ಸಾರಾಂಶ
75ನೇ ವರ್ಷದ ವಜ್ರ ಮಹೋತ್ಸವ ಸಮಾರಂಭ ಮಹಿಳಾ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್‌ಗೌಡ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಮಹಿಳಾ ಸಹಕಾರ ಸಂಘದ 75ನೇ ವರ್ಷದ ವಜ್ರ ಮಹೋತ್ಸವ ಸಮಾರಂಭ ಭಾನುವಾರ ಮಹಿಳಾ ಸಮಾಜದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಬೆಳವಣಿಗೆ ಮಹಿಳೆಯರಿಂದ ಮಾತ್ರ ಸಾಧ್ಯ. ತಮ್ಮ ಮನೆಯಿಂದಲೇ ಉತ್ತಮ ಪ್ರಜೆಗಳನ್ನು ನೀಡುವ ಕೆಲಸವನ್ನು ಮಾಡುವುದರೊಂದಿಗೆ, ಪುರುಷನ ಯಶಸ್ಸಿನ ಹಿಂದೆ ಯಾವಾಗಲೂ ಮಹಿಳೆ ನಿಲ್ಲುತ್ತಾಳೆ. ಶಿಕ್ಷಣ ಸೇರಿದಂತೆ ಸಮಾಜದಲ್ಲಿ ಸಮಾನತೆಗೆ ಹೆಚ್ಚಾಗಬೇಕಿದಲ್ಲಿ ಇನ್ನೂ ಮಹಿಳಾ ಸಂಘಗಳು ಹುಟ್ಟಬೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಶೈಲಜಾ ಮಾತನಾಡಿ, ಯಾವುದೇ ಸಹಕಾರ ಸಂಘಗಳು ಕಾನೂನು ರೀತಿಯಲ್ಲಿ ಮುನ್ನೆಡೆದಲ್ಲಿ ಅದಕ್ಕೆ ಯಾವುದೇ ಅಧಿಕಾರಿಗಳು ಅಡ್ಡಗಾಲು ಹಾಕುವುದಿಲ್ಲ. ಕೊಡಗಿನಲ್ಲಿ ಹೆಚ್ಚಿನ ಎಲ್ಲ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ತಮ್ಮ ಸಂಘಗಳಲ್ಲಿ ಯಾವುದೇ ರೀತಿಯ ತೊಡಕಾದಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶಾರದ ಶಂಕರಪ್ಪ, ಅರುಂಧತಿ ದೇವರಾಜು, ಲೀಲಾ ನಿರ್ವಾಣಿ, ಜಲಜಾ ಶೇಖರ್, ಸುಮಾ ಸುದೀಪ್, ಗಾಯತ್ರಿ ನಾಗರಾಜು ಹಾಗೂ ಸಂಘದ ವ್ಯವಸ್ಥಾಪಕ ಗುರುಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಿಗೆ ನಡೆದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರಾದ ಶೋಭಾ ಯಶ್ವಂತ್, ಗೀತಾ ರಾಜು, ಜ್ಯೋತಿ ಶುಭಾಕರ್, ವರಲಕ್ಷ್ಮೀ ಸಿದ್ಧೇಶ್ವರ್, ಚಂದ್ರಕಲಾ ಗಿರೀಶ್, ಅಮಿತ ಪ್ರದೀಪ್, ದಾಕ್ಷಾಯಣಮ್ಮ ಶಿವಾನಂದ, ಶೈಲಾ ವಸಂತ್ ಇದ್ದರು.