ಸಾರಾಂಶ
ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಇತರೆ ಸೌಲಭ್ಯ ಸರ್ಕಾರದಿಂದ ಒದಗಿಸಲಾಗುವುದು.
ಬಳ್ಳಾರಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಾಣಂತಿ ನಂದಿನಿ ಅವರ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷೀ ಚೌಧರಿ ಗುರುವಾರ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಮಕ್ಕಳಿಗೆ ಉನ್ನತ ಶಿಕ್ಷಣ, ಭದ್ರತೆ ಮತ್ತು ಮೃತ ಬಾಣಂತಿಯರ ಮಕ್ಕಳ ಜವಾಬ್ದಾರಿಯನ್ನು ಸರ್ಕಾರ ವಹಿಸುವಂತೆ, ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಇತರೆ ಸೌಲಭ್ಯ ಸರ್ಕಾರದಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಸರ್ಕಾರವು ಘೋಷಿಸಿದ ಪರಿಹಾರವನ್ನು ₹2 ಲಕ್ಷದಿಂದ ₹5 ಲಕ್ಷದವರೆಗೆ ನೀಡಲು ಪರಿಷ್ಕರಿಸಿ ಆದೇಶಿಸಿದೆ. ಮಕ್ಕಳ ಆರೈಕೆ, ಸಮಗ್ರ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಧೈರ್ಯ ತುಂಬಿದರು.
ಇದಕ್ಕೂ ಮುನ್ನ ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆಸ್ಪತ್ರೆಗೆ ಆಗಮಿಸಿದ್ದ ಹೊರರೋಗಿಗಳೊಂದಿಗೆ ಮಾತನಾಡಿ, ಆರೋಗ್ಯ ವಿಚಾರಿಸಿದರು.ನಂತರ ಮೋಕಾದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ದಾಸ್ತಾನು ಮಾಡಲಾಗಿರುವ ಆಹಾರ, ಮಕ್ಕಳಿಗೆ ವಿತರಿಸಿರುವ ಆಹಾರ, ಮಕ್ಕಳ ಆರೋಗ್ಯ ಮತ್ತು ಮಕ್ಕಳ ಹಾಜರಾತಿ ಕುರಿತಂತೆ ಮಾಹಿತಿ ಪಡೆದುಕೊಂಡರು.
ಮೆನು ಪ್ರಕಾರ ಮಕ್ಕಳಿಗೆ ಆಹಾರ ನೀಡಬೇಕು. ಅಂಗನವಾಡಿ ಕೇಂದ್ರದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಈ ವೇಳೆ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‌ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ತಹಶೀಲ್ದಾರ ಗುರುರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಳ್ಳಾರಿ ಬಿಮ್ಸ್‌ನಲ್ಲಿ ಮೃತಪಟ್ಟ ಬಾಣಂತಿ ನಂದಿನಿ ಅವರ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷೀ ಚೌಧರಿ ಗುರುವಾರ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿದರು.