- ಭಾರತಿ ಶೆಟ್ಟಿ

ವಿಧಾನ ಪರಿಷತ್ ಸದಸ್ಯರು

ಭಾರತದ ಬಗ್ಗೆ ತಿಳಿಯಬೇಕಾದರೆ ದೇಶವನ್ನು 2 ಸಲ ಪಾದಯಾತ್ರೆ ಮಾಡಿದ ಸ್ವಾಮಿ ವಿವೇಕಾನಂದರ ಜೀವನಗಾಥೆ ಓದಬೇಕೆಂದು ರವೀಂದ್ರನಾಥ್‌ ಟ್ಯಾಗೋರ್‌ ಅವರು ಹೇಳುತ್ತಾರೆ. ನಿನ್ನ ಯೌವ್ವನದಲ್ಲಿ ವಿವೇಕಾನಂದರನ್ನು ಓದದಿದ್ದರೆ ನಿನ್ನ ಯೌವ್ವನವೇ ವ್ಯರ್ಥವೆಂದು ಅಬ್ದುಲ್ ಕಲಾಂ ಹೇಳುತ್ತಾರೆ. ಅಂತಹ ವಿವೇಕಾನಂದರು ತಮ್ಮ ಅನೇಕ ಚಿಂತನೆಗಳಲ್ಲಿ ದೇಶದ ಯುವಜನತೆಯ ಬಗ್ಗೆ ಅದರಲ್ಲೂ ವಿಶೇಷವಾಗಿ ಭಾರತೀಯ ನಾರಿಶಕ್ತಿಯ ಬಗ್ಗೆ ವಿವರಿಸುತ್ತಿದ್ದರು. ಅಂದಿನ ನರೇಂದ್ರ (ವಿವೇಕಾನಂದ)ರ ಚಿಂತನೆಯನ್ನು ಇಂದಿನ ನರೇಂದ್ರ ಮೋದಿ ಅವರು ಕಾರ್ಯಗತ ಮಾಡುತ್ತಿರುವುದು, ಭಾರತದಲ್ಲಿ ಮತ್ತೊಮ್ಮೆ ವಿವೇಕಾನಂದರೇ ಅವತರಿಸಿದಂತೆ ಅನುಭವಕ್ಕೆ ಬರುತ್ತಿದೆ.

ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯ ಪಾತ್ರ ಬೆರಳೆಣಿಕೆಯಷ್ಟು ಎಂಬಂತಿದ್ದ ಕಾಲಘಟ್ಟದಲ್ಲಿ ಸ್ವಾಮಿ ವಿವೇಕಾನಂದರನ್ನು ವಿದೇಶಿ ಪ್ರಜೆಯೊಬ್ಬ ‘ನಿಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಯಾಕೆ ಕೈ ಕುಲಕುವುದಿಲ್ಲ’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ವಿವೇಕಾನಂದರು ಆತನಿಗೆ ಮರು ಪ್ರಶ್ನಿಸಿ ‘ನಿಮ್ಮ ದೇಶದಲ್ಲಿ ರಾಣಿ ಇದ್ದಾರಲ್ವಾ, ನೀವು ಅವರ ಕೈ ಕುಲುಕುತ್ತೀರಾ’ ಎಂದು ಕೇಳುತ್ತಾರೆ. ಆಗ ಆತ ‘ಇಲ್ಲ’ವೆಂದು ತಲೆಯಾಡಿಸುತ್ತಾನೆ. ಅದಕ್ಕೆ ವಿವೇಕಾನಂದರು ಹೇಳುತ್ತಾರೆ ‘ನಮ್ಮ ದೇಶದಲ್ಲಿರುವಂತಹ ಎಲ್ಲಾ ಹೆಣ್ಣು ಮಕ್ಕಳು ನಮಗೆ ಮಹಾರಾಣಿಯರಂತೆ. ಹೀಗಾಗಿ ನಾವು ಅವರ ಕೈ ಕುಲುಕುವುದಿಲ್ಲ, ಬದಲಾಗಿ ಕೈ ಮುಗಿಯುತ್ತೇವೆ’ ಎಂದು ಮಹಿಳೆಯರ ಬಗ್ಗೆ ಭಾರತ ಹೊಂದಿರುವ ದೃಷ್ಟಿಕೋನವನ್ನು ವಿವರಿಸುತ್ತಾರೆ.---

