ಪೊಲೀಸ್ ಇಲಾಖೆಯಲ್ಲೂ ಹೊಸಪೇಟೆ ಗ್ರಾಮೀಣ, ಮರಿಯಮ್ಮನಹಳ್ಳಿ, ಕೊಟ್ಟೂರು, ಚಿಗಟೇರಿ, ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ತಲಾ ಒಬ್ಬರು ಮಹಿಳಾ ಪಿಎಸ್‌ಐ ಕರ್ತವ್ಯ
ಸಿ.ಕೆ. ನಾಗರಾಜ ಹೊಸಪೇಟೆ
ವಿಜಯನಗರ ಜಿಲ್ಲೆಯಲ್ಲಿ ಈಗ ನಾರಿ ಶಕ್ತಿಯದ್ದೇ ದರ್ಬಾರ್. ಜಿಲ್ಲೆಯ ಪ್ರಮುಖ ಹುದ್ದೆ ಈಗ ಮಹಿಳೆಯರು ಅಲಂಕರಿಸಿದ್ದಾರೆ.ವಿಜಯನಗರ ಜಿಲ್ಲೆಯ ಪ್ರಮುಖ ಇಲಾಖೆಗಳ ಆಯಕಟ್ಟಿನ ಹುದ್ದೆ ಅಲ್ಲದೇ ವಿವಿಧ ಇಲಾಖೆ, ಜಿಲ್ಲಾಡಳಿತ ಕಚೇರಿ, ತಾಲೂಕು ಕಚೇರಿಗಳಲ್ಲಿ ವಿವಿಧ ಹಂತದ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಿದೆ.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಜಾಹ್ನವಿ ಎಸ್. ಜಿಪಂ ಸಿಇಒ ಗರಿಮಾ ಪನ್ವಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಆರ್‌ಡಬ್ಲೂ ಎಸ್ ಇಇ ದೀಪಾ, ಹೊಸಪೇಟೆ ತಹಸೀಲ್ದಾರ್ ಶೃತಿ ಎಂ.ಎಂ., ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ ಹಾಗೂ ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಆರ್. ಕವಿತಾ, ಡಿಸಿ ಕಚೇರಿಯ ತಹಸೀಲ್ದಾರ್ ಮೇಘನಾ, ಬಿಸಿಎಂ ಜಿಲ್ಲಾ ಅಧಿಕಾರಿ ಶಶಿಕಲಾ, ಹೊಸಪೇಟೆ ಅಬಕಾರಿ ಇಲಾಖೆ ಡಿವೈಎಸ್ಪಿ ಭಾರತಿ, ಅಬಕಾರಿ ಇನ್ಸ್ ಪೆಕ್ಟರ್ ನಾಜಿಯಾಬೇಗಂ, ಶೈನಾಜ್‌ಬೇಗಂ, ಶೈಲಜ, ಎಚ್‌ಬಿ ಹಳ್ಳಿಯಲ್ಲಿ ಅಬಕಾರಿ ಮಮತಾ ರಾಣಿ, ಸಮಾಜ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಎನ್.ಭಾನು, ಹರಪನಹಳ್ಳಿ ನಗರಸಭಾ ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ.. ಹೀಗೆ ಜಿಲ್ಲೆಯ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇದ್ದು, ಜಿಲ್ಲೆಯ ಆಡಳಿತವನ್ನು ಮುನ್ನಡೆಸುತ್ತಿರುವುದು ವಿಶೇಷವಾಗಿದೆ.ಅರಣ್ಯ, ನೀರಿಗೂ ಸೈ: ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ (ಆರ್‌ಡಬ್ಲೂಎಸ್), 3 ತಾಲೂಕುಗಳಲ್ಲಿ ಮಹಿಳೆಯರೇ ತಾಲೂಕು ದಂಡಾಧಿಕಾರಿಗಳಾಗಿದ್ದಾರೆ. ಜಿಲ್ಲೆಯ ಆಡಳಿತದಲ್ಲಿ ಈ ಹಿಂದೆ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳಾ ಅಧಿಕಾರಿಗಳು ಇರಲಿಲ್ಲ. ನೂತನ ಜಿಲ್ಲೆಯಾದ ಬಳಿಕ ಮಹಿಳಾ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುತ್ತಿರುವುದು ಗಮನಾರ್ಹ.
