ಮಹಿಳಾ ಪೊಲೀಸ್‌ ಠಾಣೆ ದೊಡ್ಡಬಳ್ಳಾಪುರದಲ್ಲೇ ಇರಲಿ: ಆರ್.ರಮೇಶ್

| Published : Jan 31 2025, 12:48 AM IST

ಸಾರಾಂಶ

ದೊಡ್ಡಬಳ್ಳಾಪುರದಲ್ಲಿ ನ್ಯಾಯಯುತವಾಗಿ ಮಂಜೂರಾಗಬೇಕಿದ್ದ ಮಹತ್ವದ ಆಡಳಿತ ಕಚೇರಿಗಳು ಈಗಾಗಲೇ ತಾಲೂಕಿನಿಂದ ಕೈತಪ್ಪಿದ್ದು, ಇದೀಗ ಮಹಿಳಾ ಠಾಣೆಯನ್ನೂ ಸ್ಥಳಾಂತರಿಸುವ ಹುನ್ನಾರ ನಡೆದಿರುವುದು ಖಂಡನೀಯ. ಠಾಣೆ ಸ್ವಂತ ಕಟ್ಟಡಕ್ಕೆ ಸಾಕಷ್ಟು ಜಮೀನು ಲಭ್ಯವಿದ್ದು, ಇಲಾಖೆ ಈ ಬಗ್ಗೆ ಗಮನ ಹರಿಸಬೇಕು .

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸ್‌ ಠಾಣೆಯನ್ನು ಬೆಂಗಳೂರು ನಗರಕ್ಕೆ ಸ್ಥಳಾಂತರಿಸಲು ಪ್ರಯತ್ನ ನಡೆಯುತ್ತಿದ್ದು ಠಾಣೆಯನ್ನು ಸ್ಥಳಾಂತರ ಮಾಡದಿರುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದೊಡ್ಡಬಳ್ಳಾಪುರ ತಾಲೂಕು ಘಟಕದಿಂದ ಡಿವೈಎಸ್ಪಿ ರವಿ ಯವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್ ಮಾತನಾಡಿ, ತಾಲೂಕಿನಲ್ಲಿ ದಿನೇ ದಿನೇ ಕೌಟುಂಬಿಕ ಕಲಹಗಳು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳಾ ಪೊಲೀಸ್ ಠಾಣೆ ದೊಡ್ಡಬಳ್ಳಾಪುರದಲ್ಲಿ ಇರುವುದರಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಅನುಕೂಲವಾಗಿದೆ. ಬೆಂಗಳೂರಿಗೆ ಸ್ಥಳಾಂತರಗೊಳಿಸುವ ಪ್ರಸ್ತಾವನೆ ಅವೈಜ್ಞಾನಿಕ. ಕೂಡಲೇ ಈ ಬಗ್ಗೆ ಗಂಭೀರ ಕ್ರಮ ವಹಿಸಿ, ಹಾಲಿ ಆಸ್ತಿತ್ವದಲ್ಲಿರುವ ಠಾಣೆಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು ಇಲಾಖೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಸಂಘದ ಅಧ್ಯಕ್ಷ ಚಂದ್ರಶೇಖರ್.ಡಿ ಉಪ್ಪಾರ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ನ್ಯಾಯಯುತವಾಗಿ ಮಂಜೂರಾಗಬೇಕಿದ್ದ ಮಹತ್ವದ ಆಡಳಿತ ಕಚೇರಿಗಳು ಈಗಾಗಲೇ ತಾಲೂಕಿನಿಂದ ಕೈತಪ್ಪಿದ್ದು, ಇದೀಗ ಮಹಿಳಾ ಠಾಣೆಯನ್ನೂ ಸ್ಥಳಾಂತರಿಸುವ ಹುನ್ನಾರ ನಡೆದಿರುವುದು ಖಂಡನೀಯ. ಠಾಣೆ ಸ್ವಂತ ಕಟ್ಟಡಕ್ಕೆ ಸಾಕಷ್ಟು ಜಮೀನು ಲಭ್ಯವಿದ್ದು, ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದರು.

ಮನವಿ ಸ್ವೀಕರಿಸಿದ ಡಿವೈಎಸ್ಪಿ ರವಿ, ಮಹಿಳಾ ಪೋಲೀಸ್ ಠಾಣೆ ಸ್ಥಳಾಂತರ ವಿಚಾರ ಮೌಖಿಕವಾಗಿ ಇದೆಯಷ್ಟೇ. ಆದಾಗ್ಯೂ ಮನವಿಯನ್ನು ಮೇಲಾಧಿಕಾರಿಗಳಿಗೆ ರವಾನಿಸಿ ಸಹಕರಿಸುವ ಭರವಸೆ ನೀಡಿದರು.

ಸಂಘದ ಉಪಾಧ್ಯಕ್ಷ ಕೊತ್ತೂರಪ್ಪ, ಪ್ರಧಾನ ಕಾರ್ಯದರ್ಶಿ ನೆಲ್ಲುಗುದಿಗೆ ಚಂದ್ರಪ್ಪ, ಪ್ರದೀಪ್, ಮಂಜುನಾಥ್, ಮನುಕುಮಾರ್, ಗಂಗರಾಜು, ರಮೇಶ್ ಬಾಬು, ಶಿವರಾಜ‌ ನೇಸರ ಉಪಸ್ಥಿತರಿದ್ದರು.