ಮಹಿಳಾ ಮೀಸಲು ಹೋರಾಟ ಹಾದಿ


ಯಾವ ದೇಶದಲ್ಲಿ ಮಹಿಳೆಯರ ಸಬಲೀಕರಣ ನಡೆಯುವುದಿಲ್ಲವೋ ಆ ದೇಶ ಅಭಿವೃದ್ಧಿ ಹೊಂದುವುದಿಲ್ಲ ಎಂಬ ವಿವೇಕಾನಂದರ ವಾಣಿಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡವರು ಯಾರಾದರು ಇದ್ದರೆ ಅದು ನಮ್ಮ ಪ್ರಧಾನಿ ಮೋದಿ ಅವರು. 1992-93ರಲ್ಲಿ ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ಸಂವಿಧಾನದ 73ನೇ ಮತ್ತು 74ನೇ ವಿಧಿಗಳಿಗೆ ತಿದ್ದುಪಡಿ ತಂದು ಮಸೂದೆ ಜಾರಿಗೊಳಿಸಲಾಯಿತು. ಪರಿಣಾಮವಾಗಿ ಗ್ರಾಮ ಮತ್ತು ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ದೊರೆಯಿತು. 1996ರಲ್ಲಿ ಮೊದಲ ಬಾರಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ 81ನೇ ತಿದ್ದುಪಡಿ ತಂದು 33% ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಆದರೆ ಸರ್ಕಾರ ಮತ್ತು ಬೆಂಬಲಿತರ ಒಳಜಗಳದಿಂದಾಗಿ ಬಿಲ್ ಪಾಸಾಗಲಿಲ್ಲ.‌

1998, 1999, 2002, 2003ರಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಮಸೂದೆಯನ್ನು ಮಂಡಿಸಲು ಪದೇಪದೇ ಯತ್ನಿಸಿತು. ಆದರೆ ವಿಪಕ್ಷಗಳ ತೀವ್ರ ವಿರೋಧ ಮತ್ತು ಅನಗತ್ಯ ಸಬೂಬುಗಳಿಂದಾಗಿ ಆಗಲೂ ಮಹಿಳಾ ಮಹಿಳಾ ಮೀಸಲಾತಿಗೆ ನ್ಯಾಯ ಸಿಗಲಿಲ್ಲ. 1908, 1909, 1910, 1911 ನ್ಯೂಯಾರ್ಕ್, ಜರ್ಮನಿ, ಆಸ್ರ್ಟಿಯಾ, ಡೆನ್ಮಾರ್ಕ್‌, ಸ್ವಿಟ್ಜರ್ಲೆಂಡ್‌ಗಳಲ್ಲಿ ಮತದಾನ, ಕೆಲಸದ ಹಕ್ಕುಗಳಿಗಾಗಿ ಮತ್ತು ಮಹಿಳಾ ತಾರತಮ್ಯ ಕೊನೆಗೊಳಿಸುವಂತೆ ಹೋರಾಟ, ಸಮ್ಮೇಳನಗಳು ನಡೆದಿದ್ದವು. ಹೋರಾಟದ ಮೂಲಕವೇ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದ ಇತಿಹಾಸ ನಮ್ಮ ಕಣ್ಣ ಮುಂದಿದೆ.

