ಸಾರಾಂಶ
ನಗರದೊಳಗೆ ನಡೆಯುತ್ತಿರುವ ಹಲವು ಕಾಮಗಾರಿಗಳನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಿ ಸರ್ಕಾರದ ವಶಕ್ಕೆ ನೀಡುವಂತೆ ಸಂಬಂಧಿಸಿದ ಗುತ್ತಿಗೆದಾರರು, ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದೊಳಗೆ ನಡೆಯುತ್ತಿರುವ ಹಲವು ಕಾಮಗಾರಿಗಳನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಿ ಸರ್ಕಾರದ ವಶಕ್ಕೆ ನೀಡುವಂತೆ ಸಂಬಂಧಿಸಿದ ಗುತ್ತಿಗೆದಾರರು, ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ನಗರದ ರೈಲ್ವೆ ಕೆಳ ಸೇತುವೆ ಕಾಮಗಾರಿ, ತರಕಾರಿ ಮಾರುಕಟ್ಟೆ ಕಾಮಗಾರಿಗಳನ್ನು ಶಾಸಕ ಪಿ.ರವಿಕುಮಾರ್ ಮತ್ತು ಅಧಿಕಾರಿಗಳೊಟ್ಟಿಗೆ ಪರಿಶೀಲನೆ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, ರೈಲ್ವೆ ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.ತರಕಾರಿ ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡಿದ್ದು, ಅಂಗಡಿ ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡಬೇಕಿದೆ. ಈ ಹಿಂದೆ ಇದೇ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದವರು ನಮಗೇ ನೀಡುವಂತೆ ಮನವಿ ಕೊಟ್ಟಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಸರ್ಕಾರದ ಸೂಚನೆ ಮೇರೆಗೆ ಶೀಘ್ರ ಮಾರುಕಟ್ಟೆ ಸ್ಥಳಾಂತರ ಮಾಡಲಾಗುವುದು ಎಂದು ಭರವಸೆ ನೀಡಿದರು.ಶಾಸಕ ಪಿ.ರವಿಕುಮಾರ್ ಮಾತನಾಡಿ, ದಶಕಗಳಿಂದ ನೆನಗುದಿಗೆ ಬಿದ್ದಿದ್ದ ರೈಲ್ವೆ ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ಬೀಳದಂತೆ ಮೇಲ್ಚಾವಣಿಯನ್ನೂ ನಿರ್ಮಿಸಲಾಗುತ್ತಿದೆ. ಮಳೆ ನೀರು ನಿಂತು ಸಂಚಾರಕ್ಕೆ ಅಡಣೆಯಾಗುವುದನ್ನು ತಪ್ಪಿಸಲು ಈ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದರು.ರೈಲ್ವೆ ಕೆಳ ಸೇತುವೆ ಕಾಮಗಾರಿ ಆಗಸ್ಟ್ ಮೊದಲ ವಾರದೊಳಗೆ ಪೂರ್ಣಗೊಳಿಸಿ ಆ.೧೫ರಂದು ಲೋಕಾರ್ಪಣೆ ಮಾಡಲು ಸಿದ್ಥತೆ ನಡೆಸಲಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.ಆದ್ಯತೆ ಮೇರೆಗೆ ಅಂಗಡಿ ಮಂಜೂರು: ತರಕಾರಿ ಮಾರುಕಟ್ಟೆ ಕಟ್ಟಡ ಸಂಪೂರ್ಣಗೊಂಡಿದೆ. ಹಿಂದೆ ಇದ್ದ ಹಳೇ ಕಟ್ಟಡ ಒಡೆದುಹಾಕುವ ವೇಳೆ ಎಷ್ಟು ಮಂದಿ ವರ್ತಕರಿದ್ದರೋ ಅವರಿಗೆಲ್ಲರಿಗೂ ಅಂಗಡಿಗಳನ್ನು ಆದ್ಯತೆ ಮೇರೆಗೆ ಕೊಡಬೇಕಿದೆ. ಕೆಲವರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯೊಳಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದವರಿಗೆ ಇಲ್ಲಿರುವ ಅಂಗಡಿಗಳನ್ನು ಹಂಚಿಕೆ ಮಾಡಬೇಕಿದೆ. ಎಲ್ಲ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿ ಆ. ೧೫ರೊಳಗೆ ಎಲ್ಲರಿಗೂ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.ನಗರಸಭಾ ಸದಸ್ಯರಾದ ಮಂಜುಳಾ, ಎಂ.ಎನ್.ಶ್ರೀಧರ್, ಟಿ.ಕೆ. ರಾಮಲಿಂಗಯ್ಯ, ಪೂರ್ಣಿಮಾ, ಆಯುಕ್ತ ಆರ್.ಮಂಜುನಾಥ್, ನಯೀಂ, ಜಿಲ್ಲಾ ವಾಣಿಜ್ಯ ಮಂಡಳಿ ಅಧ್ಯಕ್ಷ ಪ್ರಭಾಕರ್, ಮುಖಂಡರಾದ ರುದ್ರಪ್ಪ, ಶಿವನಂಜು ಇತರರಿದ್ದರು.