ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಡಾ.ಸುಮನಾ

| Published : Mar 30 2024, 12:46 AM IST

ಸಾರಾಂಶ

ಟೈಡ್ ಸಂಸ್ಥೆಯ ಮಹಿಳಾ ತಂತ್ರಜ್ಞಾನ ಉದ್ಯಮ ವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರು ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಡಾ.ಸುಮನಾ ಹೇಳಿದರು.

ಟೈಡ್ ಸಂಸ್ಥೆಯ ಮಹಿಳಾ ತಂತ್ರಜ್ಞಾನ ಉದ್ಯಮ ವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರು ಆರೋಗ್ಯ ಬಗ್ಗೆ ಕಾಳಜಿ ವಹಿಸಿಬೇಕು ಎಂದು ಡಾ.ಸುಮನಾ ಹೇಳಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ತ್ಯಾಗ, ಆತ್ಮಸ್ಥೈರ್ಯ, ಸಾಹಸ ಹಾಗೂ ಅಪ್ರತಿಮ ಸಾಧನೆಗಳ ಪ್ರತೀಕವಾಗಿರುವ ಮಹಿಳೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ಹೊಂದಬೇಕು. ಆ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸಮರ್ಥರಾಗಬೇಕಿದೆ ಎಂದು ತಾಲೂಕಿನ ಕೊನೇಹಳ್ಳಿ ಆಯುಷ್ ವೈದ್ಯಾಧಿಕಾರಿ ಡಾ.ಸುಮನಾ ತಿಳಿಸಿದರು.

ತಾಲೂಕಿನ ಅರಳಗುಪ್ಪೆಯಲ್ಲಿರುವ ಟೈಡ್ ಸಂಸ್ಥೆಯ ಮಹಿಳಾ ತಂತ್ರಜ್ಞಾನ ಉದ್ಯಮವನದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕುಟುಂಬ ನಿರ್ವಹಣೆ ಜೊತೆಗೆ ಮಹಿಳೆಯರು ಹಲವಾರು ಸಾಧನೆ ಮಾಡಿದ್ದಾರೆ. ಸಮಾಜದಲ್ಲಿ ಸಾಕಷ್ಟು ಮಹಿಳೆಯರು ಸಾಧನೆ ಮಾಡಿ ಸಮಾಜದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ದಿನಚರ್ಯ ಮತ್ತು ಋತುಚರ್ಯ ದೊಂದಿಗೆ ಹಿತಮಿತವಾದ ಆಹಾರ ಸೇವಿಸುತ್ತಾ ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ಮಹಿಳೆಯರು ಪ್ರತಿನಿತ್ಯ ಮಾಡಬೇಕು.

ಈ ಬಾರಿಯ ಮಹಿಳಾ ದಿನಾಚರಣೆಯ ಘೋಷಣೆಯಂತೆ ಎಲ್ಲಾ ಬಗೆಯ ಶಕ್ತಿಗಳನ್ನು ಅಭಿವೃದ್ಧಿಪಡಿಸುತ್ತಾ ಮಹಿಳೆಯನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲು ನಮ್ಮ ಭಾರತೀಯ ಆಯುಷ್ ಪದ್ಧತಿಯು ಬಹುಮುಖ್ಯ ಪಾತ್ರವಹಿಸುತ್ತದೆ ಎಂದರು. ಮಕ್ಕಳ ಪಾಲನೆ ಪೋಷಣೆಯಲ್ಲೂ ಆಯುರ್ವೇದ ಜ್ಞಾನ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಆಯುರ್ವೇದ ಕುರಿತಾದ ಮಹತ್ವವನ್ನು ತಿಳಿಸಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಬದುಕು ಮಹಿಳಾ ಸಹಾಯವಾಣಿ ನಿರ್ದೇಶಕ ಬಿ.ಎಸ್.ನಂದಕುಮಾರ್ ಮಾತನಾಡಿ, ಹೆಣ್ಣಿನ ಮೇಲೆ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆಗಳಂತಹ ಕಿರುಕುಳಗಳು ಇಂದಿಗೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತ ರಾಗಬಾರದು. ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗೆ ಇತಿಶ್ರೀ ಹಾಡಬೇಕೆಂದು ಮಹಿಳೆಯರ ನಡೆ ಹಾಗೂ ಎದುರಾಗುವ ಸಮಸ್ಯೆಗಳ ಬಗ್ಗೆ ತಿಳಿಸಿದರು.

