ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲ: ಶಾಸಕ ಯು.ಬಿ. ಬಣಕಾರ

| Published : Sep 13 2025, 02:05 AM IST

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲ: ಶಾಸಕ ಯು.ಬಿ. ಬಣಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಹಿರೇಕೆರೂರು ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಾವು ಶಾಸಕರಾದ ಬಳಿಕ ಸ್ಥಗಿತವಾಗಿದ್ದ 41 ಶೆಡ್ಯುಲ್‍ಗಳನ್ನು ಪ್ರಾರಂಭಿಸಲಾಗಿದೆ.

ರಟ್ಟೀಹಳ್ಳಿ: ರಾಜ್ಯದ ಜನಸಾಮಾನ್ಯರ ನೋವು- ನಲಿವುಗಳನ್ನು ಅರ್ಥ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಪ್ರಮುಖವಾಗಿ ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಶ್ಲಾಘಿಸಿದರು.

ತಾಲೂಕಿನ ಕುಡಪಲಿ ಗ್ರಾಮದ ಕುಡಪಲಿ- ಹಿರೇಕೆರೂರು ಸಂಪರ್ಕ ಕಲ್ಪಿಸುವ ನೂತನ ವಸತಿ ಬಸ್‍ ಸೇವೆಗೆ ಚಾಲನೆ ನೀಡಿ ಮಾತನಾಡಿ, ಅನೇಕ ವರ್ಷಗಳಿಂದ ಪ್ರಯಾಣಿಕರಿಗೆ ಅನುಕೂಲವಾಗಿದ್ದ ಕುಡಪಲಿ ವಸತಿ ಬಸ್ ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡ ಬಳಿಕ ಪ್ರಾರಂಭವಾಗಿರಲಿಲ್ಲ. ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಬಸ್‍ಗಳು ಬಂದ್ ಆಗಿದ್ದವು. 7 ವರ್ಷಗಳಿಂದ ಹಿರೇಕೆರೂರು ಘಟಕಕ್ಕೆ ಹೊಸ ಬಸ್‍ಗಳು ಬಂದಿರಲಿಲ್ಲ. 14 ಹೊಸ ಬಸ್‍ಗಳನ್ನು ತಾವು ಶಾಸಕರಾದ ಬಳಿಕ ಹಿರೇಕೆರೂರು ಘಟಕಕ್ಕೆ ನೀಡಲಾಗಿದೆ ಎಂದರು. ತಾಲೂಕಿನಾದ್ಯಂತ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಘಟಕ ವ್ಯವಸ್ಥಾಪಕ ಮಂಜುನಾಥ ಹಡಪದ ಅವರು. ಬಸ್‍ಗಳನ್ನು ವಿವಿಧ ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ನೀಡಬೇಕೆಂದು ಇವರಿಗೆ ಕೋರಿದರೆ ಮೇಲಧಿಕಾರಿಗಳ ಜತೆ ಚರ್ಚಿಸಿ ಕಾರ್ಯರೂಪಕ್ಕೆ ತರುತ್ತಾರೆ ಎಂದು ಪ್ರಶಂಸಿಸಿದರು.ಹಿರೇಕೆರೂರು ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಾವು ಶಾಸಕರಾದ ಬಳಿಕ ಸ್ಥಗಿತವಾಗಿದ್ದ 41 ಶೆಡ್ಯುಲ್‍ಗಳನ್ನು ಪ್ರಾರಂಭಿಸಲಾಗಿದೆ. ರಟ್ಟೀಹಳ್ಳಿ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸ್ಪಂದಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ₹8.5 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ಶೀಘ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಘಟಕ ವ್ಯವಸ್ಥಾಪಕ ಮಂಜುನಾಥ ಹಡಪದ, ಗ್ರಾಪಂ ಅಧ್ಯಕ್ಷರು, ಗ್ರಾಪಂ ಸದಸ್ಯರು, ತಾಪಂ ಮಾಜಿ ಅಧ್ಯಕ್ಷರು, ಗ್ಯಾರಂಟಿ ಸಮಿತಿ ಸದಸ್ಯರು ಇತರರು ಇದ್ದರು.