ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಸಬಲೀಕರಣಗೊಳ್ಳಲು ಇಂದು ಹೆಚ್ಚಿನ ಅವಕಾಶಗಳಿವೆ. ಆತ್ಮವಿಶ್ವಾಸದಿಂದ ಮುನ್ನುಗ್ಗಿ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಉಪನ್ಯಾಸಕಿ ನಂದಿನಿ ಅಭಿಪ್ರಾಯಪಟ್ಟರು.ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಬೋಧಕ ಬೋಧಕೇತರ ಸಂಘ ಹಾಗೂ ರಾಷ್ಟೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಮಹಿಳೆಯರು ಪ್ರಸ್ತುತ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ ಮುಖ್ಯವಾಗಿ ಕುಟುಂಬ ಮತ್ತು ಉದ್ಯೋಗ ಎರಡೂ ಕ್ಷೇತ್ರಗಳನ್ನು ಸಮನ್ವಯಗೊಳಿಸಿ ಸಮತೋಲನ ಕಾಪಾಡಿಕೊಳ್ಳುವ ಜಾಣ್ಮೆಯನ್ನು ಮಹಿಳೆಯರು ರೂಡಿಸಿಕೊಳ್ಳಬೇಕಾಗಿದೆ. ತಮ್ಮ ಸಾಧನೆಗೆ ಕೌಟುಂಬಿಕ ಬೆಂಬಲವನ್ನು ಪಡೆದುಕೊಳ್ಳುವುದು ಮುಖ್ಯವಾಗಿದೆ ಎಂದರು.
ಎಂಬಿಎ ವಿಭಾಗದ ಉಪನ್ಯಾಸಕಿ ಶಶಿರ ಅವರು ಮಹಿಳಾ ದಿನಾಚರಣೆಯ ಮಹಿಳೆಯರ ಹಕ್ಕುಗಳು ಅವರ ಕರ್ತವ್ಯಗಳು ಸಂವಿಧಾನಾತ್ಮಕವಾಗಿ ಇರುವ ರಕ್ಷಣೆಯ ಕಾಯ್ದೆಗಳು ಮೊದಲಾದ ವಿಚಾರಗಳನ್ನು ಚರ್ಚಿಸಿ ಅರಿತುಕೊಂಡು ಸಸಕ್ತಗೊಳ್ಳಲು ಪೂರಕವಾಗಿದೆ ಎಂದರು.ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಉಪನ್ಯಾಸಕಿ ಶ್ವೇತಾ ಅವರು ಎಲ್ಲಿ ಹೆಣ್ಣನ್ನು ಪೂಜಿಸುವರು ಅಲ್ಲಿ ದೇವತೆಯನ್ನೇ ಪೂಜಿಸಿದಷ್ಟೇ ಗೌರವ ಇರುವಂತ ಸಮಾಜದಲ್ಲಿ ಮಹಿಳೆಯರನ್ನ ಗೌರವದಿಂದ ನಡೆಸಿಕೊಳ್ಳುವ ಸಮಾಜ ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ವಾಣಿಜ್ಯ ವಿಭಾಗದ ಉಪನ್ಯಾಸಕಿ ಕಾಮಿಲ ತಬಸುಮ್ ಮಾತನಾಡಿ, ಮಹಿಳೆಯ ಮೇಲೆ ಹಲವು ಬಗೆಯ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರು ತಕ್ಷಣ ಪ್ರತಿಭಟಿಸಬೇಕು. ಇದಕ್ಕೆ ಜಾಗೃತಿ ಮೂಡಿಸಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ಜಾಗೃತಿ ಮೂಡಿಸಬೇಕು ಎಂದರು.ಕನ್ನಡ ಉಪನ್ಯಾಸಕ ಬಿ.ಗುರುರಾಜ ಯರಗನಹಳ್ಳಿ ಮಾತನಾಡಿ, ಇಪ್ಪತ್ತನೇ ಶತಮಾನದ ಮೊದಲ ದಶಕದಿಂದ ಪ್ರಾರಂಭವಾದ ಮಹಿಳಾ ದಿನಾಚರಣೆಯು ಅಂದಿನಿಂದ ಇಂದಿನವರೆಗೂ ಮಹಿಳೆಯ ಹಕ್ಕಿಗಾಗಿ ಸಮಾನತೆಗಾಗಿ ಲಿಂಗಭೇದ ವಿರುದ್ಧ ಹಲವು ಹೋರಾಟಗಳನ್ನು ಮಾಡಿಕೊಂಡು ಬರಲಾಗಿದೆ. ಎಲ್ಲಾ ರಾಷ್ಟ್ರಗಳು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿವೆ. ಆದರೆ ಇಂದಿಗೂ ಲಿಂಗಸಮಾನತೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪುರುಷರಿಗೂ ಸಮಾಲೋಚನಾ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಮಹಿಳೆಯರ ಬಗ್ಗೆ ಇರುವ ಧೋರಣೆಗಳು ಬದಲಾಗಬೇಕಿದೆ. ಮಹಿಳೆಯರಿಗೆ ಅಷ್ಟೇ ಅಲ್ಲ ಪುರುಷರಿಗೂ ಜಾಗೃತಿ ಕಾರ್ಯಕ್ರಮಗಳು ಎಲ್ಲಡೆ ನಡೆಯಬೇಕು ಎಂದರು.ಚಾ.ವಿ.ವಿ.ಬೋಧಕ ಬೋಧಕೇತರ ಸಂಘದ ಅಧ್ಯಕ್ಷ ಡಾ. ಮಹದೇವಮೂರ್ತಿ ಮಾತನಾಡಿ, ಭಾರತ ದೇಶ ಹೆಣ್ಣಿಗೆ ಹೆಚ್ಚಿನ ಗೌರವಸ್ಥಾನಮಾನವನ್ನು ನೀಡಿದೆ. ಮಹಿಳೆಯರನ್ನು ಗೌರವಿಸಬೇಕು ಹಾಗೂ ಪ್ರೀತಿಯಿಂದ ನಡೆಸಿಕೊಳ್ಳಬೇಕು ಎಂದರು.
ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಆರ್ ಮಹೇಶ್ ಅವರು ಮಾತನಾಡಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಸಕ್ರಿಯಾಗಿ ಪಾಲ್ಗೊಂಡು ತಮ್ಮ ಅಸ್ತಿತ್ವವನ್ನು ಹೋರಾಟದ ಮೂಲಕ ಕಂಡುಕೊಳ್ಳಬೇಕು ಎಂದರು.ಗಣಿತ ವಿಭಾಗದ ಉಪನ್ಯಾಸಕಿ ಹಾಜೀರ ನಜ್ರೀನ್ ಮಾತನಾಡಿದರು.ದಿವ್ಯಶ್ರೀ, ರಾಣಿ. ಪಿ., ಭಾನುಪ್ರಿಯ, ದೀಪಾ, ಚೇತನ್, ಸಚಿನ್ ಸಿ.ವಿ. ಹಾಜರಿದ್ದರು.