ಸಾರಾಂಶ
ಚಿಟ್ಟಿಕೊಡಿಗೆಯಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರಸ್ತುತ ದಿನಗಳಲ್ಲಿ ಮಹಿಳೆಯರು ವಿವಿಧ ರೀತಿಯ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದು ಇದರ ಬಗ್ಗೆ ಮುಂಜಾಗೃತೆ ವಹಿಸಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಹೇಳಿದರು.
ಶುಕ್ರವಾರ ಚಿಟ್ಟಿಕೊಡಿಗೆ ಗ್ರಾಮದಲ್ಲಿ ಸೋಷಿಯಲ್ ವೆಲ್ ಫೇರ್ ಸೊಸೈಟಿ ಆಶ್ರಯದಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ನಡೆದ ಆರೋಗ್ಯ, ತೋಟಗಾರಿಕೆ ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 30 ವರ್ಷದ ನಂತರ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಸ್ತನದ ಗಾತ್ರದಲ್ಲಿ ಬದಲಾವಣೆ, ನೀರು ಬರುವುದು, ನೋವು, ಊತ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಗರ್ಭಕೋಶದ ಕ್ಯಾನ್ಸರ್ ಸಹ ಹೆಚ್ಚಾಗಿದ್ದು ಕಿಬ್ಬೊಟ್ಟೆ ನೋವು ಬಂದರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು.ಇತ್ತೀಚೆಗೆ ಹೃದಯಾಘಾತದ ಸಮಸ್ಯೆ ಹೆಚ್ಚಾಗಿದ್ದು ಉಸಿರಾಟದಲ್ಲಿ ಅತಿಯಾದ ತೊಂದರೆ ಕಂಡು ಬಂದರೆ, ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ತಲೆ ಸುತ್ತುವುದು ಕಂಡು ಬಂದರೆ ಕೂಡಲೇ 108 ಸಂಖ್ಯೆಗೆ ಕರೆ ಮಾಡಬೇಕು ಎಂದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ರೋಹಿತ್ ಮಾತನಾಡಿ, ಈ ವರ್ಷ ಅಡಕೆ ಬೆಳೆಗೆ ಕೊಳೆ ರೋಗ ಹೆಚ್ಚಾಗುತ್ತಿದೆ. ಮೈಲು ತುತ್ತ ಮತ್ತು ಸುಣ್ಣವನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಬೆರೆಸಿ ಮೇ ತಿಂಗಳ ಕೊನೆಯಲ್ಲಿ ಮತ್ತು ಮಳೆ ನಿಂತ ನಂತರ 2 ಬಾರಿ ಸಿಂಪಡಣೆ ಮಾಡಬೇಕು. ಮಣ್ಣು ಪರೀಕ್ಷೆ ಮಾಡಬೇಕು. ಎರಡು ಬಾರಿ ಗೊಬ್ಬರ ನೀಡಬೇಕು. ಬಸಿಕಾಲುವೆ ನಿರ್ಮಿಸಬೇಕು. ಇದರಿಂದ ಗಿಡಗಳ ಉಸಿರಾಟಕ್ಕೆ ಸಹಾಯವಾಗುತ್ತದೆ. ಕೆಲವು ಯಂತ್ರೋಪಕರಣಗಳಿಗೆ ಸಹಾಯ ಧನವಿದ್ದು ಕಚೇರಿಯಲ್ಲಿ ಬಂದು ಮಾಹಿತಿ ಪಡೆಯಬಹುದು. ತಾಳೆ ಬೆಳೆಗೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚುವ ಸಾಧ್ಯತೆಯಿದೆ. ಖಾಲಿ ಜಾಗವಿದ್ದರೆ ತಾಳೆ ಬೆಳೆ ಬೆಳೆಯಬಹುದು. ತಾಳೆ ಕೃಷಿ ಮಾಡಲು ಆಸಕ್ತಿ ಇದ್ದರೆ ಸಹಾಯಧನ ನೀಡಲಾಗುವುದು ಎಂದರು.ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಶಶಿಕಲಾ ಮಾತನಾಡಿ, ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ನಡೆದರೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ–2005 ರ ಪ್ರಕಾರ ಕೇಂದ್ರಕ್ಕೆ ಬಂದು ದೂರು ಸಲ್ಲಿಸಿ ಸಹಾಯ ಪಡೆಯ ಬಹುದು. ಮಹಿಳೆಗೆ ಸಮಸ್ಯೆಯಾದಲ್ಲಿ 181ಕ್ಕೆ ಹಾಗೂ ಬಾಲ್ಯವಿವಾಹ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಕಂಡು ಬಂದರೆ 1098 ಕ್ಕೆ ಉಚಿತವಾಗಿ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಹಾಯಕ ನಿರ್ದೇಶಕ ಫಾದರ್ ಅಭಿನವ್ ಕಾರ್ಯಕ್ರಮ ಉದ್ಘಾಟಿಸಿ ನ್ಯುಮೋನಿಯಾ ತಡೆಗಟ್ಟುವ ಸಾನ್ಸ್ ಕಾರ್ಯಕ್ರಮದ ಭಿತ್ತಿ ಪತ್ರ ಬಿಡುಗಡೆಗೊಳಿಸಿದರು.ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ಸಹಾಯಕಿ ಡೈಸಿ, ತೋಟಗಾರಿಕೆ ಇಲಾಖೆ ನವೀನ್, ಸೋಷಿಯಲ್ ವೆಲ್ ಫೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಭಾಗವಹಿಸಿದ್ದರು.