ನಾಡಿನ ವಿವಿಧ ಮಠಗಳ ಮಠಾಧೀಶರು, ಹರಗುರು ಚರಮೂರ್ತಿಗಳು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಬೆಳ್ಳಿ ರಥೋತ್ಸವ ಇಡೀ ಹಾಲಕೆರೆ ಗ್ರಾಮವನ್ನು ಭಕ್ತಿ ಮತ್ತು ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿತು.

ನರೇಗಲ್ಲ: ನಾಡಿನಾದ್ಯಂತ ಅಪಾರ ಭಕ್ತರನ್ನು ಹೊಂದಿರುವ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಬೆಳ್ಳಿ ರಥೋತ್ಸವ ಸೋಮವಾರ ಅಪಾರ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು. ಬೆಳ್ಳಿ ರಥವನ್ನು ಮಹಿಳೆಯರೇ ಎಳೆದಿದ್ದು ವಿಶೇಷವಾಗಿತ್ತು.

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀಮಠದಿಂದ ಆರಂಭವಾದ ರಥೋತ್ಸವ ವಿವಿಧ ವಾದ್ಯಮೇಳಗಳ ನಡುವೆ ಪಾದಗಟ್ಟೆಯವರೆಗೆ ತೆರಳಿ ಅಲ್ಲಿಂದ ಸ್ವಸ್ಥಾನಕ್ಕೆ ಮರಳಿತು.

ನಾಡಿನ ವಿವಿಧ ಮಠಗಳ ಮಠಾಧೀಶರು, ಹರಗುರು ಚರಮೂರ್ತಿಗಳು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಬೆಳ್ಳಿ ರಥೋತ್ಸವ ಇಡೀ ಹಾಲಕೆರೆ ಗ್ರಾಮವನ್ನು ಭಕ್ತಿ ಮತ್ತು ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿತು.

ವಿಶೇಷವಾಗಿ ಮಹಿಳೆಯರು ಬೆಳ್ಳಿತೇರನ್ನು ಎಳೆಯುವ ಮೂಲಕ ರಥೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಹಿಳಾ ಸಮಾನತೆ ಹಾಗೂ ಸ್ತ್ರೀಯರಿಗೆ ಶ್ರೀಮಠ ನೀಡುತ್ತ ಬಂದಿರುವ ಗೌರವದ ಪ್ರತೀಕವಾಗಿ ಗಮನ ಸೆಳೆಯಿತು.

ರಥೋತ್ಸವ ವೇಳೆ ನೂರಾರು ಮಹಿಳೆಯರು ಆರತಿ ಬೆಳಗಿಸಿಕೊಂಡು, ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ಕುಂಭ ಹೊತ್ತು ಸಾಗಿದ ತಾಯಂದಿರು ಹಾಗೂ ಆರತಿ ಹಿಡಿದ ಮಹಿಳೆಯರ ಸಾಲು ಜಾತ್ರಾ ಮಹೋತ್ಸವಕ್ಕೆ ವಿಶೇಷ ಮೆರುಗು ನೀಡಿತು. ನೆರೆದಿದ್ದ ಸಹಸ್ರಾರು ಭಕ್ತರು ಜಯಘೋಷ ಕೂಗಿ ಭಕ್ತಿ ಸಮರ್ಪಿಸಿದರು. ರಥೋತ್ಸವ ವೇಳೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.180 ಕೆಜಿ ತೂಕದ ತೇರು

2005ರಲ್ಲಿ ಆಗಿನ ಪೀಠಾಧಿಪತಿಯಾಗಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿಯವರು ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿದ್ದರು. ಅಂದಿನಿಂದಲೂ ಪ್ರತಿವರ್ಷ ಜರುಗುವ ಶ್ರಾವಣದ ಎರಡನೇ ಸೋಮವಾರದಂದು ಬೆಳ್ಳಿ ರಥೋತ್ಸವಕ್ಕೆ ಮಹಿಳೆಯರೇ ಚಾಲನೆ ನೀಡುತ್ತಾರೆ. ಅಲ್ಲದೇ ತೇರನ್ನು ಮಹಿಳೆಯರೇ ಎಳೆಯುವುದು ವಿಶೇಷವಾಗಿದೆ. ರಥವು 180 ಕೆಜಿ ತೂಕ ಹೊಂದಿದೆ. 16 ಅಡಿ ಎತ್ತರವಿದೆ.