ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪ್ರಸ್ತುತ ಮಹಿಳೆ ಎಲ್ಲಾ ರಂಗದಲ್ಲೂ ಕಾಲಿಟ್ಟಿದ್ದಾಳೆ. ಆದರೇ ಇತಿಹಾಸ ಗೊತ್ತಿಲ್ಲದಿದ್ದರೆ ಯಾವ ಸಾಧನೆಯನ್ನೂ ಮಾಡಲು ಆಗುವುದಿಲ್ಲ ಎಂದು ಹಿರಿಯ ಕವಯಿತ್ರಿ ಸವಿತಾ ನಾಗಭೂಷಣ್ ಸಲಹೆ ನೀಡಿದರು.ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ ಮತ್ತು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಮತ್ತು ಕವಿ, ಕಾವ್ಯ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ಇದ್ದರೇ ಜಗತ್ತು. ಜಗತ್ತು ಇದ್ದರೇ ಎಲ್ಲವೂ ಇರುತ್ತದೆ. ವರ್ಷದಲ್ಲಿ ಒಂದು ದಿನ ಮಾತ್ರ ಮಹಿಳಾ ದಿನಾಚರಣೆಯಲ್ಲ. ಪ್ರತಿದಿನವೂ ಮಹಿಳಾ ದಿನಾಚರಣೆ ನಡೆಯುತ್ತಲೇ ಇರುತ್ತದೆ. ಮಹಿಳೆಯರು ೧೬ ಗಂಟೆ ಕೆಲಸ ಮಾಡಿಕೊಂಡು ಜೊತೆಗೆ ಮನೆಯಲ್ಲೂ ಕೆಲಸ ಮಾಡುತ್ತಿದ್ದರು. ಈಗ ಜಗತ್ತು ಹಳ್ಳಿ ಆಗಿದೆ ಎನ್ನುವುದು ಸುಳ್ಳು, ಆದರೆ ಮೊಬೈಲ್ ಒಂದು ಜಗತ್ತಾಗಿದೆ. ಪ್ರತಿಯೊಬ್ಬರೂ ಮೊಬೈಲನ್ನು ಕೈಯಲ್ಲಿ ಹಿಡಿದು ಒಂದೊಂದು ಜಗತ್ತನ್ನು ಕಾಣುತ್ತಾರೆ ಎಂದರು.
ಹಿಂದಿನ ಕಾಲದಲ್ಲಿ ಮಹಿಳೆಯ ಬಗ್ಗೆ ತುಂಬ ತಾರತಮ್ಯವಿತ್ತು. ಗಂಡು - ಹೆಣ್ಣು ಎನ್ನುವ ಭೇದಭಾವ ಮಾಡುತ್ತಿದ್ದರು. ಈಗ ಎಲ್ಲಾ ಬದಲಾಗಿದೆ. ಗಂಡಿನಂತೆ ಹೆಣ್ಣೂ ಕೂಡ ಎಲ್ಲಾ ರಂಗದಲ್ಲೂ ಕಾಲಿಟ್ಟಿದ್ದಾಳೆ. ನಮಗೆ ಇತಿಹಾಸ ಗೊತ್ತಿಲ್ಲದಿದ್ದರೆ ಮುಂದೆ ನಾವು ಏನನ್ನೂ ಸಾಧಿಸಲಾಗುವುದಿಲ್ಲ. ನಾವು ಎಲ್ಲಿಂದ ಬಂದಿದ್ದೀವಿ, ಹೇಗೆ ನಡೆದು ಬಂದಿದ್ದೀವಿ ಎಂದು ತಿಳಿಯುವುದು ಇಂದಿನ ಯುವತಿಯರಿಗೆ ಅವಶ್ಯಕತೆ ಇದೆ. ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆಯ ಪಾತ್ರ ಹಿರಿದು. ಹಲವು ಜವಾಬ್ದಾರಿಗಳನ್ನು ನಿಭಾಯಿಸಿ ಕುಟುಂಬವನ್ನು ಮುನ್ನಡೆಸುವ ಶಕ್ತಿ ಮಹಿಳೆಯಲ್ಲಿದೆ ಎಂದು ಹೇಳಿದರು.ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅವರು ಆಶಯ ನುಡಿಗಳನ್ನಾಡಿ, ಸಮಾಜದಲ್ಲಿ ಮಹಿಳೆ ಒಂದು ಕಡೆ ಅಭಿವೃದ್ಧಿ ಹೊಂದಬೇಕು, ಬೆಳೆಯಲು ಪ್ರಯತ್ನಿಸುತ್ತಿದ್ದರೆ ಇನ್ನೊಂದು ಕಡೆ ಹತ್ತಿಕ್ಕುವ ಕೆಲಸ ಆಗುತ್ತಿದೆ. ಹಿಂದಿನಗಿಂತಲೂ ಈಗ ಸಂಘಟನೆಗಳು ಹೆಚ್ಚು ನಡೆಯುತ್ತಿವೆ. ಮೊದಲ ತಲೆಮಾರಿನ ಮತ್ತು ಈಗಿನ ಸಾಹಿತ್ಯಕ್ಕೂ ವ್ಯತ್ಯಾಸವಿದೆ. ಎಲ್ಲಾ ಕಾಲದಲ್ಲೂ ವ್ಯವಸ್ಥೆಯನ್ನು ಪ್ರಶ್ನೆ ಮಾಡಿದ್ದಾರೆ ಎಂದರು.
ಇಂದು ನಾವು ಸಾಹಿತ್ಯ ಬರೆಯಬೇಕಾದರೆ ಯೋಚಿಸಿ ಬರೆಯಬೇಕಾಗಿದೆ. ಸಂವಿಧಾನ, ಕಾನೂನಿನ ಬಗ್ಗೆ ಯೋಚಿಸಬೇಕಾಗಿದೆ. ಧರ್ಮ ರಾಜಕಾರಣದ ಬಗ್ಗೆ ಎಲ್ಲಾ ಚರ್ಚೆಗಳೂ ನಡೆಯಬೇಕಾಗಿದೆ ಎಂದರು. ಇದೆ ವೇಳೆ ಮಧ್ಯಾಹ್ನದ ನಂತರ ವಿವಿಧ ಕವಿಗೋಷ್ಠಿ ಹಾಗೂ ಕಾವ್ಯಗಳ ಬಗ್ಗೆ ಹಿರಿಯ ಮತ್ತು ಯುವ ಕವಿಗಳಿಂದ ಸಂವಾದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.ಹಿರಿಯ ಕವಯಿತ್ರಿ ರೂಪಾ ಹಾಸನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ, ಕೆ.ಜಿ. ಕವಿತಾ, ಶ್ರೀರಂಗ ವಿದ್ಯಾಸಂಸ್ಥೆ ಪ್ರಾಂಶುಪಾಲರು ನವೀನ್, ಕಸಾಪದ ಜಯರಾಂ, ಜೆ.ಆರ್. ಕೆಂಚೇಗೌಡ, ಬೊಮ್ಮೇಗೌಡ, ಪ್ರಸನ್ನಕುಮಾರ್, ಶೈಲಜಾ ಹಾಸನ್, ರಾಜೇಶ್ವರಿ ಹುಲ್ಲೇನಹಳ್ಳಿ, ವನಜಾ ಸುರೇಶ್, ಸರ್ವಮಂಗಳ ಇತರರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಬನುಮ ಗುರುದತ್ತ ನಡೆಸಿಕೊಟ್ಟರು.