ಸಾರಾಂಶ
ಮಂಗಳೂರು: ರಾಜ್ಯದ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಷಡ್ಯಂತ್ರಿಗಳ ವಿರುದ್ಧ ಸೆ.14ರಂದು ‘ಸಹಕಾರಿಗಳ ಧರ್ಮ ಜಾಗೃತಿ ಯಾತ್ರೆ’ಯನ್ನು ಆಯೋಜಿಸಲಾಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ‘ಸಹಕಾರಿ ರತ್ನ’ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಸಹಕಾರಿಗಳ ಧರ್ಮ ಜಾಗೃತಿ ಯಾತ್ರೆ ಅಂಗವಾಗಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸ್ಥಾಪಿತ ಹಿತಾಸಕ್ತಿಗಳು ಮಾಡಿರುವ ಷಡ್ಯಂತ್ರ ಇನ್ನೂ ಪೂರ್ಣವಾಗಿ ಬಯಲಾಗಲಿಲ್ಲ. ಇದರ ವಿರುದ್ಧ ಎಲ್ಲೆಡೆಯಿಂದ ಹೋರಾಟ ಆರಂಭವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 1500ಕ್ಕೂ ಅಧಿಕ ಸಹಕಾರಿ ಸಂಘಗಳಿದ್ದು, ಪ್ರತಿಯೊಂದು ಸಂಘಗಳಿಂದ ತಲಾ 2 ವಾಹನಗಳಂತೆ ಒಟ್ಟು 3 ಸಾವಿರಕ್ಕೂ ಮಿಕ್ಕಿದ ವಾಹನಗಳು ಧರ್ಮ ಜಾಗೃತಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ. ಸಹಕಾರಿ ಧರ್ಮ ಜಾಗೃತಿ ಯಾತ್ರೆ ಒಂದು ಚರಿತ್ರೆಯನ್ನು ನಿರ್ಮಿಸಬೇಕು. ಮಾತ್ರವಲ್ಲದೆ ಈ ಮೂಲಕ ಇನ್ಯಾವತ್ತೂ ಯಾವುದೇ ಧರ್ಮ ಕ್ಷೇತ್ರಕ್ಕೆ ಈ ರೀತಿ ಅಪಚಾರವಾಗವೆಸಗದಂತೆ ಷಡ್ಯಂತ್ರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ಹೇಳಿದರು.ಸೆ.14ರಂದು ಮಧ್ಯಾಹ್ನ 12 ಗಂಟೆಗೆ ಎಲ್ಲ ಸಹಕಾರಿಗಳು ಉಜಿರೆಯಲ್ಲಿ ಸೇರಿ, ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಲು ನಿರ್ಧರಿಸಲಾಗಿದೆ. ಇದಕ್ಕೆ ಪೂರ್ವ ಸಿದ್ಧತೆಗಳನ್ನು ಎಲ್ಲ ಸಹಕಾರಿ ಸಂಘಗಳು ಮಾಡಿಕೊಳ್ಳಬೇಕು. ಸಹಕಾರಿ ಧರ್ಮ ಜಾಗೃತಿ ಯಾತ್ರೆಯ ಮೂಲಕ ಧರ್ಮ ಸಂರಕ್ಷಣೆ ಹಾಗೂ ಯಾವುದೇ ಜಾತಿಯ ಧರ್ಮ ಕ್ಷೇತ್ರಗಳಿಗೆ ಇನ್ನೂ ಮುಂದೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದ ಒಂದು ಸ್ಪಷ್ಟ ಸಂದೇಶವನ್ನು ರವಾನೆಯಾಗಬೇಕು. ಹಾಗಾಗಿ ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ಸಹಕಾರಿಗಳು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಕರೆ ನೀಡಿದರು.
ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿ, ಪವಿತ್ರ ಕ್ಷೇತ್ರವಾದ ಧರ್ಮಸ್ಥಳ ಕ್ಷೇತ್ರವನ್ನು ಅಪಪ್ರಚಾರದ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ. ಇದರ ಹಿಂದೆ ಕಾಣದ ಶಕ್ತಿಗಳಿದ್ದು, ನಮ್ಮ ಹೋರಾಟದ ಮೂಲಕ ಷಡ್ಯಂತ್ರ ಹೂಡುವ ಎಲ್ಲ ಶಕ್ತಿಗಳನ್ನು ಬಯಲಿಗೆಳೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸಹಕಾರಿ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದ ಸಹಕಾರಿ ಧರ್ಮ ಜಾಗೃತಿ ಯಾತ್ರೆಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರ ಅಪಪ್ರಚಾರವೆಸಗುವ ಮೂಲಕ ಧರ್ಮಕ್ಷೇತ್ರಗಳಿಗೆ ಅಪಚಾರವೆಸಗುವ ಕೆಲಸವಾಗುತ್ತಿದೆ. ಈ ಮೂಲಕ ಧಾರ್ಮಿಕ ಭಾವನೆಗಳನ್ನು ಸೋಲಿಸುವ ಕೆಲಸವಾಗುತ್ತಿದೆ. ಇದರ ವಿರುದ್ಧ ಸಂಘಟಿತ ಹೋರಾಟವಾಗಬೇಕು ಎಂದರು.ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ, ಧರ್ಮಸ್ಥಳ ಕ್ಷೇತ್ರದಿಂದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಭಾರಿ ಕೊಡುಗೆ ಲಭಿಸಿದೆ. ಅದೇ ಕ್ಷೇತ್ರದ ವಿರುದ್ಧ ನಡೆಸುತ್ತಿರುವ ಷಡ್ಯಂತ್ರವನ್ನು ನಾವು ವಿರೋಧಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಆಪತ್ತು ತಪ್ಪಿದ್ದಲ್ಲ. ಈ ಕಾರಣದಿಂದ ನಾವೆಲ್ಲ ಸಂಘಟಿತರಾಗಿ ಧ್ವನಿ ಎತ್ತಬೇಕಾಗಿದೆ ಎಂದು ಹೇಳಿದರು.
ರಾಜ್ಯ ಹಾಲು ಉತ್ಪಾದಕರ ಸಹಕಾರ ಮಹಾಮಂಡಲದ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ರಾಜೇಂದ್ರ ಕುಮಾರ್ ಮತ್ತು ವೀರೇಂದ್ರ ಹೆಗ್ಗಡೆಯವರು ಈ ಜಿಲ್ಲೆಯ ಅಭಿವೃದ್ಧಿಗೆ ಭಾರೀ ಕೊಡುಗೆ ನೀಡಿದವರು. ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ನಡೆಸುವವರ ವಿರುದ್ಧ ಸಾಂಘಿಕ ಹೋರಾಟ ನಡೆಸುವ ಮೂಲಕ ಷಡ್ಯಂತ್ರಿಗಳಿಗೆ ಸ್ಪಷ್ಟ ಸಂದೇಶ ನೀಡೋಣ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕಿನ ನಿರ್ದೇಶಕರಾದ ಟಿ.ಜಿ.ರಾಜರಾಮ ಭಟ್, ಎಂ. ವಾದಿರಾಜ ಶೆಟ್ಟಿ, ಎಸ್.ಬಿ. ಜಯರಾಮ್ ರೈ, ಕೆ.ಜೈರಾಜ್ ಬಿ.ರೈ, ಕುಶಲಪ್ಪ ಗೌಡ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಉಂಬಳಿ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರಾದ ಉದಯ ಕೋಟ್ಯಾನ್, ಕೆಎಂಎಫ್ ಆಡಳಿತ ನಿರ್ದೇಶಕ ವಿವೇಕ್ ಮತ್ತಿತರರು ಇದ್ದರು.
ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು.ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಹಕಾರಿ ಧರ್ಮ ಜಾಗೃತಿ ಯಾತ್ರೆಗೆ ಒಕ್ಕೊರಲ ಬೆಂಬಲ ಸೂಚಿಸಿದರು.