ಪರಸ್ಪರ ಸಹಕಾರದಿಂದ ಕೆಲಸ ನಿರ್ವಹಿಸಿ: ಜಿಪಂ ಸಿಇಒ

| Published : Dec 10 2024, 12:32 AM IST

ಸಾರಾಂಶ

ಡಿ. 12 ಮತ್ತು 13ರಂದು ಹನುಮಮಾಲಾ ಕಾರ್ಯಕ್ರಮ ನಿರ್ವಹಣೆಗೆ ರಚಿಸಿರುವ ವಿವಿಧ ಸಮಿತಿಯ ಸದಸ್ಯರು ಪರಸ್ಪರ ಸಹಕಾರದಿಂದ ಕೆಲಸ ನಿರ್ವಹಣೆ ಮಾಡಬೇಕು.

ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಡಿ. 12 ಮತ್ತು 13ರಂದು ಹನುಮಮಾಲಾ ಕಾರ್ಯಕ್ರಮ ನಿರ್ವಹಣೆಗೆ ರಚಿಸಿರುವ ವಿವಿಧ ಸಮಿತಿಯ ಸದಸ್ಯರು ಪರಸ್ಪರ ಸಹಕಾರದಿಂದ ಕೆಲಸ ನಿರ್ವಹಣೆ ಮಾಡಬೇಕು. ಅಂದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಪ್ರಭಾರಿ ಜಿಲ್ಲಾಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು.

ಸೋಮವಾರ ವಿರುಪಾಪುರ ಗಡ್ಡಿಯಲ್ಲಿರುವ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಹನುಮಮಾಲಾ ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಸಮಸ್ಯೆಗಳಾದರೆ ತಕ್ಷಣ ಕಂಟ್ರೋಲ್ ರೂಮಿಗೆ ಕರೆ ಮಾಡಬೇಕು. ಪ್ರಮುಖ ಸ್ಥಳಗಳಲ್ಲಿ ಸಿಸಿಕ್ಯಾಮೆರಾ ಅಳವಡಿಸಬೇಕು. ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯ ವೈದ್ಯರು ಜನರಿಗೆ ಯಾವುದೇ ಸಮಸ್ಯೆಗಳಾದರೆ ತಕ್ಷಣ ಅವರಿಗೆ ಸೇವೆ ನೀಡಲು ಸನ್ನದ್ಧರಿರಬೇಕು. ಜನರಿಗೆ ಯಾವ-ಯಾವ ಸಮಸ್ಯೆಗಳಾಗಬಹುದು ಎಂಬುದನ್ನು ತಮ್ಮಲ್ಲಿ ಮುಂದಾಲೋಚನೆ ಸಹ ಇರಬೇಕು ಎಂದು ಹೇಳಿದರು.

ವಿದ್ಯುತ್ ಸಮಸ್ಯೆಗಳಾಗದಂತೆ ನೋಡಿಕೊಳ್ಳಿ. ಜನರು ತಿರುಗಾಡುವ ಎಲ್ಲಾ ಕಡೆ ಲೈಟಿಂಗ್ ವ್ಯವಸ್ಥೆ ಮಾಡಿ, ಪಂಪಾ ಸರೋವರದಲ್ಲಿ ಮೊಸಳೆಗಳು ಇವೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿರುವುದರಿಂದ ಅದರಲ್ಲಿ ಇಳಿದು ಯಾರು ಸ್ನಾನ ಮಾಡಬಾರದು ಇದನ್ನು ನೋಡಿಕೊಳ್ಳಲು ಒಬ್ಬ ನೋಡಲ್ ಅಧಿಕಾರಿ ನಿಯೋಜಿಸಿ. ಹನುಮಮಾಲಾ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಕಡಿಮೆ ಬೀಳದಂತೆ ಸರಿಯಾದ ವ್ಯವಸ್ಥೆ ಮಾಡಬೇಕು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ತಮ್ಮ ಸಲಹೆ ನೀಡಿ ಎಂದು ಹೇಳಿದರು.

ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಮಾತನಾಡಿ, ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಅವು ಮೂರು ಶಿಫ್ಟ್‌ನಲ್ಲಿ ಕಾರ್ಯನಿರ್ವಹಿಸಲು ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪೆಂಡಾಲ್‌ ಕೆಲಸ ನಡೆಯುತ್ತಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ವೇದಪಾಠ ಶಾಲೆ ಹತ್ತಿರ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದಲೆ ಇತರೆ ಸ್ಥಳಗಳಿಗೆ ಪ್ರಸಾದ ಕಳಿಸಲಾಗುವುದು ಎಂದು ಹೇಳಿದರು.ಸಭೆಗೂ ಮುನ್ನ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ಇತರೆ ಅಧಿಕಾರಿಗಳು ವೇದಪಾಠ ಶಾಲೆಯ ಆವರಣದಲ್ಲಿರುವ ಪ್ರಸಾದ ಕೋಣೆಗೆ ಭೇಟಿ ನೀಡಿ ಲಡ್ಡು ಪ್ರಸಾದದ ತಯಾರಿ ಪರಿಶೀಲನೆ, ಅಂಜನಾದ್ರಿ ಬೆಟ್ಟ. ಪಾರ್ಕಿಂಗ್‌ ವ್ಯವಸ್ಥೆ ಸ್ಥಳಗಳು ಮತ್ತು ಪಂಪಾ ಸರೋವರ ಸೇರಿದಂತೆ ಇತರೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಅಬಕಾರಿ ಅಧಿಕಾರಿ ಪ್ರಶಾಂತಕುಮಾರ, ಕನಕಗಿರಿ ತಹಸೀಲ್ದಾರ ವಿಶ್ವನಾಥ ಮುರಡಿ, ಗಂಗಾವತಿ ನಗರಸಭೆ ಪೌರಯುಕ್ತರು ಆರ್. ವಿರೂಪಾಕ್ಷಪ್ಪ, ಅರಣ್ಯ, ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಇತರರಿದ್ದರು.ಮೂಲಭೂತ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆ:

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಡಿ. 12 ಮತ್ತು 13 ರಂದು ನಡೆಯಲಿರುವ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮಕ್ಕಾಗಿ ಭಕ್ತಾಧಿಗಳ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗಾಗಿ ಶೌಚಾಲಯ ವ್ಯವಸ್ಥೆ, ಸ್ನಾನದ ವ್ಯವಸ್ಥೆ, ಪೆಂಡಾಲ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.ಸ್ನಾನದ ಸ್ಥಳ:ಭಕ್ತಾಧಿಗಳು ಸ್ನಾನಕ್ಕಾಗಿ ದೇವಸ್ಥಾನದ ಪಾರ್ಕಿಂಗ್ ಬಳಿ 50 ತಾತ್ಕಾಲಿಕ ಶವರ್, ಆನೆಗೊಂದಿ ಪಾರ್ಕಿಂಗ್-25, ದುರ್ಗಾದೇವಿ ಬೆಟ್ಟದ ಹತ್ತಿರ-20, ಪಂಪಾ ಸರೋವರ-25, ಹನುಮನಹಳ್ಳಿಯ ಹತ್ತಿರ-20 ಸೇರಿ ಒಟ್ಟು 140 ತಾತ್ಕಾಲಿಕ ಶವರ್‌ಗಳ ವ್ಯವಸ್ಥೆ ಮಾಡಲಾಗಿದೆ.

ಪೆಂಡಾಲ್‌ ಸೌಕರ್ಯ:ವೇದ ಪಾಠಶಾಲೆಯ ಹತ್ತಿರ, ದೇವಸ್ಥಾನದ ಪಾರ್ಕಿಂಗ್ ಸ್ಥಳ, ಬೆಟ್ಟದ ಮೇಲೆ ದೇವಸ್ಥಾನದ ಹತ್ತಿರ, ಆನೇಗುಂದಿ ಉತ್ಸವ ಪಾರ್ಕಿಂಗ್ ಹಾಗೂ 6 ಕಡೆ ವಿವಿಧ ಪಾರ್ಕಿಂಗ್‌ ಸ್ಥಳಗಳಲ್ಲಿ ಪೆಂಡಾಲ್‌ ಸೌಕರ್ಯ ಕಲ್ಪಿಸಲಾಗಿದೆ.

