- ಜನಸ್ಪಂದನ ಮಹಿಳಾ ಸಮಾಜದ ಟೈಲರಿಂಗ್ ತರಬೇತಿ ಘಟಕ ಉದ್ಘಾಟನೆ । ಲಯನ್ಸ್ ಕ್ಲಬ್ ನಿಂದ 4 ಹೊಲಿಗೆ ಮಿಷನ್ ಕೊಡುಗೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಭಿಯಾಗಿ ಬದುಕಬೇಕು ಎಂದು ಲಯನ್ಸ್ ಕ್ಲಬ್ ನ ಜಿಲ್ಲಾ ಅಸಿಸ್ಟಂಟ್ ಗೌರ್ನರ್ ಕುಡಿಪಿ ಅರವಿಂದ ಶೆಣೈ ತಿಳಿಸಿದರು.
ಬುಧವಾರ ಪಟ್ಟಣ ಪಂಚಾಯಿತಿ ಸಮೀಪದಲ್ಲಿ ಜನ ಸ್ಪಂದನ ಮಹಿಳಾ ಸಮಾಜದ ಟೈಲರಿಂಗ್ ಘಟಕ ಉದ್ಘಾಟನೆ ಹಾಗೂ ಲಯನ್ಸ್ ಕ್ಲಬ್ ನಿಂದ 4 ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು. ಜನ ಸ್ಪಂದನ ಮಹಿಳಾ ಸಮಾಜದವರು ವೈಯ್ಯಕ್ತಿಕ ವಾಗಿ ಹಾಗೂ ಸಮಾಜದ ಮೂಲಕ ದುಡಿಮೆ ಮಾಡಿ ಆರ್ಥಿಕ ಸ್ವಾವಲಂಭಿಯಾಗಬೇಕು. ಲಯನ್ಸ್ ಕ್ಲಬ್ ಸ್ಪಂದನ ಮಹಿಳಾ ಸಮಾಜಕ್ಕೆ 4 ಹೊಲಿಗೆ ಯಂತ್ರ ನೀಡಿ ಹೊಲಿಗೆ ಕಲಿಯಲು ಶಿಕ್ಷಕರನ್ನು ಸಹ ನೇಮಿಸಿದೆ. ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಲಯನ್ಸ್ 317 ಡಿ ಜಿಲ್ಲೆ ಯಿಂದ ಮಂಗಳೂರಿನಲ್ಲಿ ಮಹಿಳೆಯರಿಗೆ ಸ್ಯಾರಿ ರನ್ನಿಂಗ್ ಸ್ಪರ್ಧೆ ಏರ್ಪಡಿಸಿದ್ದೆವು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಮಾಡಲಾಗಿತ್ತು. ಮಂಗಳೂರು ಲಯನ್ಸ್ 317 ಡಿ ಲಯನ್ಸ್ ಕ್ಲಬ್ ನಲ್ಲಿ 4 ಸಾವಿರ ಸದಸ್ಯರಲ್ಲಿ 1.500 ಮಹಿಳಾ ಸದಸ್ಯರಿದ್ದಾರೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ಎನ್.ಆರ್.ಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ಮಾತನಾಡಿ, ಪ್ರಸ್ತುತ ಮಹಿಳೆಯರು ಆರ್ಥಿಕ ಸ್ವಾತಂತ್ರದ ಹಾದಿಯಲ್ಲಿದ್ದಾರೆ. ಮಹಿಳೆಯರು ಜೀವನದಲ್ಲಿ ಮುಂದೆ ಬರಬೇಕಾದರೆ ಆರ್ಥಿಕ ಸ್ವಾವಲಂಭನೆ ಅತಿ ಮುಖ್ಯವಾಗಿದೆ. ವಿಶ್ವದ ಎಲ್ಲಾ ಕಡೆ ಮಹಿಳೆಯರು ಸಾಧನೆ ಮಾಡಿದ್ದಾರೆ. ಎನ್.ಆರ್.ಪುರ ಜನಸ್ಪಂದನ ಮಹಿಳಾ ಸಂಘಕ್ಕೆ ಲಯನ್ಸ್ ಕ್ಲಬ್ ಯಿಂದ ಸಹಾಯ ಹಸ್ತ ಚಾಚಿದ್ದೇವೆ. ಅನೇಕ ನಗರದಲ್ಲಿ ಮಹಿಳೆಯರು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ನರಸಿಂಹರಾಜಪುರದಲ್ಲೂ ಜನ ಸ್ಪಂದನ ಮಹಿಳಾ ಸಮಾಜ ಬಟ್ಟೆ ಅಂಗಡಿ, ರೆಡಿಮೇಡ್ ಬಟ್ಟೆ ತಯಾರಿಸಿ ಇನ್ನಷ್ಟು ಉತ್ತಮ ವಾಗಿ ಬೆಳವಣಿಗೆ ಹೊಂದಲಿ ಎಂದು ಆಶಯ ವ್ಯಕ್ತಪಡಿಸಿದರು.
ಜನಸ್ಪಂದನಾ ಮಹಿಳಾ ಸಮಾಜದ ಅಧ್ಯಕ್ಷೆ ಜುಬೇದ ಮಾತನಾಡಿ, ಲಯನ್ಸ್ ಕ್ಲಬ್ ಸೇವೆಯಲ್ಲಿ ಮುಂದೆ ಇದ್ದಾರೆ. ಜನ ಸ್ಪಂದನ ಮಹಿಳಾ ಸಮಾಜಕ್ಕೆ ಹೊಲಿಗೆ ಯಂತ್ರ ನೀಡುವುದರ ಜೊತೆಗೆ ಶಿಕ್ಷಕರನ್ನು ನೇಮಿಸಿ ಸಂಬಳ ನೀಡುವುದಾಗಿ ಭರವಸೆ ನೀಡಿದ್ದಾರೆ. ಜನ ಸ್ಪಂದನಾ ಮಹಿಳಾ ಸಮಾಜ ಹಿಂದೆ 500 ರಿಂದ 600 ಮಹಿಳೆಯರಿಗೆ ತರಬೇತಿ ನೀಡಿತ್ತು. ಮುಂದಿನ ದಿನಗಳಲ್ಲಿ ಸ್ಪಂದನಾ ಮಹಿಳಾ ಸಮಾಜದಿಂದ ಟೈಲರಿಂಗ್, ಮೆಹಂದಿ, ಬ್ಯೂಟಿ ಪಾರ್ಲರ್ ತರಬೇತಿ ನೀಡಲಾಗುವುದು ಎಂದರು.
ಅತಿಥಿಗಳಾಗಿ ಲಯನ್ಸ್ ಕ್ಲಬ್ ನ 317 ಡಿ ಜಿಲ್ಲಾ ರೀಜನ್ ಚೇರ್ಮನ್ ಪಿ.ಸಿಜು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಲ್ದೋ, ಖಜಾಂಚಿ ಸಿಜು, ಜೋನ್ ಛೇರ್ಮನ್ ಜೇಮ್ಸ್, ಲಯನ್ಸ್ ಕ್ಲಬ್ ಸದಸ್ಯ ಡಿ.ರಮೇಶ್ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸ್ಪಂದನ ಮಹಿಳಾ ಸಮಾಜಕ್ಕೆ ಲಯನ್ಸ್ ಕ್ಲಬ್ ನಿಂದ 4 ಹೊಲಿಗೆ ಯಂತ್ರವನ್ನು ನೀಡಲಾಯಿತು. ಸುನೀತ ಕಾರ್ಯಕ್ರಮ ನಿರೂಪಿಸಿದರು.