ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

| Published : Oct 25 2025, 01:01 AM IST

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪಿಗಳಿಗೆ ಜಾಮೀನು ನೀಡದೆ, ಕಠಿಣ ಶಿಕ್ಷೆ ಒದಗಿಸುವುದು ಹಾಗೂ ಪಿಂಚಣಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಹಿಳೋದಯ ಮಹಿಳಾ ಒಕ್ಕೂಟದ ವತಿಯಿಂದ ಮಡಿಕೇರಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪಿಗಳಿಗೆ ಜಾಮೀನು ನೀಡದೆ, ಕಠಿಣ ಶಿಕ್ಷೆ ಒದಗಿಸುವುದು ಹಾಗೂ ಪಿಂಚಣಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಹಿಳೋದಯ ಮಹಿಳಾ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ಮಹಿಳೋದಯ ಮಹಿಳಾ ಒಕ್ಕೂಟ ಒಡಿಪಿಯ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮೆನೆಜಸ್, ನಮ್ಮ ದೇಶದ ಉದ್ದಗಲಕ್ಕೂ ಪ್ರತಿದಿನ, ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರಗಳು, ಲೈಗಿಂಕ ಕಿರುಕುಳ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಾ ಇರುವುದು ಆಘಾತಕಾರಿ ವಿಷಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ರಕ್ಷಣೆಗೆ ಹಲವಾರು ಯೋಜನೆಗಳನ್ನು, ಕಾನೂನುಗಳನ್ನು ರೂಪಿಸಿದ್ದರೂ ಕಾರ್ಯನಿರ್ವಹಣೆಯಲ್ಲಿ ವಿಫಲರಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ರೂಪಿಸುವುದು ಮಾತ್ರವಲ್ಲ. ಅದನ್ನು ಅನುಷ್ಠಾನಗೊಳಿಸುವುದು ಅಷ್ಟೇ ಮುಖ್ಯವಾಗಿದೆ ಎಂದರು.

ಮಹಿಳಾ ದೌರ್ಜನ್ಯ ಪ್ರಕರಣಗಳು ಸರಿಯಾಗಿ ಇತ್ಯಾರ್ಥವಾಗದೆ ಉಳಿದಿರುವುದರಿಂದ ಮಹಿಳೆಯರು ಮತ್ತು ಮಕ್ಕಳು ಭಯದ ವಾತವರಣದಲ್ಲಿ ಬದುಕುವಂತಾಗಿದೆ. ಈ ಭಯದ ವಾತವರಣದಿಂದ ಮಹಿಳೆಯರು ಹೊರಬರಬೇಕಾಗಿದೆ, ಈ ನಿಟ್ಟಿನಲ್ಲಿ ಮಹಿಳೆಯರ ರಕ್ಷಣೆಗಾಗಿ, ಹಕ್ಕುಗಳಿಗಾಗಿ ಮಹಿಳೋದಯ ಮಹಿಳಾ ಒಕ್ಕೂಟವು ಗ್ರಾಮ ಮಟ್ಟದಿಂದ ಕೇಂದ್ರ ಮಟ್ಟದ ವರೆಗೆ ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮ ಜಾರಿಗೊಳಿಸಲು ಹಕ್ಕೊತ್ತಾಯ ಮನವಿ ಮಾಡುತಿದ್ದೇವೆ ಎಂದು ಹೇಳಿದರು.

ಪ್ರಸ್ತುತ ಕರ್ನಾಟಕ ಸರ್ಕಾರವು ದುರ್ಬಲ ಗುಂಪುಗಳಿಗೆ ವಿಧವಾ ಪಿಂಚಣಿ, ವೃದ್ಧಾಪ್ಯ ಪಿಂಚಣಿ ಮತ್ತು ವಿಶೇಷಚೇತನರಿಗೆ ಪಿಂಚಣಿ ನೀಡುತ್ತಿದ್ದು, ಸದರಿ ಯೋಜನೆಗಳಿಗೆ ತಿಂಗಳಿಗೆ ೮೦೦ರಿಂದ ೧೨೦೦ ರು. ಸಂದಾಯ ಮಾಡುತ್ತಿದೆ. ಇತ್ತೀಚೆಗೆ ಜನರ ದೈನಂದಿನ ದಿನ ಬಳಕೆಯ ವಸ್ತುಗಳ ಬೆಲೆ ತುಂಬಾ ದುಬಾರಿಯಾಗಿರುವುದರಿಂದ ಈ ಮೊತ್ತವನ್ನು ಕನಿಷ್ಠ ೩೦೦೦ ರು.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಅತ್ಯಾಚಾರ ಮತ್ತು ಕೊಲೆವೆಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರಿಗೆ ಮರಣ ದಂಡನೆ ವಿಧಿಸುವುದು, ಮಹಿಳೆಯರ ಮೇಲಿನ ಹೀನಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಕುರಿತು ರಾಜ್ಯ, ಕೇಂದ್ರ ಸರ್ಕಾರಗಳು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಒಕ್ಕೂಟ ಅಧ್ಯಕ್ಷೆ ತಾರಾ, ಸಾಂತ್ವನ ಕೇಂದ್ರ ಒಡಿಪಿಯ ವಿಲ್ಮಾ, ಶ್ವೇತಾ, ಪ್ರಮುಖರಾದ ವಿಜಯ ನಾರಾಯಣ್, ಮಮತಾ, ರೀಟಾ, ಧನುಕುಮಾರ್, ಅಕ್ಷಯ್, ಮೀನಾಕುಮಾರಿ, ಚಿನ್ನಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.