ಮಹಿಳಾ ಸಬಲೀಕರಣ ಭಾಷಣದಿಂದ ಆಗದು

| Published : Mar 19 2024, 12:48 AM IST / Updated: Mar 19 2024, 12:49 AM IST

ಸಾರಾಂಶ

ಇಂದಿನ ಕಾಲಘಟದಲ್ಲಿ ಮಹಿಳೆ ಅತ್ಯಾಚಾರ ಸೇರಿದಂತೆ ಹಲವಾರು ಸಾಮಾಜಿಕ ಪಿಡುಗುಗಳಿಗೆ ಬಲಿಯಾಗುತ್ತಿದ್ದಾಳೆ. ಮಹಿಳೆಯರ ಸಬಲೀಕರಣ ಕೇವಲ ಭಾಷಣದಿಂದ ಆಗುವುದಿಲ್ಲ.

ಚಿತ್ರದುರ್ಗ: ಮಹಿಳೆಯರ ಸಬಲೀಕರಣ ಕೇವಲ ಭಾಷಣದಿಂದ ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ತ್ರೀಯರೆ ಹೆಚ್ಚು ಮನೋರೋಗಕ್ಕೆ ತುತ್ತಾಗುತ್ತಿರುವುದಕ್ಕೆ ಅವರ ಮೇಲೆ ನಡೆಯುತ್ತಿರುವ ಶೋಷಣೆ ಕಾರಣ ಎಂದು ಬರಹಗಾರ್ತಿ ಸೌಮ್ಯ ಪುತ್ರನ್ ವಿಷಾದಿಸಿದರು.

ನಗರದ ಎಸ್‌ಜೆಎಂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನಡೆದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು,

ಇಂದಿನ ಕಾಲಘಟದಲ್ಲಿ ಮಹಿಳೆ ಅತ್ಯಾಚಾರ ಸೇರಿದಂತೆ ಹಲವಾರು ಸಾಮಾಜಿಕ ಪಿಡುಗುಗಳಿಗೆ ಬಲಿಯಾಗುತ್ತಿದ್ದಾಳೆ. ನಗರದಲ್ಲಿನ ವಿದ್ಯಾವಂತ ಮಹಿಳೆಯಾಗಲಿ ಅಥವಾ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರಾಗಲಿ ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ನೋವಿನ ಸಂಗತಿ ಎಂದರು.

ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿ, ರಾಜಕೀಯವಾಗಿ ಹೆಣ್ಣು ಮಕ್ಕಳಿಗೆ ವಿಶೇಷವಾದ ಸೌಲಭ್ಯಗಳನ್ನು ನೀಡುವ ಮೂಲಕ ಮಹಿಳೆಯನ್ನು ವೊಟ್‌ ಬ್ಯಾಂಕ್‌ನ್ನಾಗಿ ಮಾಡಿಕೊಳ್ಳುತ್ತಿರುವುದು ನಿಜವಾಗಿಯೂ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆಯೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಮಹಿಳೆಯರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಅಧ್ಯಕ್ಷತೆವಹಿಸಿದ್ದ ಎಸ್‌ಜೆಎಂ ದಂತ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯ ಡಾ.ಆರ್.ಗೌರಮ್ಮ ಮಾತನಾಡಿ, ಲಿಂಗ ತಾರತಮ್ಯ, ಸಬಲೀಕರಣ, ಸಮಾನತೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಮಹಿಳೆಗೆ ಮಹಿಳೆಯೆ ನಿಜವಾದ ಶತ್ರು. ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಕೆಚ್ಚೆದೆಯ ವೀರವನಿತೆ ಒನಕೆ ಓಬವ್ವ ಇವರುಗಳೆಲ್ಲಾ ದೇಶ ರಕ್ಷಣೆಯಲ್ಲಿ ತೊಡಗಿದವರು. ಆಟೋ ಡ್ರೈವರ್‌ನಿಂದ ಹಿಡಿದು ಪೈಲೆಟ್‍ವರಗೆ ಮಹಿಳೆಯರಿದ್ದಾರೆ. ಎಲ್ಲಾ ರಂಗಗಳಲ್ಲಿಯೂ ಹೆಣ್ಣಿನ ಸಾಧನೆಯಿದೆ. ಜಾತಿ ನಿಂದನೆ ಕೇಸಿಗೆ ಕೆಲವು ಮಹಿಳೆಯರೆ ಪ್ರಚೋಧಿಸುತ್ತಿರುವ ಪ್ರಕರಣಗಳು ಸಾಕಷ್ಟಿವೆ. ಕೆಲವೊಮ್ಮೆ ಮಹಿಳೆ ಮೇಲೆ ಭ್ರಷ್ಟಾಚಾರದ ಆರೋಪವೂ ಕೇಳಿ ಬರುತ್ತದೆ. ಎಲ್ಲವನ್ನು ಸಹಿಸಿಕೊಳ್ಳುವ ಶಕ್ತಿ ಮಹಿಳೆಗಿದೆ ಎಂದರು.

ಡಾ.ಸುನೀಲ್ ವಡವಡಗಿ, ಡಾ.ಗಜಲ ಯಾಸ್ಮಿನ್, ಡಾ.ಪ್ರಣೀತ, ದಯಾ ಪುತ್ತೂರ್ಕರ್ ವೇದಿಕೆಯಲ್ಲಿದ್ದರು. ಇದೆ ಸಂದರ್ಭದಲ್ಲಿ ಬರಹಗಾರ್ತಿ ಸೌಮ್ಯ ಪುತ್ರನ್‍ರವರ ವಿಷ ವರ್ತುಲ ಕೃತಿ ಬಿಡುಗಡೆಗೊಳಿಸಲಾಯಿತು.