18 ತಿಂಗಳಲ್ಲಿ ಕಾಮಗಾರಿ ಪೂರ್ಣ: ಶಾಸಕ ನೇಮಿರಾಜ ನಾಯ್ಕ

| Published : Mar 14 2024, 02:03 AM IST

ಸಾರಾಂಶ

ಸದ್ಯಕ್ಕೆ ಮುಂದಿನ 2 ತಿಂಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಬಾರದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟೆಚ್ಚರದ ಸೂಚನೆ ನೀಡಿರುವೆ.

ಕೊಟ್ಟೂರು: ಕೊಟ್ಟೂರು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೇಂದ್ರ ಸರ್ಕಾರದ ಅಮೃತ್ -2 ಯೋಜನೆಯಡಿ ₹81 ಕೋಟಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮುಂದಿನ 18 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ಪಟ್ಟಣದ ಜನತೆಗೆ ಸುಲಲಿತವಾಗಿ 24 ತಾಸುಗಳ ನಿರಂತರ ನೀರು ಪೂರೈಕೆಯಾಗುತ್ತದೆ ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.ಪಟ್ಟಣದ ಜೋಳದಕೂಡ್ಲಿಗಿ ರಸ್ತೆಯಲ್ಲಿಯ ಡೋಟಾಲ್‌ ಗೌರಮ್ಮ ಲೇಔಟ್‌ನಲ್ಲಿ ಅಮೃತ್‌-2 ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಕ್ಷೇತ್ರದ ಮರಿಯಮ್ಮನಹಳ್ಳಿಗೆ ₹77 ಕೋಟಿ, ಹಗರಿಬೊಮ್ಮಹಳ್ಳಿಗೆ 35 ಕೋಟಿ, ಕೊಟ್ಟೂರಿಗೆ ₹81 ಕೋಟಿ ವೆಚ್ಚದ ಯೋಜನೆಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡು ಕಾಮಗಾರಿಗೆ ತ್ವರಿತಗತಿಯಲ್ಲಿ ಚಾಲನೆ ದೊರಕಲು ಎಲ್ಲ ಬಗೆಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.ಸದ್ಯದ ಬೇಸಿಗೆಯಲ್ಲಿ ತಲೆದೂರಿರುವ ನೀರಿನ ಸಮಸ್ಯೆಯನ್ನು ನೀಗಿಸಲು ಖಾಸಗಿ ಬೋರ್‌ ವೆಲ್‌ ಬಾಡಿಗೆ ಪಡೆಯುವುದರ ಜೊತೆಗೆ ಇತರ ಎಲ್ಲ ಬೋರ್‌ಗಳಿಂದ ನೀರನ್ನು ಪಡೆದು ಜನತೆಗೆ ಪೂರೈಸಲು ತಕ್ಷಣವೇ ಮುಂದಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವೆ. ಸದ್ಯಕ್ಕೆ ಮುಂದಿನ 2 ತಿಂಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಬಾರದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟೆಚ್ಚರದ ಸೂಚನೆ ನೀಡಿರುವೆ ಎಂದು ಅವರು ಹೇಳಿದರು.ಅಮೃತ್‌ ಯೋಜನೆಯ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಏಜೆನ್ಸಿಯೊಂದಕ್ಕೆ ನೀಡಲಾಗಿದೆ. ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹಡಗಲಿಯ ಕಾಮಗಾರಿಗಳನ್ನು ಈ ಏಜೆನ್ಸಿಯವರೇ ನಿರ್ವಹಿಸಲಿದ್ದಾರೆ ಎಂದರು.ಅಮೃತ್‌-2 ಯೋಜನೆಯ ನೀರನ್ನು ಪೂರೈಸಲು ಕೊಟ್ಟೂರು ಪಟ್ಟಣದ ಲ್ಲಿ ಹೆಚ್ಚುವರಿಯಾಗಿ ನಾಲ್ಕು ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಲು ಈಗಾಗಲೇ ಯೊಜನೆ ರೂಪಿಸಿದೆ ಎಂದು ಅವರು ಹೇಳಿದರು.ಕೊಟ್ಟೂರು ತಾಲೂಕಿನಲ್ಲಿ ಈ ವರ್ಷ ₹600 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಸರ್ಕಾರದ ಯಾವುದೇ ಅನುದಾನದ ಸಹಾಯವಿಲ್ಲದೆ ಕೇಂದ್ರ ಸರ್ಕಾರ ಕೆಕೆಆರ್‌ಡಿಬಿ, ಖನಿಜ ನಿಧಿ, ಮತ್ತಿತರರ ಅನುದಾನ ಬಳಸಿಕೊಂಡು ಕೈಗೊಳ್ಳಲಾಗುತ್ತಿದೆ ಎಂದ ಅವರು ಯಾವುದೇ ಕಾರಣಕ್ಕೂ ಅನುದಾನದ ಕೊರತೆ ಬಾರದಂತೆ ಯೋಜನೆ ರೂಪಿಸಿದ್ದೇವೆ. ರಾಜ್ಯ ಸರ್ಕಾರದಲ್ಲಿ ಯಾವುದೇ ಬಗೆಯ ಅನುದಾನ ಪಡೆಯಲು ಆಗುತ್ತಲೇ ಇಲ್ಲ. ಈ ಸರ್ಕಾರ ತೀವ್ರ ಬಗೆಯ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಾಸ್ತವ ಸ್ಥಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಅನುದಾನ ನೀಡುವ ಯೋಜನೆ ಸರ್ಕಾರದಲ್ಲಿ ಇಲ್ಲ. ಸರ್ಕಾರದ ಅನುದಾನಕ್ಕಾಗಿ ಕಾಯದೇ ಕ್ಷೇತ್ರಕ್ಕೆ ಬೇರೆ ಬೇರೆ ಮೂಲದ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಅವರು ಹೇಳಿದರು.ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್‌, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ವೈ.ಮಲ್ಲಿಕಾರ್ಜನ, ತಿಮ್ಮಲಾಪುರ ಕೊಟ್ರೇಶ್‌, ಗಂಗಮ್ಮನಹಳ್ಳಿ ಬಸವರಾಜ, ರುದ್ರಮ್ಮ ಜೋಗುತಿ, ಬಣಕಾರ ಗುರು, ಹೇಮಣ್ಣ, ಪಪಂ ಸದಸ್ಯ ಮರಬದ ಕೊಟ್ರೇಶ್‌ ಮತ್ತಿತರರು ಪಾಲ್ಗೊಂಡಿದ್ದರು.