ಗೆಲ್ಲಿಸಿದರೆ ನಿಮ್ಮ ಧ್ವನಿಯಾಗಿ ಕೆಲಸ: ಡಾ.ಪ್ರಭಾ

| Published : Mar 31 2024, 02:05 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಮತದಾರರೆಲ್ಲ ನನಗೆ ಮತ ಹಾಕಿ ಗೆಲ್ಲಿಸಿ, ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ. ನಮ್ಮ ಮನೆ. ಮನಸ್ಸಿನ ಬಾಗಿಲು ಯಾವಾಗಲೂ ತೆಗೆದಿರುತ್ತೆ. ಮಾವ ಶಾಮನೂರು ಶಿವಶಂಕರಪ್ಪ ಹಾಗೂ ಪತಿ ಎಸ್.ಎಸ್. ಮಲ್ಲಿಕಾರ್ಜುನ ಅವರಿಂದ ನಾನು ಸಾಕಷ್ಟು ಸಮಾಜ ಸೇವೆ ಕಲಿತಿದ್ದೇನೆ ಎಂದು ಹೇಳಿದರು. ದೇಶದಲ್ಲಿ ಬಿಜೆಪಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಲಿದೆ, ಬರ ಅನುದಾನ ನಮ್ಮ ರಾಜ್ಯಕ್ಕೆ ನೀಡಿಲ್ಲ. ನನಗೆ ಮತ ಹಾಕಿ ಗೆಲ್ಲಿಸಿದರೆ ತ್ರಿಬಲ್ ಎಂಜಿನ್‌ ಸರ್ಕಾರವಾಗುತ್ತದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ, ಹರಪನಹಳ್ಳಿ ಲೋಕಸಭಾ ಚುನಾವಣೆಯಲ್ಲಿ ಮತದಾರರೆಲ್ಲ ನನಗೆ ಮತ ಹಾಕಿ ಗೆಲ್ಲಿಸಿ, ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಮನೆ. ಮನಸ್ಸಿನ ಬಾಗಿಲು ಯಾವಾಗಲೂ ತೆಗೆದಿರುತ್ತೆ. ಮಾವ ಶಾಮನೂರು ಶಿವಶಂಕರಪ್ಪ ಹಾಗೂ ಪತಿ ಎಸ್.ಎಸ್. ಮಲ್ಲಿಕಾರ್ಜುನ ಅವರಿಂದ ನಾನು ಸಾಕಷ್ಟು ಸಮಾಜ ಸೇವೆ ಕಲಿತಿದ್ದೇನೆ ಎಂದು ಹೇಳಿದರು.

ದೇಶದಲ್ಲಿ ಬಿಜೆಪಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಲಿದೆ, ಬರ ಅನುದಾನ ನಮ್ಮ ರಾಜ್ಯಕ್ಕೆ ನೀಡಿಲ್ಲ. ನನಗೆ ಮತ ಹಾಕಿ ಗೆಲ್ಲಿಸಿದರೆ ತ್ರಿಬಲ್ ಎಂಜಿನ್‌ ಸರ್ಕಾರವಾಗುತ್ತದೆ. ಇಲ್ಲಿ ಎಂ.ಪಿ.ಲತಾ ಶಾಸಕರಿದ್ದಾರೆ, ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ ಇದ್ದಾರೆ, ನಾನು ಗೆದ್ದರೂ ಮೂರನೇ ಇಂಜಿನ್ ಆಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಕಾರ್ಯಕರ್ತರು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು. ದಾವಣಗೆರೆಯಲ್ಲಿ ಎಸ್. ಎಸ್. ಕೇರ್ ಟ್ರಸ್ಟ್‌ನಿಂದ ಬಿಪಿಎಲ್‌ನವರಿಗೆ ಈಗಾಗಲೇ ಉಚಿತ ಡಯಾಲಿಸಿಸ್, ಮಹಿಳೆಯರಿಗೆ ಉಚಿತ ಡಿಲವರಿ, ಕಣ್ಣಿನ ಪೊರೆ ಚಿಕಿತ್ಸೆ, ದಂತ ಚಿಕಿತ್ಸೆ ಹೀಗೆ ಅನೇಕ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೂ ವಿಸ್ತರಿಸುತ್ತೇವೆ ಎಂದು ತಿಳಿಸಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೂತ್‌ಮಟ್ಟದಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ಮತ ಹಾಕಿ ನಂತರ ಕೆಲಸ ಕೇಳಿ, ಪಕ್ಷದ ಕೆಲಸ ಹಾಗೂ ನೀವು ಹೇಳಿದ ಕೆಲಸ ಮಾಡುತ್ತೇನೆ. ತಾಳ್ಮೆ ಇರಲಿ. ಈಗಾಗಲೇ ಹರಪನಹಳ್ಳಿ ಕ್ಷೇತ್ರಕ್ಕೆ ನಾನು ಸಾಕಷ್ಟು ಅನುದಾನ ತಂದಿದ್ದೇನೆ, ಜೂನ್‌ ತಿಂಗಳಲ್ಲಿ ಇನ್ನೂ ₹100 ಕೋಟಿ ಅನುದಾನ ಬರುತ್ತದೆ ಎಂದ ಅವರು, ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿದರು.

ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಮಾತನಾಡಿ, ಕಾಂಗ್ರೆಸ್‌ ಪಕ್ಷ 371 ಜೆ ಕೊಡಿಸಿದ್ದು ಸೇರಿದಂತೆ ಹರಪನಹಳ್ಳಿ ಅಭಿವೃದ್ಧಿಗೆ ಶ್ರಮಿಸಿದೆ. ಎಂ.ಪಿ.ಲತಾ ಹಾಗೂ ಡಾ.ಪ್ರಭಾ ಅವರು ಅಕ್ಕ-ತಂಗಿಯರಂತೆ ಅಭಿವೃದ್ಧಿ ಕೆಲಸ ಮಾಡುತ್ತಾರೆ. ಪ್ರತಿ ಹಳ್ಳಿ, ಪ್ರತಿ ಪಂಚಾಯಿತಿಯಲ್ಲೂ ಕಾಂಗ್ರೆಸ್ ಜೀವಂತವಿದೆ. ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಕೋರಿದರು.

ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿರಾಜ್ ಶೇಖ್ ಮಾತನಾಡಿ, ದೇಶದಲ್ಲಿ ವೈರತ್ವದ ರಾಜಕಾರಣ ನಡೆಯುತ್ತಲಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ವಿರುದ್ಧ ಮಾತನಾಡುವವರ ಧ್ವನಿ ಹತ್ತಿಕ್ತುತ್ತಿದೆ. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿ ಎಂದು.

ಹಿರಿಯ ಕಾಂಗ್ರೆಸ್‌ ಮುಖಂಡ ಸಿ.ಚಂದ್ರಶೇಖರ ಭಟ್ ಮಾತನಾಡಿ, ಕಾರ್ಯಕರ್ತರ ನೈತಿಕ ಸ್ಥೈರ್ಯದ ಮೇಲೆ ಕಾಂಗ್ರೆಸ್ ಲೋಕಸಭಾ ಚುನಾವಣೆ ಎದುರಿಸುತ್ತಿದೆ. ದೇಶದ ಇತಿಹಾಸದಲ್ಲಿ ಇದು ನಿರ್ಮಾಣಯಕ ಚುನಾವಣೆ ಎಂದು ತಿಳಿಸಿದರು.

ಮುಖಂಡರಾದ ಪಿ.ಮಹಾಬಲೇಶ್ವರ ಗೌಡ, ಡಿ.ಬಸವರಾಜ, ವೈ.ಕೆ,ಬಿ. ದುರುಗಪ್ಪ, ಎಂ.ರಾಜಶೇಖರ, ಅಬ್ದುಲ್‌ ರಹಿಮಾನ್ ಕೋಡಿಹಳ್ಳಿ ಭೀಮಣ್ಣ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿದರು.

ಈ ಸಂದರ್ಭ ಜೆಡಿಎಸ್‌ ಕೂಡ್ಲಿಗಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕೋಡಿಹಳ್ಳಿ ಭೀಮಪ್ಪ ಹಾಗೂ ತಾಪಂ ಮಾಜಿ ಸದಸ್ಯ ವೆಂಕಟೇಶ ರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಪ್ಪ, ಕಂಬತ್ತಹಳ್ಳಿ ಮಂಜುನಾಥ, ತಾವರಗೊಂದಿ ಜಯಪ್ರಕಾಶ, ಆಲದಹಳ್ಳಿ ಷಣ್ಮುಖಪ್ಪ, ಮಹಿಳಾ ಬ್ಲಾಕ್ ಅಧ್ಯಕ್ಷರಾದ ಕಂಚಿಕೇರಿ ಜಯಲಕ್ಷ್ಮೀ, ಭಾಗ್ಯಮ್ಮ, ಮುಖಂಡರಾದ ಬಿ.ಕೆ.ಪ್ರಕಾಶ, ಎಚ್.ಎಂ. ಮಲ್ಲಿಕಾರ್ಜುನ, ಬಿ.ಆರ್. ಕೃಷ್ಣನಾಯ್ಕ, ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಪುರಸಭಾ ಸದಸ್ಯರಾದ ಲಾಟಿ ದಾದಾಪೀರ, ಗೊಂಗಡಿ ನಾಗರಾಜ, ಟಿ.ವೆಂಕಟೇಶ, ಉದ್ದಾರ ಗಣೇಶ, ಮುಖಂಡರಾದ ಬಂಡ್ರಿ ಗೋಣಿ ಬಸಪ್ಪ, ಬಿ.ಬಿ.ಹೊಸೂರಪ್ಪ, ಡಾ. ಕೆ.ಬಿ.ಕೊಟ್ರೇಶ, ವಗ್ಗಾಲಿ ನಜೀರ, ಉದಯಶಂಕರ, ಹಾಲೇಶಗೌಡ, ಆಮ್ ಆದ್ಮಿ ಪಕ್ಷದ ಹೊಸಕೋಟಿ ನಾಗರಾಜ, ಬಿ.ವೈ.ಕಾಶಿನಾಥ ಇತರರು ಹಾಜರಿದ್ದರು.

- - - -30ಕೆಡಿವಿಜಿ34ಃ:

ಹರಪನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.