ಅದರಂತೆ ಪೊಲೀಸ್ ಇಲಾಖೆಯಲ್ಲೂ ಹೊಸಪೇಟೆ ಗ್ರಾಮೀಣ, ಮರಿಯಮ್ಮನಹಳ್ಳಿ, ಕೊಟ್ಟೂರು, ಚಿಗಟೇರಿ, ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ತಲಾ ಒಬ್ಬರು ಮಹಿಳಾ ಪಿಎಸ್‌ಐ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರ ಸುರಕ್ಷತೆಯಲ್ಲಿ ತೊಡಗಿದ್ದರೆ. ಜಿಲ್ಲೆಯ 20 ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಅಭಿವೃದ್ಧಿ ಅಧಿಕಾರಿಗಳಾಗಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಶಾಸಕಿಯರ ತವರು: ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದರಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಬ್ಬ ಶಾಸಕಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಲತಾ ಮಲ್ಲಿಕಾರ್ಜುನ ಇದ್ದಾರೆ. ಅವರು ಇದೇ ಜಿಲ್ಲೆಯವರು. ಮತ್ತು ಪಕ್ಕದ ಬಳ್ಳಾರಿ ಜಿಲ್ಲೆ ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣ ತುಕಾರಾಂ ತವರು ಮನೆ ಹೊಸಪೇಟೆ ತಾಲೂಕಿನ ಕಮಲಾಪುರ ಎಂಬುದು ವಿಶೇಷ.
ಜಿಲ್ಲೆಯ ಪ್ರಮುಖ ಹುದ್ದೆ ಮಹಿಳೆಯರೇ ಅಲಂಕರಿಸಿದ್ದರಿಂದ ಜಿಲ್ಲೆಯ ಹೆಣ್ಣು ಮಕ್ಕಳಲ್ಲಿ ನಾವು ಇದೇ ರೀತಿ ಅಧಿಕಾರಿಯಾಗಬೇಕೆಂಬ ಕನಸು ಚಿಗುರೊಡೆದಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಒಲವು ತೋರುತ್ತಾರೆ. ಹೀಗಾಗಿ ಜಿಲ್ಲೆಯ ಆಯಕಟ್ಟಿನ ಹುದ್ದೆಗಳಲ್ಲಿರುವ ಮಹಿಳಾ ಅಧಿಕಾರಿಗಳು ಜಿಲ್ಲೆಯ ಹೆಣ್ಣು ಮಕ್ಕಳಿಗೆ ಪ್ರೇರಣೆಯೂ ಆಗುತ್ತಿದ್ದಾರೆ.ಜಿಲ್ಲೆಯ ಹೆಚ್ಚಿನ ಇಲಾಖೆಗಳಲ್ಲಿ ಮಹಿಳಾ ಅಧಿಕಾರಿಗಳು ಇರುವುದು ಖುಷಿಯ ವಿಚಾರ. ಇಲಾಖೆಯ ಕೆಲಸಗಳಲ್ಲಿ ಮಹಿಳೆಯರು ಸಹ ಸಮರ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸಕಾಲಕ್ಕೆ ಕಾನೂನುಬದ್ದವಾಗಿ ಕೆಲಸ ಮಾಡುವ ಮೂಲಕ ಜನರಿಗೆ ಸ್ಪಂದಿಸಬೇಕು. ನಮ್ಮ ಜಿಲ್ಲೆಯಲ್ಲಿ ಎಲ್ಲ ಕೆಲಸಗಳು ಚೆನ್ನಾಗಿ ನಡೆಯುತ್ತಿವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳು ಜನರ ಸಮಸ್ಯೆ ಅರ್ಥೈಸಿಕೊಂಡು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ವಿಜಯನಗರ ಜಿಲ್ಲಾ ಎಸ್ಪಿ ಎಸ್. ಜಾಹ್ನವಿ ತಿಳಿಸಿದ್ದಾರೆ.