ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಲೋಕಸಭೆಯಲ್ಲಿ ಅಂಗೀಕಾರವಾಗಬೇಕಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಅನುಮೋದನೆಗೊಂಡು ಕಾರ್ಯರೂಪಕ್ಕೆ ಬರುವ ವಿಶ್ವಾಸವಿದೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂಬುದು ನಮ್ಮ ನಿಲುವು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು:
‘ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಲೋಕಸಭೆಯಲ್ಲಿ ಅಂಗೀಕಾರವಾಗಬೇಕಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಅನುಮೋದನೆಗೊಂಡು ಕಾರ್ಯರೂಪಕ್ಕೆ ಬರುವ ವಿಶ್ವಾಸವಿದೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂಬುದು ನಮ್ಮ ನಿಲುವು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನ.17 ಹಾಗೂ 18 ರಂದು ನಡೆಯಲಿರುವ ಕಾಮನ್ ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತೀಯ ಪ್ರಾದೇಶಿಕ ಸಮ್ಮೇಳನದ ಲಾಂಛನ ಶನಿವಾರ ವಿಧಾನಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.ಈ ಹಿಂದೆ ರಾಜೀವ್ ಗಾಂಧಿ ಅವರು ಪಂಚಾಯತ್ನಿಂದ ಹಿಡಿದು ಜಿಲ್ಲಾ ಆಡಳಿತದವರೆಗೆ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ತಂದಿದ್ದರು. ಇದೀಗ ವಿಧಾನಸಭೆ, ಲೋಕಸಭೆಯಲ್ಲೂ ಮೀಸಲಾತಿ ತರಬೇಕು ಎಂಬ ಚರ್ಚೆ ಬಂದಿದೆ. ಎಲ್ಲಾ ರಾಜಕೀಯ ಪಕ್ಷಗಳು ಮಹಿಳಾ ಮೀಸಲಾತಿ ಪರವಾಗಿವೆ ಎನ್ನುವ ಅಭಿಪ್ರಾಯ ನನ್ನದು ಎಂದು ಹೇಳಿದರು.ಸಿಡಬ್ಲ್ಯುಪಿ ಸಮ್ಮೇಳನ ಐತಿಹಾಸಿಕ ಮೈಲಿಗಲ್ಲು-ಸಿಎಂ:
ನ.17 ಮತ್ತು 18 ರಂದು ನಡೆಯಲಿರುವ ಸಿಡಬ್ಲ್ಯುಪಿ ಐತಿಹಾಸಿಕ ಮೈಲುಗಲ್ಲು. ಸಿಡಬ್ಲ್ಯುಪಿ ಭಾರತ ವಲಯದ ಅಧ್ಯಕ್ಷರಾದ ಡಿ.ಪುರಂದೇಶ್ವರಿ ನಾಯಕತ್ವದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ಇರಲಿದೆ. ಈ ಸಮ್ಮೇಳನದ ಯಶಸ್ಸಿಗೆ ವಿಧಾನಸಭಾ ಸ್ಪೀಕರ್ ಜಿ.ಎಸ್.ಪಾಟೀಲ್ ಮತ್ತು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರ ಮೂಲಕ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಮಹಿಳೆಯರದ್ದೇ ಮೇಲುಗೈ:ನಮ್ಮ ರಾಜ್ಯದ ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿಗಳು, ವಿಧಾನಸಭೆ ಕಾರ್ಯದರ್ಶಿ, ವಿಧಾನ ಪರಿಷತ್ ಕಾರ್ಯದರ್ಶಿ ಹಾಗೂ ಉಪಸಭಾಪತಿಗಳ ಸ್ಥಾನದಲ್ಲಿ ಮಹಿಳೆಯರೇ ಇದ್ದಾರೆ. ಇವರೆಲ್ಲರಿಗೂ ನಮಸ್ಕರಿಸಿ ನಾವು ಕೆಲಸ ಮಾಡಿಸಿಕೊಳ್ಳುವಂತಹ ಸುಸಂದರ್ಭ ಒದಗಿಬಂದಿದೆ. ಹೆಣ್ಣು ಕುಟುಂಬದ ಕಣ್ಣು. ಮಹಿಳೆ ಸಬಲಳಾದರೆ ಪುರುಷರೂ ಸಬಲರಾಗುತ್ತಾರೆ. ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರಾಬಲ್ಯ ಸಂತೋಷಕರ ಸಂಗತಿ ಎಂದು ಮುಖ್ಯಮಂತ್ರಿ ಹೇಳಿದರು.
ನಾಯಕತ್ವ ಬಲವರ್ಧನೆಗೆ ವೇದಿಕೆ:ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷರಾದ ಡಾ.ಡಿ.ಪುರಂದೇಶ್ವರಿ ಮಾತನಾಡಿ, ಮಹಿಳೆಯರು ಶಾಸನಸಭೆಗಳಿಗೆ ಆಯ್ಕೆಯಾಗುವುದಷ್ಟೇ ಅಲ್ಲ, ನೀತಿ ನಿರೂಪಣೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿಯೂ ಪರಿಣಾಮಕಾರಿಯಾಗಿ ಭಾಗವಹಿಸಬೇಕು. ಈ ಸಮ್ಮೇಳನ ಮಹಿಳಾ ನಾಯಕತ್ವ ಬಲವರ್ಧನೆಗೆ ವೇದಿಕೆಯಾಗಲಿದೆ ಎಂದು ಹೇಳಿದರು.
ಈ ವೇಳೆ ವಿಧಾನಪರಿಷತ್ ಉಪಸಭಾಪತಿ ಡಾ. ಉಮಾಶ್ರೀ, ಪರಿಷತ್ ಸದಸ್ಯ ಗೋವಿಂದರಾಜು, ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ವಿಧಾನಪರಿಷತ್ ಕಾರ್ಯದರ್ಶಿ ಜ್ಯೋತಿ ಹಾಜರಿದ್ದರು.ಸಮ್ಮೇಳನಕ್ಕೆ ವಿಶಿಷ್ಟ ಗುರುತು ರೂಪಿಸುವ ಅವಕಾಶ ಸಿಕ್ಕಿದ್ದು ಹೆಮ್ಮೆ:ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್ ಮಾತನಾಡಿ, ಅಂತಾರಾಷ್ಟ್ರೀಯ ಮಹತ್ವದ ಸಮ್ಮೇಳನಕ್ಕೆ ಪ್ರತ್ಯೇಕ ಲಾಂಛನ ರೂಪಿಸಿ, ವಿಶಿಷ್ಟ ಗುರುತು ನೀಡುವ ಅವಕಾಶ ಕರ್ನಾಟಕಕ್ಕೆ ದೊರೆತಿರುವುದು ಹೆಮ್ಮೆಯ ಸಂಗತಿ. ಮಹಿಳಾ ನಾಯಕತ್ವ, ಏಕತೆ ಮತ್ತು ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಸಶಕ್ತ ಧ್ವನಿಯನ್ನು ಈ ಲಾಂಛನ ಪ್ರತಿಬಿಂಬಿಸುತ್ತದೆ. ಸೈಬರ್ ಸುರಕ್ಷತೆ ಹಾಗೂ ನೂತನ ಮಹಿಳಾ ಜನಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡುವ ಸಮ್ಮೇಳನದ ಆಶಯ ಅತ್ಯಂತ ಪ್ರಸ್ತುತವಾಗಿದೆ ಎಂದು ಅಭಿಪ್ರಾಯಪಟ್ಟರು.ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ ಸುಚೇತಾ ಕೃಪಲಾನಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಾಧನೆಗಳು ಅಪಾರ. ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ ಎಂದರು.