ಪರಿಸರ ಇಲಾಖೆಯ ಅಧಿಕಾರಿಗಳು ಪ್ರತಿ ಬಾರಿಯೂ ಕಾರ್ಖಾನೆಗಳಿಗೆ ಎಸಿ ಕಾರಿನಲ್ಲಿ ಬಂದು, ಎಸಿ ರೂಮಿನಲ್ಲಿಯೇ ಮಾಹಿತಿ ಪಡೆದು ತೆರಳುತ್ತಿದ್ದರು.

ಕೊಪ್ಪಳ: ಹಾಳಾದ ಬೆಳೆ, ಬಾಳೆ ಗಿಡ ತೋರಿಸಿ ಪರಿಸರ ಇಲಾಖೆಯ ಅಧಿಕಾರಿ ಹರಿಶಂಕರ್ ಅವರನ್ನು ಹಿರೇಬಗನಾಳ ಗ್ರಾಮದ ಮಹಿಳೆಯರು ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿರುವ ವೀಡಿಯೋ ಈಗ ಸಖತ್ ವೈರಲ್ ಆಗಿದೆ.

ಕಳೆದೆರಡು ದಿನಗಳ ಹಿಂದೆ ಪಟ್ಟು ಬಿಡದೇ ತಮ್ಮೂರಿಗೆ ಕರೆಯಿಸಿಕೊಂಡ ಮಹಿಳೆಯರು ಮತ್ತು ಗ್ರಾಮಸ್ಥರು ಪರಿಸರ ಅಧಿಕಾರಿ ಹರಿಶಂಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಒಂದು ಹಂತದಲ್ಲಿ ನಮ್ಮೂರು ಸಮಸ್ಯೆಗೆ ಪರಿಹಾರ ಸೂಚಿಸಿಯೇ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.

ಪರಿಸರ ಇಲಾಖೆಯ ಅಧಿಕಾರಿಗಳು ಪ್ರತಿ ಬಾರಿಯೂ ಕಾರ್ಖಾನೆಗಳಿಗೆ ಎಸಿ ಕಾರಿನಲ್ಲಿ ಬಂದು, ಎಸಿ ರೂಮಿನಲ್ಲಿಯೇ ಮಾಹಿತಿ ಪಡೆದು ತೆರಳುತ್ತಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪರಿಸರ ಇಲಾಖೆಯ ಕಚೇರಿಗೆ ಭೇಟಿ ನೀಡಿ, ನಮ್ಮ ಗೋಳು ಸ್ವಲ್ಪ ನೋಡಿ, ಎಸಿ ಕಾರಿನಲ್ಲಿ ಬಂದು ಎಸಿ ರೂಮಿನಲ್ಲಿಯೇ ಕಾರ್ಖಾನೆಯ ಮಾಹಿತಿ ಪಡೆಯುವುದರ ಜತೆಗೆ ಪಕ್ಕದಲ್ಲಿಯೇ ಜೀವನ್ಮರಣದ ಹೋರಾಟ ನಡೆಸುವ ನಮ್ಮನ್ನು ನೋಡಿ ಎಂದು ತಾಕಿತು ಮಾಡಿದ್ದರು. ಎರಡು-ಮೂರು ಬಾರಿ ಮನವಿ ಮಾಡಿದರೂ ಬಾರದೆ ಇದ್ದಾಗ ಕಚೇರಿಗೆ ಹೋಗಿ ತಾಕೀತು ಮಾಡಿದ ಮೇಲೆ ಹಿರೇಬಗನಾಳ ಗ್ರಾಮಕ್ಕೆ ಪರಿಸರ ಅಧಿಕಾರಿ ಹರಿಶಂಕರ ತೆರಳಿದ್ದರು.

ಗ್ರಾಮಕ್ಕೆ ಭೇಟಿ ನೀಡಿದ ಪರಿಸರ ಅಧಿಕಾರಿ ಹರಿಶಂಕರ ಅವರಿಗೆ ಇಂಚಿಂಚು ಮಾಹಿತಿ ನೀಡಿದ್ದು ಅಲ್ಲದೆ, ಇಲ್ಲಿಯೇ ವಾಸ್ತವ್ಯ ಇದ್ದು ನೋಡಿ ನಮ್ಮ ಪಾಡು ಎಂದು ತಾಕೀತು ಸಹ ಮಾಡಿದ್ದಾರೆ ಎಂದು ಹೋರಾಟಗಾರ ಶರಣು ಗಡ್ಡಿ ಮಾಹಿತಿ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಲು ಅಧಿಕಾರಿಯ ಬಳಿ ಉತ್ತರವೇ ಇರಲಿಲ್ಲ. ಕೊನೆಗೆ ಮೇಲಾಧಿಕಾರಿಗಳಿಗೆ ಕರೆ ಮಾಡಿ ಶೀಘ್ರದಲ್ಲಿಯೇ ಇದೆಲ್ಲವನ್ನು ಅಧ್ಯಯನ ಮಾಡಲಾಗುವುದು ಎಂದು ಭರವಸೆ ನೀಡಿದ ಮೇಲೆ ಬಿಟ್ಟು ಕಳುಹಿಸಲಾಗಿದೆ.

ಈ ಘಟನೆಯ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಮಾಡುತ್ತಿದ್ದು. ಪರಿಸರ ಅಧಿಕಾರಿಗಳು ಸೇರಿದಂತೆ ಸರ್ಕಾರಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.