"ಮಹಾಭಾರತದಿಂದ ಮೆಟ್ರೋವರೆಗೆ ಅವಳಿಗೆ ಪೋಷಕ ಪಾತ್ರವೇ ಏಕೆ? " ಉಪನ್ಯಾಸ
ಕನ್ನಡಪ್ರಭ ವಾರ್ತೆ ಶಿರಸಿಸಂಸಾರದಲ್ಲಿ 50 ಪ್ರತಿಶತ ಸಹಯೋಗ ನೀಡುವ ಹೆಣ್ಣಿಗೆ ರಾಜಕೀಯದಲ್ಲೂ 33 ಅಲ್ಲ, ಪ್ರತಿಶತ 50 ಅಧಿಕಾರ ಸಿಗಬೇಕು. ಇನ್ನೂ ಮಹಿಳಾ ಮೀಸಲಾತಿ ನೀಡಬೇಕು ಎನ್ನುವ ಮಾತೇ ನಾವು ಹೆಣ್ಣಿಗೆ ಸುರಕ್ಷಿತ ಸಮಾಜವನ್ನು ನಿರ್ಮಿಸಿಲ್ಲ ಎಂದರ್ಥ. ಇದು ಮಾನವೀಯತೆಯ ಸೋಲು ಎಂದು ಬರಹಗಾರ್ತಿ, ಶಿಕ್ಷಕಿ ಕವಿತಾ ಹೆಗಡೆ ಅಭಯಂ ಹೇಳಿದರು.
ಶಿರಸಿ ಗಾಯತ್ರಿ ಗೆಳೆಯರ ಬಳಗದಲ್ಲಿ ಜಸ್ಟಿಸ್ ಜಿ.ಎನ್. ಸಭಾಹಿತ , ಜಸ್ಟಿಸ್ ವಿಷ್ಣು ಸಭಾಹಿತ ಸ್ಮರಣೆ ಉಪನ್ಯಾಸ, ಕಾನೂನು ಸಲಹೆ ಕಾರ್ಯಕ್ರಮದಲ್ಲಿ "ಮಹಾಭಾರತದಿಂದ ಮೆಟ್ರೋವರೆಗೆ ಅವಳಿಗೆ ಪೋಷಕ ಪಾತ್ರವೇ ಏಕೆ? " ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.ಮಹಾಭಾರತದಲ್ಲಿ ದ್ರೌಪದಿ, ಗಾಂಧಾರಿಯರಿಗೆ ಸ್ವಂತ ನಿರ್ಧಾರದ ಅವಕಾಶ ಸಿಗಲಿಲ್ಲ. ಧರ್ಮ-ಪಗಡೆಯ ಹೆಸರಿನಲ್ಲಿ ಹೆಣ್ಣು ವಸ್ತುವಾದಳು. ಮಧ್ಯಯುಗದಲ್ಲಿ ಸತಿ, ಪರದಾ ಪದ್ಧತಿಗಳು ಹೆಣ್ಣನ್ನು ಸಾರ್ವಜನಿಕ ಬದುಕಿನಿಂದಲೇ ದೂರ ಮಾಡಿದವು. ಇಂದಿನ ಮೆಟ್ರೋ ಯುಗದಲ್ಲಿ ಹೆಣ್ಣು ಎಂಜಿನಿಯರ್, ಪೈಲಟ್ ಆದರೂ ಮನೆಯಲ್ಲಿ ಮೊದಲ ಶಿಫ್ಟ್, ಕಚೇರಿಯಲ್ಲಿ ‘ಸೆಕೆಂಡ್ ಶಿಫ್ಟ್’ ಮುಗಿಸಿ ಮರಳಿ ಮನೆಯಲ್ಲಿ ಮೂರನೇ ಶಿಫ್ಟಿನಲ್ಲಿ ದಣಿಯುತ್ತಲೇ ಇರುತ್ತಾಳೆ. ಅರ್ಹತೆ ಇದ್ದರೂ ಎಲ್ಲೆಡೆ ವಂಚಿತಳಾಗುತ್ತಿದ್ದಾಳೆ. ಮಹಿಳೆಯರು ತಮ್ಮ ಹಕ್ಕಿಗಾಗಿ ದನಿ ಎತ್ತಲು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಧಾರವಾಡ ಉಚ್ಚ ನ್ಯಾಯಾಲಯದ ಪ್ರಸಿದ್ಧ ನ್ಯಾಯವಾದಿ ಎಸ್.ಕೆ. ಹೆಗಡೆ, ಕಾನೂನು ಸಾಕ್ಷರತೆಯ ಬಗ್ಗೆ ಮಾತನಾಡಿ, ಜನಸಾಮಾನ್ಯರಿಗೆ ದಿನನಿತ್ಯ ಅಗತ್ಯವಾದ ಕಾನೂನುಗಳ ಬಗ್ಗೆ ತಿಳಿಸಿಕೊಟ್ಟರು. ಸಂವಿಧಾನದ ಮೂಲಭೂತ ಆಶಯವೆಂದರೆ ಬದುಕು ಬದುಕಲು ಬಿಡು ಎಂಬುದೇ ಆಗಿದ್ದು, ಎಲ್ಲ ಕಾನೂನುಗಳೂ ಇದರ ಸುತ್ತಲೇ ಸುತ್ತುತ್ತವೆ. ಜನತಾ ನ್ಯಾಯಾಲಯ, ಗ್ರಾಹಕ ನ್ಯಾಯಾಲಯ, ಉಚಿತ ಕಾನೂನು ನೆರವಿನ ವ್ಯವಸ್ಥೆಯಂತಹ ಹಲವು ಯೋಜನೆಗಳಿಂದ ಸರ್ಕಾರ ಜನಸಾಮಾನ್ಯರಿಗೆ ನೆರವು ನೀಡುತ್ತಿದ್ದು, ಆರ್ಥಿಕ ತೊಂದರೆಯುಳ್ಳವರು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕುಮಟಾ ಟೆಕ್ಸರ್ ಸಂಸ್ಥೆಯ ವ್ಯವಸ್ಥಾಪಕ ವಿಷ್ಣು ಸಭಾಹಿತ, ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ವಿಷಯ. ಕಳೆದೆರಡು ವರ್ಷಗಳಿಂದ ನಿಸ್ಫ್ರಹತೆಯಿಂದ ಕಾರ್ಯಕ್ರಮ ಆಯೋಜಿಸುತ್ತಿರುವ ಎಂ ಎಸ್ ಹೆಗಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಶುಭಾ ಸಭಾಹಿತರವರು ಸ್ತ್ರೀ ಸಂವೇದಿ ಸ್ವರಚಿತ ಕವನ ವಾಚಿಸಿದರು. ಇಂದಿರಾ ಬೈಲಕೇರಿ ನೇತೃತ್ವದಲ್ಲಿ ಮಾರಿಕಾಂಬಾ ಮಾತೃ ಮಂಡಳಿ ಅವರಿಂದ ಅಧಿಕ ಮಾಸ ಪ್ರಯುಕ್ತ ವಿಶೇಷ ಭಗವದ್ಗೀತಾ ಪಠಣ ಕಾರ್ಯಕ್ರಮ ನೆರವೇರಿತು. ಉಪನ್ಯಾಸಕರನ್ನು ಗೌರವಿಸಲಾಯಿತು.ಕಾನೂನು ವಿದ್ಯಾರ್ಥಿನಿ ಪ್ರಿಯಾಂಕಾ ಪರಮಾನಂದ ಹೆಗಡೆ ನಿರ್ವಹಿಸಿದರು.