ಸಾರಾಂಶ
ಪ್ರತಿಯೊಬ್ಬ ಮಹಿಳೆಯರು ಶಿಕ್ಷಣ ಪಡೆದರೇ ಭವಿಷ್ಯದ ಬದುಕಿನಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ.
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಪ್ರತಿಯೊಬ್ಬ ಮಹಿಳೆಯರು ಶಿಕ್ಷಣ ಪಡೆದರೇ ಭವಿಷ್ಯದ ಬದುಕಿನಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ನಿವೃತ್ತ ಶಿಕ್ಷಕಿ ಎ.ವನಜಾಕ್ಷಿ ಹೇಳಿದರು.ಇಲ್ಲಿನ ಜಿಬಿಆರ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾರಿ ಶಿಕ್ಷಣ ಪಡೆದು ತಾಂತ್ರಿಕ, ಸಂಶೋಧನೆ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ಬಹು ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.
ವಿಶ್ವ ಮಹಿಳಾ ದಿನಾಚರಣೆಯು 1900ರಿಂದಲೂ ಆಚರಿಸಲಾಗುತ್ತಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದ್ದು, ಮಹಿಳೆಯನ್ನು ಗೌರವಿಸುವ ಮತ್ತು ಅವಳಿಗೆ ಸ್ವಾತಂತ್ರ್ಯವನ್ನು ನೀಡುವಂತಹ ಸಮಾಜವನ್ನು ನಾವು ನಿರ್ಮಾಣ ಮಾಡಬೇಕಿದೆ ಎಂದರು.ಪ್ರಾಚಾರ್ಯ ಎಸ್.ಎಸ್. ಪಾಟೀಲ ಮಾತನಾಡಿ, ದೇಶದಲ್ಲಿ ಸ್ತ್ರೀ, ಪುರುಷ ಲಿಂಗಾನುಪಾತದಲ್ಲಿ ವ್ಯತ್ಯಾಸವಿದೆ. ಪಾಲಕರು ಹೆಣ್ಣು ಎಂಬ ಕೀಳರಿಮೆಯಿಂದ ಹೊರಗೆ ಬರಬೇಕಿದೆ. ಹೆಣ್ಣು ಮಕ್ಕಳು ಜನಿಸಿದರೇ ಸಂಭ್ರಮಿಸುವ ಬದಲು ಸಂಕಟ ಪಡುವ ವಾತಾವರಣ ನಿರ್ಮಾಣವಾಗುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದರು.
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಶೇ.19 ರಷ್ಟು ಮಹಿಳೆಯರು ಕೊಡುಗೆ ನೀಡಿದ್ದಾರೆ. ಇಂದು ಶಿಕ್ಷಣಕ್ಕೆ ಇರುವ ಶಕ್ತಿಯ ಮುಂದೆ ಬೇರೆ ಯಾವುದೂ ಇಲ್ಲ ಎಂದರು.ಐಕ್ಯೂಎಸಿ ಸಂಯೋಜಕಿ ಡಾ. ಮಹಿಮಾ ಜ್ಯೋತಿ ಮಾತನಾಡಿ, ಗ್ರಾಮೀಣ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದರಿಂದ ಉನ್ನತ ಮಟ್ಟದ ಸಾಧನೆ ಮಾಡಲು ಹಾಗೂ ಆತ್ಮಸ್ಥೆರ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭ ಪ್ರಾಧ್ಯಾಪಕ ಡಾ. ವೈ. ಚಂದ್ರಬಾಬು, ಸಹಾಯಕ ಪ್ರಾಧ್ಯಾಪಕ ಡಾ. ಶರಣಪ್ಪ, ಸಂಜಯ್, ಮಾಬುಸಾಬ್, ಆಶಾ, ಕುಸುಮ, ಜಯಮಾಲ, ಬಡೇಸಾಬ್ ನಾಯಕ ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.