ಬಿಜೆಪಿ ಮಂಡಲ ಘಟಕ ರದ್ದು ಮಾಡದಿದ್ದರೆ ಸಭೆ-ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ: ಕರುಣಾಕರ ರೆಡ್ಡಿ

| Published : Mar 10 2024, 01:48 AM IST

ಬಿಜೆಪಿ ಮಂಡಲ ಘಟಕ ರದ್ದು ಮಾಡದಿದ್ದರೆ ಸಭೆ-ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ: ಕರುಣಾಕರ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹರಪನಹಳ್ಳಿ ಬಿಜೆಪಿ ಮಂಡಲ ಘಟಕ ರಚನೆ ಬಗ್ಗೆ ಮಾಜಿ ಶಾಸಕ ಜಿ. ಕರುಣಾಕರ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಹರಪನಹಳ್ಳಿ: ಈಚೆಗೆ ನೂತನವಾಗಿ ರಚಿಸಿರುವ ಹರಪನಹಳ್ಳಿ ಬಿಜೆಪಿ ಮಂಡಲ ಘಟಕವನ್ನು ಕೂಡಲೇ ರದ್ದು ಮಾಡಬೇಕು, ಇಲ್ಲದಿದ್ದರೆ ಮುಂದಿನ ಪಕ್ಷದ ಯಾವುದೇ ಸಭೆ, ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ. ಇಲ್ಲಿಯ ಕೊಟ್ಟೂರು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಜಿ ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಿಷ್ಠಾವಂತರನ್ನು ಮಂಡಲ ಘಟಕದಲ್ಲಿ ಕೈಬಿಟ್ಟು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಣಿಹಾಕಿದ ಬಗ್ಗೆ ಕಾರ್ಯಕರ್ತರಲ್ಲಿ ಬೇಸರವಿದೆ ಎಂದು ಅವರು ಹೇಳಿದರು.

ವಿಜಯನಗರ ಜಿಲ್ಲಾ ಬಿಜೆಪಿ ಘಟಕಕ್ಕೆ ಹರಪನಹಳ್ಳಿಯಿಂದ ತೆಗೆದುಕೊಂಡಿರುವ ಪದಾಧಿಕಾರಿಗಳ ಬಗ್ಗೆಯೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ ಹಾಗೂ ನೋವಿದೆ. ಈಗ ಜಿಲ್ಲಾ ಘಟಕಕ್ಕೆ ನೇಮಕಗೊಂಡಿರುವ ಪದಾಧಿಕಾರಿಗಳು ಸಹ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಆದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷರು, ಪಕ್ಷದ ಮುಖಂಡರು ಈ ಬಗ್ಗೆ ಗಮನ ಹರಿಸಿ ಬಿಜೆಪಿ ಮಂಡಲ ಘಟಕ ಹಾಗೂ ಹರಪನಹಳ್ಳಿಯಿಂದ ಜಿಲ್ಲಾ ಘಟಕಕ್ಕೆ ಆಗಿರುವ ಪದಾಧಿಕಾರಿಗಳ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಕುರಿತು ಕಾರ್ಯಕರ್ತರು ಶೀಘ್ರವೆ ರಾಜ್ಯಾಧ್ಯಕ್ಷರ ಬಳಿ ನಿಯೋಗ ಹೋಗಿ ಇಲ್ಲಿಯ ಆಗು-ಹೋಗುಗಳ ಬಗ್ಗೆ ತಿಳಿಸುತ್ತಾರೆ. ಹರಪನಹಳ್ಳಿ ಬಿಜೆಪಿ ನೂತನ ಮಂಡಲ ಘಟಕ ರದ್ದಾಗುವ ವರೆಗೂ ತಾಲೂಕಿನಲ್ಲಿ ಮುಂದೆ ನಡೆಯುವ ಬಿಜೆಪಿಯ ಯಾವುದೇ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳದಿರಲು ಕಾರ್ಯಕರ್ತರು ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಹೇಳಿದರು.

28 ವರ್ಷಗಳಿಂದ ಪಕ್ಷದಲ್ಲಿ ಕಾರ್ಯಕರ್ತನಾಗಿ, ಸಂಸದನಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ನನ್ನನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಂಡಲ ಸಮಿತಿ ರಚಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾರ್ಯಕರ್ತರ ಒತ್ತಾಸೆಗೆ ನಾನೂ ಬದ್ಧನಾಗಿರುತ್ತೇನೆ ಎಂದು ಈ ಸಂದರ್ಭದಲ್ಲಿ ಕರುಣಾಕರ ರೆಡ್ಡಿ ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯ ಶಿಂಗ್ರಿಹಳ್ಳಿ ನಾಗರಾಜ, ಬಿಜೆಪಿ ಮುಖಂಡರಾದ ಕಲ್ಲೇರ ಬಸವರಾಜಪ್ಪ, ಆರ್. ಲೋಕೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ಯು.ಎನ್. ಪ್ರವೀಣ, ಎಂ. ದ್ಯಾಮಪ್ಪ, ಎಚ್.ಟಿ. ಗಿರೀಶಪ್ಪ, ಹಲುವಾಗಲು ವೀರಭದ್ರಪ್ಪ, ಪುರಸಭೆ ಸದಸ್ಯರಾದ ಕಿರಣ್ ಶಾನಭೋಗ, ಜಾವಿದ್, ವಿನಯಗೌಳಿ ಹಾಗೂ ಹನುಮಂತಪ್ಪ, ಉಪ್ಪಾರ ತಿಮ್ಮಣ್ಣ, ಕೆಂಗಳ್ಳಿ ಪ್ರಕಾಶ್, ಲಕ್ಷ್ಮಿಪುರದ ಶಿವಾಜಿನಾಯ್ಕ, ಕುಮಾರನಾಯ್ಕ, ಮಹಿಳಾ ಮೋರ್ಚಾದ ಲತಾ ನಾಗರಾಜ, ಸುವರ್ಣಮ್ಮ, ಎ.ಜಿ. ಮಂಜುನಾಥ, ರೇವಣಸಿದ್ದಪ್ಪ, ಕೆಂಗಳ್ಳಿ ಪ್ರಕಾಶ್, ವೈ. ಮಂಜುನಾಥ, ಭೋವಿ ಮಂಜುನಾಥ, ಕಲ್ಲಹಳ್ಳಿ ಪರಸಪ್ಪ, ಕೂಲಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಇತರರು ಹಾಜರಿದ್ದರು.