ವಕೀಲೆ ಹಾಗೂ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತರಾದ ಶೋಭಾ ಜಯದೇವ್ ಮಾತನಾಡಿ, ಮಹಿಳೆಯರ ಸಾಧನೆಗಳ ನೆನಪು, ಪ್ರಚಲಿತ ವಿದ್ಯಮಾನಗಳಲ್ಲಿ ಮಹಿಳೆಯರ ಸ್ಥಾನಮಾನ ಇವುಗಳ ಬಗ್ಗೆ ತಿಳಿಯುವುದಕ್ಕಾಗಿ ಈ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುವುದು. ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದ್ದು, ಪ್ರತಿಯೊಬ್ಬರು ಶಿಕ್ಷಣವಂತರಾಗಿ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಇತಿಶ್ರೀ ಹಾಡಬೇಕೆಂದರು.

ನಬಾರ್ಡ್ ಡಿಡಿಎಂ ಕೀರ್ತಿಪ್ರಭ ಮಾತನಾಡಿ, ಹಲವಾರು ವರ್ಷಗಳಿಂದ ಟೈಡ್ ಸಂಸ್ಥೆಯ ಜೊತೆಗೂಡಿ ಸಮಾಜದ ಒಳಿತಿಗಾಗಿ ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಿದ್ದು, ಮಹಿಳೆಯರಿಗೆ ಸಂಘದ ಮೂಲಕ ಹೊಸ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸುವಂತೆ ಮತ್ತು ರೈತಾಪಿ ವರ್ಗದವರಿಗೆ ನಬಾರ್ಡ್ ಸಂಸ್ಥೆಯ ನೆರವಿ ಬಗ್ಗೆ ತಿಳಿಸಿದರು.

ಎನ್.ಆರ್.ಎಲ್.ಎಂ. ಅಧಿಕಾರಿ ಚಂದ್ರಕಲಾ ಮಾತನಾಡಿ, ಮಹಿಳೆಯರ ಸಂಘದ ಸೌಲಭ್ಯಗಳು ಹಾಗೂ ಮಹಿಳಾ ಒಕ್ಕೂಟದ ವಿಚಾರದ ಬಗ್ಗೆ ತಿಳಿಸಿದರು. ಟೈಡ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕರಾದ ಸಮಿತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಟೈಡ್ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಮುಂದಿನ ದಿನಗಳಲ್ಲಿ ಸಂಸ್ಥೆಯು ಹೆಚ್ಚಿನ ರೀತಿಯ ನೆರವು ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಟೈಡ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕಿ ಎಸ್.ಎಂ.ಸುಮಾ, ಸಂವಹನ ನಿರ್ದೇಶಕರು ಶೃತಿ ನಿಂಬರಗಿ, ಟೈಡ್ ವ್ಯವಸ್ಥಾಪಕ ರಾದ ಶೈಲಾ, ಮಹಿಳಾ ತಂತ್ರಜ್ಞಾನ ಉದ್ಯಮವನದ ರಂಗಸ್ವಾಮಿ, ಪ್ರೇಮನಾಥ್, ಜ್ಯೋತಿ ಭಾಸ್ಕರ್, ನಾಗರಾಜು, ಚಿಕ್ಕನಾಯಕಹಳ್ಳಿ ರವಿ, ಅರಸೀಕೆರೆ ಅರವಿಂದ ಗಾರ್ಮೆಂಟ್ಸ್‌ನ ದೀಪಕ್, ಜಾನ್, ಆರ್.ಕೆ. ಗಾರ್ಮೆಂಟ್ಸ್ ಸಿದ್ದಲಿಂಗಪ್ಪ ಮತ್ತಿತರರಿದ್ದರು. ನಂತರ ಪ್ರಗತಿ ಶೀಲ ಉದ್ಯಮಿಗಳಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.