ರಾಘು ಕಾಕರಮಠ

ಅಂಕೋಲಾ: ತಾಲೂಕಿನ ಹೊನ್ನಳ್ಳಿ ಗ್ರಾಮದ ಗಂಗಾವಳಿ ನದಿಯಿಂದ ₹234 ಕೋಟಿ ವೆಚ್ಚದ ವಾಸದ ಕುದ್ರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. 11 ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ 2 ವರ್ಷ ಸವೆದರೂ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಭಾಗ್ಯ ಲಭಿಸಿಲ್ಲ.

ಒಟ್ಟು 44 ಕಿ.ಮೀ ಉದ್ದದ ಪೈಪ್‌ಲೈನ್ ಕಾಮಗಾರಿ ಮೂಲಕ ಗಂಗಾವಳಿ ನದಿಯಿಂದ ವಾಸರಕುದ್ರಿಗೆ, ಬೆಳಸೆ, ಶೆಟಗೇರಿ, ವಂದಿಗೆ ಮತ್ತು ಬೆಳಂಬಾರ, ಹೊನ್ನೇಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 23 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಹೊನ್ನಳ್ಳಿಯಲ್ಲಿ ಜಾಕ್‌ವೆಲ್‌ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದರೆ ಮುಖ್ಯವಾಗಿ ಶಿರಗುಂಜಿ ಗ್ರಾಮದಲ್ಲಿ ನಿರ್ಮಾಣವಾಗಬೇಕಿದ್ದ ಶುದ್ಧಿಕರಣ ಘಟಕಕ್ಕೆ ಇನ್ನೂ ಸೂಕ್ತವಾದ ಸ್ಥಳವೇ ದೊರಕಿಲ್ಲ. ಆಮೆಗತಿಯಲ್ಲಿ ಕೆಲಸ ಸಾಗುತ್ತಿರುವುದರಿಂದ ಪ್ರಸಕ್ತ ವರ್ಷವೂ ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ವಂಚಿತರಾಗುವುದು ನಿಶ್ಚಿತವಾಗಿದೆ.

ಈ ಯೋಜನೆಯನ್ನೇ ಅವಲಂಬಿಸಿ ತಾಲೂಕಿನಲ್ಲಿ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಅಂದಾಜು 8000 ನಲ್ಲಿ ಸಂಪರ್ಕ ಹಾಗೂ ಪೈಪ್ ಲೈನ್ ಕಾಮಗಾರಿ ಮುಗಿದು ವರ್ಷಗಳೇ ಕಳೆದಿದೆ. ಆದರೆ, ಸಾರ್ವಜನಿಕರಿಗೆ ನೀರು ಮಾತ್ರ ಲಭ್ಯವಾಗಿಲ್ಲ. ಕಾಮಗಾರಿ ವಿಳಂಬವಾಗಲು ಪ್ರಾರಂಭದಲ್ಲಿ ಅರಣ್ಯ, ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ನಿರ್ವಹಿಸಲು ಕೆಲ ಸ್ಥಳಗಳಲ್ಲಿ ಅನುಮತಿ ತಡವಾಗಿದ್ದರಿಂದ ಕಾಮಗಾರಿ ವಿಳಂಬವಾಗುತ್ತಿದೆ.

ಕಾಮಗಾರಿ ನಿರ್ವಹಿಸಲು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಅನುಮತಿ ನೀಡಲು ಕನಿಷ್ಠ ಮೂರು ತಿಂಗಳು ಸಮಯ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ನಾವು ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಇದರಿಂದ ವಿಳಂಬವಾಗುತ್ತಿದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು.


ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದಾಗ ಪ್ರತಿಕ್ರಿಯಿಸಿದ ಅವರು ನಾವು ಕಾಮಗಾರಿ ನಿರ್ವಹಿಸಲು ಅನುಮತಿ ನೀಡಿದ ಸ್ಥಳದ ಬದಲಾಗಿ ಇನ್ನೊಂದು ಸ್ಥಳದಲ್ಲಿ ಕಾಮಗಾರಿ ನಡೆಸಿದರೆ ಅದನ್ನು ತಡೆಯುತ್ತೇವೆ. 2022ರಿಂದ ಈ ಯೋಜನೆಯ ಕುರಿತು ಸಿದ್ಧತೆಗಳು ನಡೆದಿದ್ದರೂ ಇದಕ್ಕೂ ಮುಂಚೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ನಿಯಮನುಸಾರ ತಮಗೆ ಬೇಕಾಗಿರುವ ಸ್ಥಳದ ಕುರಿತು ಪತ್ರ ಬರೆದು ನಂತರ ಬಂದು ಅನುಮತಿ ಪಡೆಯಬೇಕಿದೆ. ಇದ್ಯಾವುದನ್ನು ಪಾಲಿಸದೇ ನಮ್ಮ ಇಲಾಖೆಯ ಜೊತೆ ಚರ್ಚಿಸದೆ ತಮ್ಮ ಮನಬಂದಂತೆ ಆರಣ್ಯ ಇಲಾಖೆಯ ಸ್ಥಳದಲ್ಲಿ ಕಾಮಗಾರಿ ಆರಂಭಿಸಿದಾಗ ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ನಾವು ತಕರಾರು ಮಾಡಬೇಕಾಗುತ್ತದೆ. ಮುಖ್ಯವಾಗಿ ಅನುಮತಿ ಪಡೆಯಲು ಇಲಾಖೆಯ ಅಧಿಕಾರಿಗಳು ಬರಲಾರದೆ ಗುತ್ತಿಗೆದಾರರನ್ನು ನಮ್ಮಲ್ಲಿ ಕಳುಹಿಸುತ್ತಾರೆ. ಹೀಗಾದಾಗ, ನಾವು ಏನೆಂದು ಹೇಳಬೇಕು? ಆದ್ದರಿಂದ ಇಲಾಖೆಯ ನಿಯಮನುಸಾರ ಅನುಮತಿ ದೊರಕಲು ತಡವಾಗುತ್ತದೆ ಎನ್ನುತ್ತಾರೆ ಮಾಸ್ತಿಕಟ್ಟು ವಲಯ ಅರಣ್ಯಾಧಿಕಾರಿ ಲೋಕೇಶ್ ಪಾಟಣಕರ್,

ತುಕ್ಕು ಹಿಡಿದ ನಲ್ಲಿ

ಬೇಸಿಗೆ ಆರಂಭವಾಗಿದ್ದು ಪ್ರತಿ ವರ್ಷದಂತೆ ಈ ಬಾರಿಯೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿ ವರ್ಷಗಳೇ ಕಳೆದಿದೆ. ಆದರೆ ಮುಖ್ಯವಾಗಿ ನೀರು ಸರಬರಾಜು ಮಾಡಬೇಕಾದ ಕುಡಿಯುವ ನೀರು ಯೋಜನೆ ವಿಳಂಬವಾಗುತ್ತಿರುವುದರಿಂದ ಅಳವಡಿಸಿದ ನಲ್ಲಿಗಳು ತುಕ್ಕು ಹಿಡಿದು ಹಾಳಾಗುತ್ತಿವೆ ಎನ್ನುತ್ತಾರೆ ಶೆಟಗೇರಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀಧರ ನಾಯಕ.

ಸದ್ಯ ಅರಣ್ಯ ಇಲಾಖೆಯ ತಕರಾರು ಇದ್ದು, ಅನುಮತಿ ದೊರೆತರೆ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದ ಅಧಿಕಾರಿ ಅಮಿತಾ ತಾಳೇಕರ ಹೇಳುತ್ತಾರೆ.