ಮಹಿಳೆಯರು ದೈಹಿಕ, ಮಾನಸಿಕ ಆರೋಗ್ಯ ಸಮವಾಗಿ ಕಾಪಾಡಿಕೊಳ್ಳಿ: ಡಾ.ರೇಖಾ

| Published : Mar 18 2025, 12:30 AM IST

ಮಹಿಳೆಯರು ದೈಹಿಕ, ಮಾನಸಿಕ ಆರೋಗ್ಯ ಸಮವಾಗಿ ಕಾಪಾಡಿಕೊಳ್ಳಿ: ಡಾ.ರೇಖಾ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಎಂತಹ ಕೆಲಸವನ್ನೇ ಆಗಲಿ ಸಮರ್ಥವಾಗಿ ನಿಭಾಯಿಸುವ ಶಕ್ತಿ ಆಕೆಯದು. ಆಧುನಿಕ ಯುಗದಲ್ಲಿ ಆಕೆ ತನ್ನನ್ನು ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ತನ್ನ ಸಾಮರ್ಥ್ಯ, ಪ್ರಾಬಲ್ಯವನ್ನು ಮೆರೆದಿದ್ದಾಳೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಹಿಳೆಯರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಮತೋಲನವಾಗಿ ಕಾಪಾಡಿಕೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದ ಯೂತ್ ಲೀಡರ್‌ ಶಿಪ್ ತರಬೇತಿ ಕೇಂದ್ರದ (ವಿ-ಲೀಡ್) ನಿರ್ದೇಶಕಿ ಡಾ.ರೇಖಾ ತಿಳಿಸಿದರು.

ನಗರದ ರುಡ್‌ ಸೆಟ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಎನ್.ಆರ್.ಎಲ್.ಎಂ. ಯೋಜನೆಯ ಪ್ರಾಯೋಜಕತ್ವದ 10 ದಿನಗಳ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಎಂತಹ ಕೆಲಸವನ್ನೇ ಆಗಲಿ ಸಮರ್ಥವಾಗಿ ನಿಭಾಯಿಸುವ ಶಕ್ತಿ ಆಕೆಯದು. ಆಧುನಿಕ ಯುಗದಲ್ಲಿ ಆಕೆ ತನ್ನನ್ನು ಎಲ್ಲಾ ಕಾರ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ತನ್ನ ಸಾಮರ್ಥ್ಯ, ಪ್ರಾಬಲ್ಯವನ್ನು ಮೆರೆದಿದ್ದಾಳೆ ಎಂದರು.

ಒಳಗಿನ ಹಾಗೂ ಹೊರಗಿನ ಕೆಲಸಗಳೆರಡನ್ನೂ ಶ್ರೇಣೀಕರಸಿದೆ ಸಮಾನ ಆಸಕ್ತಿಯಿಂದ, ಸಮಾನ ಪ್ರೀತಿಯಲ್ಲಿ, ಸಮಾನ ದಕ್ಷತೆಯಲ್ಲಿ ನಿಭಾಯಿಸುವ ಈ ಗುಣವೇ ಸ್ತ್ರೀಯರಲ್ಲಿರುವ ವಿಶಿಷ್ಟತೆ. ಇದಕ್ಕೆಲ್ಲಾ ಮೂಲ ಕಾರಣ ಮಹಿಳೆಯಲ್ಲಿರವ ಮನೋಬಲ. ಮನಸ್ಸೇ ಎಲ್ಲಕ್ಕೂ ಮೂಲ. ಈ ಮನಸ್ಸು ಅತ್ಯಂತ ಸೂಕ್ಷ್ಮ ಹಾಗೂ ಸಮರ್ಥವಾಗಿದ್ದರೇ ಇಡೀ ಪ್ರಪಂಚವನ್ನೇ ಅರಿತು, ಅನುಭವಿಸಿ ಆನಂದಿಸಲು ಸಾಧ್ಯ. ನಮ್ಮ ಸಂಕಲ್ಪಶಕ್ತಿಯನ್ನು ದೃಢವಾಗಿರಿಸಿಕೊಂಡು ವೃತ್ತಿಯನ್ನು ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಕಟ್ಟಿಕೊಳ್ಳಿ ಎಂದು ಅವರು ಸಲಹೆ ನೀಡಿದರು.

ಅಣಬೆ ಬೇಸಾಯ ಇಂದು ಉತ್ತಮ ಬೇಡಿಕೆ ಹಾಗೂ ಹೆಚ್ಚಿನ ಮಾರುಕಟ್ಟೆಯನ್ನು ಹೊಂದಿರುವ ಉದ್ಯೋಗವಾಗಿದ್ದು, ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಿರಿ, ಅಣಬೆಯಿಂದ ತಯಾರು ಮಾಡಬಹುದಾದ ಮೌಲ್ಯವರ್ಧಿತ ಉತ್ಪನ್ನಗಳ ಕಡೆಗೆ ಗಮನಹರಿಸಿ ಎಂದರು.

ರುಡ್‌ ಸೆಟ್ ಸಂಸ್ಥೆಯ ನಿರ್ದೇಶಕಿ ಕೆ.ಎಸ್. ಸರಿತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಏಳಿಗೆ ಸಾಧಿಸಲು ವೃತ್ತಿ ಕೌಶಲ್ಯಗಳ ಅಭಿವೃದ್ಧಿ ಮಾಡಿಕೊಳ್ಳುವುದು ಮುಖ್ಯ. ವೃತ್ತಿ ಕೌಶಲ್ಯಗಳ ನೈಪುಣ್ಯತೆಯನ್ನು ಸಾಧಿಸಿರಿ ಎಂದರು.

ಇದೇ ವೇಳೆ ಯಶಸ್ವಿ ಮಹಿಳಾ ಉದ್ಯಮಶೀಲರಾದ ಹುಣಸೂರಿನ ನವಚೇತನಾ ಟ್ರಸ್ಟ್ ಗಂಗಾ, ಎಚ್.ಡಿ. ಕೋಟೆ ಹ್ಯಾಂಡ್ ಪೋಸ್ಟ್ ನ ಚಂದನ ಡಿಸೈನ್ ಸೆಂಟರ್ ನ ಪವಿತ್ರಾ ಅವರನ್ನು ಸನ್ಮಾನಿಸಲಾಯಿತು.

ಒಟ್ಟು ಕಾರ್ಯಕ್ರಮದಲ್ಲಿ 65 ಜನ ಶಿಬಿರಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಆರ್. ಪಾಲ್‌ ರಾಜ್ ಸ್ವಾಗತಿಸಿದರು. ಲತಾಮಣಿ ನಿರೂಪಿಸಿದರು.