ಸಾರಾಂಶ
ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಅರಸೀಕೆರೆಶಿಕ್ಷಣವನ್ನು ಪಡೆಯುವ ಮೂಲಕ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನನ್ನು ಗುರುತಿಸಿಕೊಂಡಿದ್ದಾಳೆ. ಅಂತೆಯೇ ಅಪರಾಧಗಳನ್ನು ತಡೆಗಟ್ಟುವಲ್ಲಿ ಮಹಿಳೆಯರು ಜಾಗೃತಿ ವಹಿಸಬೇಕು ಎಂದು ನಗರ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಲತಾ ಹೇಳಿದರು
ನಗರದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಕಾನೂನಿನ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ ವಿಷಯ ಕುರಿತು ಮಾತನಾಡಿ, ಮಹಿಳೆಯರು ಮುಂಜಾಗ್ರತೆ ವಹಿಸಿದಲ್ಲಿ ಮನೆ ಕಳವು ಮೊದಲಾದಗಳನ್ನು ತಡೆಗಟ್ಟಲು ಸಾಧ್ಯ. ಪರಸ್ದಳಗಳಿಗೆ ತೆರಳುವಾಗ ಮನೆಯ ಅಕ್ಕಪಕ್ಕದಲ್ಲಿ ನೋಡಿಕೊಳ್ಳುವಂತೆ ತಿಳಿಸಬೇಕು. ಮನೆಯ ಮುಂದಿನ ಲೈಟನ್ನು ಆಫ್ ಮಾಡಬಾರದು. ಊರಿನಲ್ಲಿ ಇಲ್ಲದ ಸಮಯದಲ್ಲಿ ದಿನಪತ್ರಿಕೆಗಳನ್ನು ಪಕ್ಕದ ಮನೆಯಲ್ಲಿ ಹಾಕಬೇಕು. ಮನೆಯ ಬಾಗಿಲಿನಲ್ಲಿ ದಿನಪತ್ರಿಕೆಗಳು ಬಿದ್ದಿದ್ದಲ್ಲಿ ಊರಿನಲ್ಲಿ ಇಲ್ಲ ಎಂಬ ಸುಳಿವು ಕಳ್ಳರಿಗೆ ಗೊತ್ತಾಗುತ್ತದೆ ಎಂದು ಸಲಹೆ ನೀಡಿದವರುಪ್ರಯಾಣಿಸುವಾಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಡವೆಗಳನ್ನು ಪ್ರದರ್ಶನ ಆಗುವಂತೆ ಧರಿಸಬಾರದು. ಈ ಬಗ್ಗೆಯೂ ಎಚ್ಚರ ವಹಿಸಬೇಕು, ಅಪರಿಚಿತರೊಂದಿಗೆ ವ್ಯವಹರಿಸಬೇಡಿ, ದ್ವಿಚಕ್ರ ವಾಹನಗಳನ್ನು ಚಲಿಸುವಾಗ ಅಗತ್ಯ ದಾಖಲೆಗಳನ್ನು ಹೊಂದಿರಿ, ಹೆಲ್ಮೆಟ್ ಧರಿಸಿರಿ ಎಂದು ಹೇಳಿದರು.
ಹಿರಿಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಮಾತನಾಡಿ, ‘ನಮ್ಮ ಸಂಸ್ಥೆಯಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಎಲ್ಲೆಡೆ ಅನುಷ್ಠಾನಗೊಳ್ಳುತ್ತಿದೆ. ವಿವಿಧ ಯೋಜನೆಗಳ ನೆರವನ್ನು ಪಡೆದ ಫಲಾನುಭವಿಗಳು ತಮ್ಮ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಿದ್ದಾರೆ. ಪರಿಸರ ಸಂರಕ್ಷಣೆ ಅಂತರ್ಜಲ ನಿರ್ವಹಣೆ ನೈರ್ಮಲ್ಯ ಶಿಕ್ಷಣ, ಗುಡಿ ಕೈಗಾರಿಕೆ, ಸಣ್ಣ ಉದ್ಯಮಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಪ್ರೋತ್ಸಾಹ ಮತ್ತು ತಮ್ಮ ಉದ್ಯಮದಲ್ಲಿ ಪ್ರಗತಿ ತೋರಿದ ಪ್ರತಿಭಾನ್ವಿತರನ್ನು ಗುರುತಿಸಿ ಅಭಿನಂದಿಸುವ ಮೂಲಕ ಇನ್ನೂ ಹೆಚ್ಚಿನ ಉತ್ತೇಜನವನ್ನು ನೀಡುವ ಕಾಯಕವನ್ನು ಸಂಸ್ಥೆಯು ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಾಡುತ್ತ ಬರುತ್ತಿದ್ದೇವೆ, ಸಮಾಜ ಸುಖ, ಸಂತೋಷದಿಂದ ಇರಬೇಕು ಎಂಬುದು ಶ್ರೀ ಕ್ಷೇತ್ರದ ಆಶಯವಾಗಿದೆ ಎಂದು ಹೇಳಿದರು.ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ಮಾತನಾಡಿ, ಮಹಿಳೆಯರಲ್ಲಿ ಅಪಾರವಾದ ಪ್ರತಿಭೆಯಿದೆ. ಅವಕಾಶಗಳು ದೊರೆತಲ್ಲಿ ಅವರು ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬಲ್ಲರು. ಸಂಸ್ಥೆಯಿಂದ ದೊರಕುವ ಸಾಲದ ನೆರವಿನಿಂದ ವಿವಿಧ ಉದ್ಯಮಗಳನ್ನು ಮಾಡುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡವರು ಅನೇಕರು ಇದ್ದಾರೆ. ಈ ರೀತಿ ಮುಂದುವರೆಯಲು ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರದ ಗುರುಗಳ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳುತ್ತ ಬರಲಾಗಿದೆ. ಆರೋಗ್ಯ ತಪಾಸಣಾ ಶಿಬಿರ, ದೇವಾಲಯಗಳು, ಶಾಲಾ ಆವರಣದ ಸ್ವಚ್ಛತಾ ಕಾರ್ಯಕ್ರಮದಲ್ಲಿಯೂ ಸಹ ಸಂಸ್ಥೆಯ ಸದಸ್ಯರು ಸೇವೆ ಮಾಡುತ್ತ ಬಂದಿದ್ದಾರೆ. ಇವೆಲ್ಲಕ್ಕೂ ಸ್ಫೂರ್ತಿ ಎಂದರೆ ಮಹಿಳೆಯರು. ಸಂಸ್ಥೆಯ ಉದ್ದೇಶವನ್ನು ಅರಿತು ಸ್ಪಂದಿಸುತ್ತಿರುವುದು ಕಾರಣವಾಗಿದೆ ಎಂದರು
ಹಳೇಬೀಡಿನ ಶಿಕ್ಷಕಿ ಹಾಗೂ ಲೇಖಕಿ ಮಮತಾ ಪ್ರಭು, ಇಂದು ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪೋಷಕರ ನಡುವೆ ಸಿಲುಕಿ ನಲುಗುತ್ತಿದ್ದಾರೆ. ಪೋಷಕರು ತಮ್ಮ ಮಗು ಹೆಚ್ಚು ಅಂಕವನ್ನು ಗಳಿಸಬೇಕು, ಹೀಗೆ ಆಗಬೇಕು ಎಂಬ ಕಲ್ಪನೆಯನ್ನು ಹೊಂದಿ ಆ ನಿಟ್ಟಿನಲ್ಲಿಯೇ ಮಗುವಿನ ಮೇಲೆ ಒತ್ತಡ ಹಾಕಲಾಗುತ್ತಿದೆ, ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೆ ಭವಿಷ್ಯ ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಯಡವನಹಳ್ಳಿ ಮಹಿಳಾ ಸಮಾವೇಶದ ತಾಲೂಕ್ ಸಮಿತಿ ಅಧ್ಯಕ್ಷೆ . ಶೋಭಾ ನಡೆಸಿಕೊಟ್ಟರು
ನಿವೃತ್ತ ಉಪನ್ಯಾಸಕಿ ನಾಗಮ್ಮ, ಕ್ಷೇತ್ರ ಯೋಜನಾಧಿಕಾರಿ ಅಕ್ಷತಾ ರೈ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸಂಗೀತ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.ಹಾಸನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ನಗರ ಠಾಣೆಯ ಪೋಲಿಸ್ ಸಬ್ ಇನ್‌ಸ್ಪೆಕ್ಟರ್ ಲತಾ ಮಾತನಾಡಿದರು.