಡಿ ಕೊಳ್ಳುತ್ತಾನೋ, ಯಾವ ಮನೆಯಲ್ಲಿ, ಸ್ಥಳದಲ್ಲಿ ಮಹಿಳೆಯರಿಗೆ ಗೌರವ ಕೊಡುತ್ತಾರೋ ಆ ಮನೆ ವ್ಯಕ್ತಿ ಸ್ಥಳ ಪ್ರಸಿದ್ಧಿ ಹೊಂದುತ್ತದೆ ಎಂದು ಹೇಳಿದರು.ಮಮತಾ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ವಿಜಯ್ ಕುಮಾರ್ ಮಾತನಾಡಿ ಸಂಘ ಸಂಸ್ಥೆಗಳಿಗೆ ಇನ್ನೂ ಹೆಚ್ಚಿನ ಮಹಿಳೆಯರು ಸೇರಿ ಜವಾಬ್ದಾರಿಯುತ ಸಮಾಜಮುಖಿ ಕೆಲಸಗಳನ್ನು ಎಲ್ಲರೂ ಸೇರಿ ಮಾಡೋಣ ಎಂದು ಆಶಿಸಿದರು. ಶ್ಯಾಮಲ ಮಂಜುನಾಥ್ ಮಾತನಾಡಿ ಸಮಾಜದ ಸದಸ್ಯರು ನನಗೆ ಹೆಚ್ಚು ಬೆಲೆ ಕೊಟ್ಟು ಗೌರವಿಸುತ್ತಾರೆ. ಸಂತೋಷ ಆಗುತ್ತದೆ, ನನ್ನ ಕುಟುಂಬ ಬಗ್ಗೆ ನನಗೆ ಹೆಮ್ಮೆ ಇದೆ. ಮಗ ನವೀನ್ ನನ್ನ ಎಲ್ಲ ಕೆಲಸ ಕಾರ್ಯಗಳಲ್ಲಿ ಸಂಪೂರ್ಣವಾಗಿ ಭಾಗಿಯಾಗುತ್ತಾರೆ ಎಂದು ಸಂತೋಷ ವ್ಯಕ್ತಪಡಿಸಿದರು.ಸಾಹಿತಿ, ಕವಿ ದಿ. ಎಸ್. ಎಲ್ ಭೈರಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಜೀವನ ಪರಿಚಯ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಬಗ್ಗೆ ಸಮಾಜದ ಸದಸ್ಯರಾದ ಸಹನ ರಾಘವೇಂದ್ರ ಮತ್ತು ರಶ್ಮಿ ರಮೇಶ್ ಮಾತನಾಡಿದರು.ಲಯನ್ಸ್ ಕ್ಲಬ್ ಪದಾಧಿಕಾರಿ ನವೀನ್, ಕಾರ್ಯದರ್ಶಿ ರೋಹಿಣಿ ನರಸಿಂಹಮೂರ್ತಿ, ಕವಿತಾ ಉಮೇಶ್, ಜಯಲಕ್ಷ್ಮಿ ಜಗದೀಶ್, ಭಾಗ್ಯ ಶಿವಶಂಕರ್, ಸುನಿತಾ ಗಂಗಾಧರ್, ಶಶಿ ಪ್ರದೀಪ್, ಭವ್ಯ ರೇವಣ್ಣ, ಸಮಾಜದ ಹಿರಿಯ ಸದಸ್ಯರಾದ ಶಾರದಾ ಅಶೋಕ್, ವಿಜಯ ಪ್ರಕಾಶ್ ,ಶೋಭಾ ನಾಗರಾಜ್ ಎಲ್ಲಾ ಸದಸ್ಯರು ಭಾಗವಹಿಸಿದ್ದರು.-

12ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ಮಮತ ಮಹಿಳಾ ಸಮಾಜದಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್. ಶ್ರೀನಿವಾಸ್, ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಪತ್ನಿ ವಾಣಿ ಶ್ರೀನಿವಾಸ್, ಮಮತ ಮಹಿಳಾ ಸಮಾಜ ಅಧ್ಯಕ್ಷೆ ಮಂಜುಳಾ ವಿಜಯ್ ಕುಮಾರ್, ಮಾಜಿ ಪುರಸಭಾಧ್ಯಕ್ಷ ಎಂ.ನರೇಂದ್ರ ಮತ್ತಿತರರು ಭಾಗವಹಿಸಿದ್ದರು.