ಮನುಷ್ಯನು ತನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ ಬದುಕು ರೂಢಿಸಿಕೊಳ್ಳಬೇಕು. ದಯೆ, ಕರುಣೆ, ಕಾಳಜಿಯಿಂದ ಜೀವನದ ಗುಣಮಟ್ಟ ಹೆಚ್ಚುತ್ತದೆ. ನಮ್ಮ ಶಿಸ್ತಿನ ಗುಣಗಳು ಸುತ್ತಮುತ್ತಲಿನವರ ಮೇಲೆ ಧನಾತ್ಮಕ ಪ್ರಭಾವ ಬೀರುತ್ತವೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಇಂತಹ ಶಿಬಿರಗಳು ದಾರಿದೀಪವಾಗುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರೀತಿಯ ಮಾತುಗಳಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ತಿಳಿಸಿದರು.

ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠಗಳ ಸಂಯುಕ್ತವಾಗಿ ಊಟಿಯ ತೀಟಕಲ್ ನ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.

ಮನುಷ್ಯನು ತನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ ಬದುಕು ರೂಢಿಸಿಕೊಳ್ಳಬೇಕು. ದಯೆ, ಕರುಣೆ, ಕಾಳಜಿಯಿಂದ ಜೀವನದ ಗುಣಮಟ್ಟ ಹೆಚ್ಚುತ್ತದೆ. ನಮ್ಮ ಶಿಸ್ತಿನ ಗುಣಗಳು ಸುತ್ತಮುತ್ತಲಿನವರ ಮೇಲೆ ಧನಾತ್ಮಕ ಪ್ರಭಾವ ಬೀರುತ್ತವೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಇಂತಹ ಶಿಬಿರಗಳು ದಾರಿದೀಪವಾಗುತ್ತವೆ ಎಂದರು.

ಕುಂದೂರು ಮಠದ ಶ್ರೀ ಡಾ. ಶರತ್ಚಂದ್ರ ಸ್ವಾಮೀಜಿ ಮಾತನಾಡಿ, ಉತ್ತಮ ಸಂಸ್ಕಾರ ಬೆಳೆಸಿಕೊಂಡು ಬದುಕುವುದೆ ಅಲೌಕಿಕ ಸಾಧನೆಯಾಗಿದೆ. ಮನುಷ್ಯನು ಅರಿವಿನಿಂದ ಮಾಡುವ ಕಾರ್ಯಗಳೆಲ್ಲವು ಅಲೌಕಿಕವಾದವು. ಬದುಕಿನ ಅನಿತ್ಯತೆಯನ್ನು ತಿಳಿದು ನಿಷ್ಕಾಮ ಕರ್ಮದ ಮೂಲಕ ಸಾಗುವುದೆ ಪಾರಮಾರ್ಥಿಕ. ಆತ್ಮಾವಲೋಕನ ಮತ್ತು ತ್ಯಾಗದ ಮೂಲಕ ಲೌಕಿಕ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಪ್ರತಿಯೊಂದು ಕಾರ್ಯ ಮತ್ತು ವಸ್ತುವಿನಲ್ಲಿ ಭಗವಂತನ್ನು ಕಾಣುವ ಮೂಲಕ ಆತ್ಮಸಾಕ್ಷಾತ್ಕಾರ ಪಡೆಯಬಹುದು ಎಂದು ಹೇಳಿದರು.

ಡಾ. ರಾಹುಲ್ ದೇವರಾಜ್ ಮಾತನಾಡಿ, ಭಾರತವು ಜಗತ್ತಿನ ಹಲವು ಧರ್ಮಗಳ ಜನ್ಮ ಭೂಮಿಯಾಗಿದೆ, ವಿನೂತನ ಆವಿಷ್ಕಾರಗಳನ್ನು ಪ್ರಪಂಚಕ್ಕೆ ಕೊಟ್ಟ ಕರ್ಮ ಭೂಮಿ ಇದು. ಆಧ್ಯಾತ್ಮಿಕತೆ, ತತ್ವಶಾಸ್ತ್ರ, ಪ್ರೀತಿ, ಶಾಂತಿ, ತ್ಯಾಗ ಮತ್ತು ಸಾಮರಸ್ಯ ಎಲ್ಲರಲ್ಲಿ ಹಾಸುಹೊಕ್ಕಾಗಿದೆ. ಪ್ರಾಚೀನ ಪರಂಪರೆಯನ್ನು ಉಳಿಸಿಕೊಂಡು ಇಂದಿನ ತಂತ್ರಜ್ಞಾನ ಮತ್ತು ಜಾಗತೀಕರಣಕ್ಕೂ ತೆರೆದುಕೊಂಡ ಸಂಸ್ಕೃತಿಯಾಗಿದೆ. ವಸುದೈವ ಕುಟುಂಬಕಂ ಎಂಬಂತೆ ವೈವಿಧ್ಯತೆ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಜಗತ್ತಿನ ಏಕೈಕ ರಾಷ್ಟ್ರವಾಗಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ- ಧ್ಯಾನ ಹಾಗೂ ಸಂಜೆ ದೇಸಿ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಂಜೆ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.