----

4 ಬಾರಿ ಯತ್ನಿಸಿದ್ದರು ಅಟಲ್‌

ಸ್ವತಂತ್ರ ಭಾರತದಲ್ಲಿ ಮೊದಲ ಚುನಾವಣೆಯಲ್ಲೇ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದಂತಹ ದೇಶ ನಮ್ಮದು. ಹೀಗಾಗಿ ಮಹಿಳಾ ಸಬಲೀಕರಣಕ್ಕಾಗಿ ನಾವೇನು ಅನೇಕ ದೊಡ್ಡ ದೊಡ್ಡ ಹೋರಾಟಗಳನ್ನು ನಡೆಸಬೇಕು ಎನ್ನುವ ಪ್ರಮೇಯ ಬಂದಿರಲಿಲ್ಲ. ಆದರೆ ಆಡಳಿತಾತ್ಮಕವಾಗಿ ಮಹಿಳೆಗೆ ನ್ಯಾಯ ಸಿಗುವಲ್ಲಿ ವಿಳಂಬವಾಗುತ್ತಾ ಬಂದಿತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸಿಕ್ಕಿದರೂ ಲೋಕಸಭೆ, ವಿಧಾನಸಭೆಗಳಲ್ಲಿ ಮೀಸಲಾತಿ ಸಿಕ್ಕಿರಲಿಲ್ಲ. ಅಟಲ್‌ ಜೀ ಕಾಲಘಟ್ಟದಲ್ಲಿ ಮಹಿಳಾ ಮೀಸಲಾತಿ ಖಂಡಿತಾ ಸಿಗಬಹುದು ಎಂಬ ವಿಶ್ವಾಸವಿತ್ತು. ಆದರೆ ಅವರ ನಾಲ್ಕು ಬಾರಿಯ ಪ್ರಯತ್ನಕ್ಕೂ ಸೋಲಾಯಿತು. 60 ವರ್ಷಗಳಿಂದ ಇಂದಿನವರೆಗೆ ಮಹಿಳಾ ಮೀಸಲಾತಿ ಸಿಗಬಹುದು ಎಂಬ ಆಸೆಯೊಂದಿಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆವು.

ಸೋನಿಯಾ ಗಾಂಧಿ 2008ರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದಾಗ ಮಹಿಳೆಯಿಂದ ಮಹಿಳೆಯರಿಗೆ ಆದ್ಯತೆ ನೀಡುವ ನಿರೀಕ್ಷೆಯಿತ್ತು. ಆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದಿಂದ ಕಿರಣ್ ಮಹೇಶ್ವರಿ, ಸುಷ್ಮಾ ಸ್ವರಾಜ್ ಮತ್ತು ಅನೇಕ ಮಹಿಳಾ ನಾಯಕಿಯರ ನೇತೃತ್ವದಲ್ಲಿ ದೇಶದ ವಿವಿಧ ರಾಜ್ಯಗಳ ಲಕ್ಷಾಂತರ ಮಹಿಳೆಯರ ಉಪಸ್ಥಿತಿಯಲ್ಲಿ ರಾಮಲೀಲಾ ಮೈದಾನದಲ್ಲಿ ಮಹಿಳಾ ಮೀಸಲಾತಿಗಾಗಿ ಬೃಹತ್‌ ಹೋರಾಟ ನಡೆದಿತ್ತು.

ಅಂದು ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದ ನಾನು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ 1075 ಮಹಿಳಾ ಪ್ರತಿನಿಧಿಗಳೊಂದಿಗೆ ಈ ಹೋರಾಟದಲ್ಲಿ ಭಾಗವಹಿಸಿದ್ದೆ. ಹೋರಾಟದ ಪ್ರತಿಧ್ವನಿಯಾಗಿ 2010ರಲ್ಲಿ ಯುಪಿಎ ಕಾಲಘಟ್ಟದಲ್ಲಿ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಯಿತು. ರಾಜ್ಯಸಭೆಯಲ್ಲಿ ಮಸೂದೆಗೆ ಅಂಕಿತ ಸಿಕ್ಕಿದರೂ, ಮಿತ್ರ ಪಕ್ಷಗಳ ಬೆದರಿಕೆಯಿಂದಾಗಿ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸುವ ಧೈರ್ಯವನ್ನು ಯುಪಿಎ ಸರ್ಕಾರ ತೋರಲಿಲ್ಲ. ಬಳಿಕ ಲೋಕಸಭೆಯೇ ವಿಸರ್ಜನೆಯಾಗಿ ಮಸೂದೆಯೂ ನೆನೆಗುದಿಗೆ ಬಿದ್ದಿತು.