ಶೌಚಾಲಯ ವ್ಯವಸ್ಥೆ:ಈಗಾಗಲೇ ಇರುವ 13 ಶೌಚಾಲಯಗಳ ಜೊತೆಗೆ ಚಿಂತಾಮಣಿ, ದೇವಸ್ಥಾನದ ಪಾರ್ಕಿಂಗ್, ಆನೆಗೊಂದಿ ಪಾರ್ಕಿಂಗ್, ದುರ್ಗಾದೇವಿ ಬೆಟ್ಟದ ಹತ್ತಿರ, ಪಂಪಾ ಸರೋವರ, ಹನುಮನಹಳ್ಳಿಯ ಹತ್ತಿರ, ವೇದಪಾಠ ಶಾಲೆ ಹತ್ತಿರ 60 ತಾತ್ಕಾಲಿಕ ಶೌಚಾಲಯ ಸೇರಿ ಒಟ್ಟು 73 ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.

ಪಾರ್ಕಿಂಗ್‌ ವ್ಯವಸ್ಥೆ:ಡಿ. 12 ಮತ್ತು 13ರಂದು ಸರ್ಕಾರಿ ವಾಹನ ನಿಲುಗಡೆಯ ಸ್ಥಳವನ್ನು ಗುಡಿಯ ಮುಂಭಾಗದಲ್ಲಿ ನಿಗದಿಪಡಿಸಿದೆ. ಸಾರ್ವಜನಿಕರ ವಾಹನಗಳು ಗಂಗಾವತಿ, ಹೊಸಪೇಟೆ, ಹುಲಗಿಯ ಮಾರ್ಗವಾಗಿ ಬರುವ ವಾಹನಗಳಿಗೆ ಆನೆಗೊಂದಿ ಉತ್ಸವ ಸ್ಥಳ, ಹನುಮನಹಳ್ಳಿಯ ಹತ್ತಿರ, ದೇವಸ್ಥಾನ ಹಿಂಭಾಗದಲ್ಲಿ, ಪಂಪಾಸರೋವರ ಹತ್ತಿರ ಹಾಗೂ ಇತರೆ ಕಡೆಗಳಲ್ಲಿ ಸೇರಿದಂತೆ ಪಾರ್ಕಿಂಗ್‌ಗಾಗಿ ಒಟ್ಟು 15 ಸ್ಥಳ ಗುರುತಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ವಿವಿಧೆಡೆ ಕುಡಿಯುವ ನೀರಿನ ವ್ಯವಸ್ಥೆ:

ಹನುಮಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗಾಗಿ ಓ.ಎಚ್.ಟಿಯಿಂದ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ವೇದ ಪಾಠಶಾಲೆಯ ಹತ್ತಿರ 430 ನಳ ಮತ್ತು 15 ಟ್ಯಾಂಕರ್‌ ಮೂಲಕ ಕುಡಿಯುವ ನೀರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಆನೆಗೊಂದಿ ಪಾರ್ಕಿಂಗ್‌ ಸ್ಥಳದಲ್ಲಿ 50 ನಳ, ಪಂಪಾಸರೋವರದಲ್ಲಿ 10 ನಳ, ಹನುಮನಹಳ್ಳಿಯ ಹತ್ತಿರ 20 ನಳ, ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ 50 ನಳ, ದೇವಸ್ಥಾನದ ಪ್ರದಕ್ಷಣೆ ಪ್ರದಕ್ಷಣೆ ಸುತ್ತಲು 4 ಕಡೆ ಮತ್ತು ಭಕ್ತಾದಿಗಳು ಬೆಟ್ಟ ಹತ್ತುವ ಮಾರ್ಗದಲ್ಲಿ ಭಕ್ತಾದಿಗಳಿಗೆ 4 ಕಡೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಗಂಗಾವತಿಯಿಂದ ಬರುವ ಭಕ್ತಾಧಿಗಳಿಗೆ ಸಂಗಾಪೂರ ಮತ್ತು ಆನೆಗೊಂದಿ ಗ್ರಾಪಂಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.