ಕನ್ನಡಪ್ರಭ ವಾರ್ತೆ ಬೆಳಗಾವಿ

ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡುವಂತೆ ಆಗ್ರಹಿಸಿ ಬೆಳಗಾವಿಯ ಚವ್ಹಾಟ್ ಗಲ್ಲಿಯಲ್ಲಿ ಮಂಗಳವಾರ ಸ್ಥಳೀಯ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಚವ್ಹಾಟ್ ಗಲ್ಲಿಯಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಗಂಭೀರವಾಗುತ್ತಿದ್ದು, ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ನಾವು ದಿನವೂ ನೀರಿಗಾಗಿ ಅಲೆದಾಡಬೇಕಾಗಿದೆ. ಮನೆ ಕೆಲಸಗಳಿಗೂ, ಕುಡಿಯಲು ಕೂಡ ನೀರು ಸಿಗುತ್ತಿಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ನೀರು ಕೊಡಿ, ನೀರು ಕೊಡಿ ಎಂದು ಘೋಷಣೆ ಕೂಗಿ ಖಾಲಿ ಕೊಡಗಳನ್ನು ಪ್ರದರ್ಶಿಸಿದ ಮಹಿಳೆಯರು, ಎಲ್‌ ಆ್ಯಂಡ್‌ ಟಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಪರಿಣಾಮವಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಕ್ಷಣವೇ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳುವಂತೆ ಮಹಿಳೆಯರು ಆಗ್ರಹಿಸಿದರು.8 ರಿಂದ 15 ದಿನಗಳಿಗೊಮ್ಮೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ನಾಲ್ಕು ದಿನಕ್ಕೊಮ್ಮೆ ನೀರು ಬಿಡಬೇಕು. ಈಗ ರಸ್ತೆ ಅಗೆದಿರುವುದರಿಂದ ಕುಡಿಯುವ ನೀರಿನ ಜೊತೆಗೆ ಚರಂಡಿ ನೀರು ಸೇರುತ್ತಿದೆ. ಪಾಲಿಕೆ ಆಯುಕ್ತರಿಗೆ ದೂರು ನೀಡಿದರೂ ಸ್ಪಂದನೆ ಇಲ್ಲ. ಇದರಿಂದ ವಾಂತಿ, ಬೇಧಿ ಸಮಸ್ಯೆಗಳು ಉಂಟಾಗುತ್ತಿವೆ. ಇದಕ್ಕೆ ಯಾರು ಜವಾಬ್ದಾರರು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.ಇಲ್ಲಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು ನಂತರ ನಮ್ಮ ಕಡೆ ಗಮನ ಹರಿಸಿಲ್ಲ. ಬಿಲ್‌ ವಸೂಲಿ ಮಾಡಲು ಮಾತ್ರ ಬರುತ್ತಾರೆ. ನಮ್ಮ ಗಲ್ಲಿಯಲ್ಲಿ ನೀರು, ಚರಂಡಿ, ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿಯಾಗಿಲ್ಲ. ಅನುದಾನ ಯಾರ ಕಿಸೆಗೆ ಹೋಗಿದೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಈ ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಹಳೆಯ ನಳಗಳ ವ್ಯವಸ್ಥೆ ಉತ್ತಮವಾಗಿತ್ತು. ನಿರಂತರ ನೀರು ಯೋಜನೆ ತಂದರೂ ಪ್ರಯೋಜನವಾಗಿಲ್ಲ. ಹೆಸ್ಕಾಂ ಹಾಗೂ ಪಾಲಿಕೆ ಎಂಜಿನಿಯರ್‌ಗಳು ಬಂದು ಹೋದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು. ಅಕ್ಕಾತಾಯಿ ಸುತಾರ ಸೇರಿದಂತೆ ಸ್ಥಳೀಯ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.