ಹುಬ್ಬಳ್ಳಿ:

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ನೀತಿ ಖಂಡಿಸಿ ಮೇ 1ರಂದು ಸಂಜೆ 4ಕ್ಕೆ ನೆಹರು ಮೈದಾನದಲ್ಲಿ ಮಹಿಳಾ ಜನಾಕ್ರೋಶ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹೇಳಿದರು.

ಅರವಿಂದ ನಗರದ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜನಾಕ್ರೋಶ ಸಭೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್‌ನವರು ಮಹಿಳೆಯರಿಗೆ ಅಧಿಕಾರ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಹಂತದಲ್ಲಿಯೂ ಮಹಿಳೆಯರು ಬಂದರೆ ನಾವು ಮೂಲೆಗುಂಪಾಗಬಹುದೆಂಬ ಆತಂಕದಿಂದ ನೆಲಕಚ್ಚಿದ ಕಾಂಗ್ರೆಸ್ ಮತ್ತು ವಿಪಕ್ಷಗಳು ಬಿಲ್ ಪಾಸಗದಂತೆ ತಡೆದವು. ದೇಶದ ಮಹಿಳೆಯರು ಈಗಲಾದರೂ ಕಾಂಗ್ರೆಸ್‌ ವಿರೋಧಿ ನೀತಿ ಖಂಡಿಸಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು. ಈ ಹೋರಾಟದ ಮೂಲಕ ಕಾಂಗ್ರೆಸ್‌ಗೆ ಮಹಿಳೆಯರ ಶಕ್ತಿ ಏನು ಎಂಬುದನ್ನು ತೋರಿಸಲಿದ್ದೇವೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸೋಲು ನಮಗಲ್ಲ, ದೇಶಕ್ಕಾಗಿದೆ. ದೇಶದ ಮಹಿಳೆಯರಿಗಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಶಾಸಕರಾಗುವ ಅವಕಾಶವನ್ನು ಕಾಂಗ್ರೆಸ್ ಹಾಳುಗೆಡವಿದೆ. ಜನಸಾಮಾನ್ಯ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ನೀಡಬೇಕೇನ್ನುವ ನಿರ್ಧಾರವನ್ನು ವಿರೋಧ ಪಕ್ಷ ಕಸಿದುಕೊಂಡಿದೆ ಎಂದು ಹೇಳಿದರು.


ಈ ವೇಳೆ ಕಾರ್ಯದರ್ಶಿ ವಸಂತ ನಾಡಜೋಶಿ, ಶಿವು ಮೆಣಸಿನಕಾಯಿ, ಬಸವರಾಜ ಗರಗ, ಪ್ರಮುಖರಾದ ಲಿಂಗರಾಜ ಪಾಟೀಲ, ಮೇಯರ್‌ ಜ್ಯೋತಿ ಪಾಟೀಲ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದವಾ, ಅಕ್ಕಮಹಾದೇವಿ ಹೆಗಡೆ, ನಾಗರತ್ನಾ ಬಳ್ಳಾರಿ, ರೂಪಾ ಚೌಧರಿ, ಪುಷ್ಪಾ ನವಲಗುಂದ ಸೇರಿದಂತೆ ಹಲವರಿದ್ದರು.