ಸಾರಾಂಶ
- ಎಐಟಿ ಕಾಲೇಜಿನ ಸಭಾಂಗಣದಲ್ಲಿ ದಿ ಗ್ರಾಂಡ್ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಒಂದು ಕಾಲದಲ್ಲಿ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತರಾಗಿದ್ದ ಮಹಿಳೆಯರು ಇಂದು ಸಮಾಜ ಕಟ್ಟುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಯೊಬ್ಬ ಮಹಿಳೆ ಮನೆಯಿಂದ ಹೊರಬಂದು ಸಾಮಾಜಿಕ ಕೆಲಸ ಮಾಡುವಂತಾದಾಗ ಮಾತ್ರ ಮಾದರಿ ಸಮಾಜ ನಿರ್ಮಾಣ ಸಾಧ್ಯ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ನುಡಿದರು.
ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದಿಂದ ಆಯೋಜಿಸಿದ್ದ ದಿ ಗ್ರಾಂಡ್ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿದರು, ಮಹಿಳೆಯರು ಸಾಮಾಜಿಕ ಕಾರ್ಯ ಮಾಡಲು ಆರಂಭಿಸಿದಾಗ ಅವರನ್ನು ಆದರ್ಶವಾಗಿಟ್ಟುಕೊಂಡು ಮತ್ತಷ್ಟು ಮಹಿಳೆಯರು ಸಮಾಜ ಕಟ್ಟಲು ಮುಂದೆ ಬರುತ್ತಾರೆ. ಇದರಿಂದಾಗಿ ದೇಶದಲ್ಲಿ ದೊಡ್ಡ ಬದಲಾವಣೆಯನ್ನೇ ನಾವು ಕಾಣಬಹುದಾಗಿದೆ ಎಂದು ಹೇಳಿದರು.ಒಕ್ಕಲಿಗರ ಮಹಿಳಾ ಸಂಘದಿಂದ ಹಿಂದಿನಿಂದಲೂ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಸಮಾಜದ ಮಹಿಳೆಯರು ಇತರರಿಗೆ ಆದರ್ಶಪ್ರಾಯರಾಗಿದ್ದಾರೆ. ಅಲ್ಲದೆ ಉತ್ತಮ ವ್ಯವಹಾರಿಕ ಜ್ಞಾನ ಸಂಪಾದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಎಲ್ಲವನ್ನು ಸೃಷ್ಟಿ ಮಾಡಿದ ಬ್ರಹ್ಮ ಕೊನೆಗೆ ಮನುಷ್ಯನನ್ನು ಸೃಷ್ಟಿ ಮಾಡಿದ. ಮನುಷ್ಯನಿಗೆ ಆಹಾರ ವಿಲ್ಲದಿದ್ದರೆ ಆತ ಬದುಕುವುದಿಲ್ಲ ಎಂಬುದನ್ನು ಅರಿತ ಬ್ರಹ್ಮ ಒಕ್ಕಲುತನ ಮಾಡುವ ಒಕ್ಕಲಿಗನನ್ನು ಸೃಷ್ಟಿ ಮಾಡಿದನಂತೆ. ಹೀಗಾಗಿಯೇ ರೈತರಿಗೆ ಅನ್ನಬ್ರಹ್ಮ ಎನ್ನುತ್ತಾರೆ ಎಂದು ಹೇಳಿದರು.ಸಮಾಜಸೇವೆ ಮಾಡುವಾಗ ಕರ್ಮಫಲ ಮತ್ತು ತ್ಯಾಗ ಮಾಡಲೇಬೇಕು. ನಾವು ಮಾಡುವ ಕೆಲಸದಲ್ಲಿ ಆಸೆ ಹಾಗೂ ಅಪೇಕ್ಷೆ ಇಟ್ಟುಕೊಳ್ಳಬಾರದು. ಬದಲಿಗೆ ಅದು ಶುದ್ಧ ಸಮಾಜ ಸೇವೆಯಾಗಿರಬೇಕು ಎಂದು ಭಗವದ್ಗೀತೆಯಲ್ಲಿಯೇ ಹೇಳಲಾಗಿದೆ. ತಾಯಿಯೇ ಮೊದಲ ಗುರು. ಹೀಗಾಗಿ ತಾಯಂದಿರು ಮಾಡುವ ಕೆಲಸಗಳು ಮಕ್ಕಳಿಗೆ ಆದರ್ಶವಾಗಲಿ ಎಂದು ಹಾರೈಸಿದರು.
ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಮಹಿಳೆಯರು ಮನೆಯಲ್ಲಿಯೇ ಇದ್ದು ಅಡುಗೆ ಮಾಡಲು ಸೀಮಿತವಾಗದೆ ತಮ್ಮ ಕರಕುಶಲ ಕೌಶಲ್ಯದ ಮೂಲಕ ವ್ಯವಹಾರಿಕವಾಗಿಯೂ ಬೆಳೆಯಲಿ ಎಂಬ ಕಾರಣಕ್ಕೆ ಈ ರೀತಿ ಮೇಳ ಆಯೋಜಿಸಲಾಗಿದೆ.ನಮ್ಮ ಹಿರಿಯರು ಅಷ್ಟು ಸುಲಭವಾಗಿ ಮಹಿಳಾ ಸಂಘ ಕಟ್ಟಿಲ್ಲ. ಪ್ರತಿ ಮನೆಗೂ ತೆರಳಿ ಮಹಿಳೆಯರ ನೋಂದಣಿ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲೇ ಮಾದರಿ ಸಂಘವನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದರು.
ಕೃಷಿ ಮತ್ತು ತೋಟಗಾರಿಕೆ ನಮ್ಮೆಲ್ಲರ ರಕ್ತದಲ್ಲಿಯೇ ಬಂದಿದೆ. ಇದರ ಜೊತೆಗೆ ವ್ಯಾಪಾರದ ತಾಂತ್ರಿಕತೆ ಕಲಿತು ಆರ್ಥಿಕ ವಾಗಿಯೂ ಸದೃಢರಾಗಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಕಲ್ಪನಾ ಪ್ರದೀಪ್ ವಹಿಸಿದ್ದರು. ಎಐಟಿ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ.ಜಯದೇವ್, ಮಹಿಳಾ ಸಂಘದ ಉಪಾಧ್ಯಕ್ಷ ಕಾವ್ಯ ಸುಕುಮಾರ್, ಗೌರವ ಕಾರ್ಯದರ್ಶಿ ಅಮಿತಾ ಸುಜೇಂದ್ರ, ಸಹಕಾರ್ಯದರ್ಶಿ ಕೋಮಲ ರವಿ, ಒಕ್ಕಲಿಗರ ಸಂಘದ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣಗೌಡ ಇದ್ದರು.
1 ಕೆಸಿಕೆಎಂ 3ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದಿಂದ ಭಾನುವಾರ ನಡೆದ ದಿ ಗ್ರಾಂಡ್ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು. ಟಿ.ರಾಜಶೇಖರ್, ಕಲ್ಪನಾ ಪ್ರದೀಪ್, ಡಾ. ಸಿ.ಟಿ. ಜಯದೇವ್, ಕೋಮಲಾ ರವಿ, ಕಾವ್ಯ ಸುಕುಮಾರ್, ಅಮಿತಾ ಸುಜೇಂದ್ರ, ಸವಿತಾ ರಮೇಶ್ ಇದ್ದರು.