----

ಮಹಿಳೆಯರನ್ನು ಗುರುತಿಸಿದ ಮೋದಿ

2023ರ ಸೆಪ್ಟೆಂಬರ್‌ 19. ಇದನ್ನು ನಾವು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಮೋದಿ ಸರ್ಕಾರ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ನೂತನ ಸಂಸತ್‌ ಭವನದಲ್ಲಿ ಮೊದಲನೆಯ ಮಸೂದೆಯಾಗಿ ಮಂಡಿಸಿತು. 2023ರ ಸೆಪ್ಟೆಂಬರ್ 20 ಲೋಕಸಭೆಯಲ್ಲಿ, ಸೆಪ್ಟೆಂಬರ್‌ 21 ರಂದು ರಾಜ್ಯಸಭೆಯಲ್ಲಿ ಸರ್ವಾನುತದಿಂದ ಮಸೂದೆ ಅಂಗೀಕಾರವಾಯಿತು. ಸೆಪ್ಟೆಂಬರ್ 28 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕುವುದರೊಂದಿಗೆ ಇದು ಅಧಿಕೃತವಾಗಿ 106 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಾಗಿ ಜಾರಿಗೆ ಬಂದಿತು.

ಈ ಮಧ್ಯೆ 1992-93 ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿಕ್ಕ ಮಹಿಳಾ ಮೀಸಲಾತಿಗೆ ನಮ್ಮ ಕರ್ನಾಟಕದಲ್ಲಿ 2008ರಲ್ಲಿ ಯಡಿಯೂರಪ್ಪನವರು ಶೇ.33 ಮೀಸಲಾತಿ ಹೆಚ್ಚಿಸಿ ಶೇ. 50 ಮೀಸಲಾತಿ ಒದಗಿಸಿದರು. ಇದೂ ಕೂಡಾ ಮಹಿಳೆಯರ ಸಹಭಾಗಿತ್ವಕ್ಕೆ ಕೊಟ್ಟ ದೊಡ್ಡ ಕೊಡುಗೆಯಾಗಿದೆ. ಸ್ವತಂತ್ರ ಭಾರತದ 74 ವರ್ಷಗಳ ನಂತರ ಈ ಮಸೂದೆಗೆ ಅಂಕಿತ ಸಿಕ್ಕಿರುವುದು ನಮಗೆಲ್ಲ ಬಹಳ ಸಂತೋಷ ತಂದಿದೆ.

---

ಸುಷ್ಮಾ, ಮಹೇಶ್ವರಿ ಕೊಡುಗೆ ಸ್ಮರಣೆ

ಮೀಸಲಾತಿಗಾಗಿ ಹೋರಾಟ ಮಾಡಿದಂತಹ ಲಕ್ಷಾಂತರ ಜನರನ್ನು ಅಭಿನಂದಿಸುತ್ತಾ ಇದರ ಬಗ್ಗೆ ಕನಸು ಕಂಡು ಹೋರಾಟದ ನೇತೃತ್ವ ವಹಿಸಿದ‌ ಭಾಜಪಾ ನಾಯಕಿಯರಾದ ಸುಷ್ಮಾ ಸ್ವರಾಜ್ ಮತ್ತು ಕಿರಣ್ ಮಹೇಶ್ವರಿ ಅವರು ಇಂದು ನಮ್ಮೊಂದಿಗೆ ಇಲ್ಲ, ಅವರನ್ನು ಕೂಡಾ ನಾವು ಸ್ಮರಿಸಬೇಕಾಗಿದೆ. ಈ ಮಹಿಳಾ ಮೀಸಲಾತಿಗಾಗಿ ಬೇರೆ ಬೇರೆ ಕಾಲಘಟ್ಟದಲ್ಲಿ ಅನೇಕರು ಹೋರಾಡಿದ್ದಾರೆ. ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗಾಗಿ ಜಾರಿಗೆ ಬಂದಂತಹ ಈ ನಾರಿ ಶಕ್ತಿ ವಂದನಾ ಅಧಿನಿಯಮವು ಮಹಿಳಾ ರಾಜಕೀಯ ಸಬಲೀಕರಣದೊಂದಿಗೆ ರಾಷ್ಟ್ರದ ಭವಿಷ್ಯ ರೂಪಿಸುವ ಅಡಿಗಲ್ಲಾಗಲಿದೆ.