ಕಸ ಸಂಗ್ರಹಣೆ, ಕಸ ವಿಲೇವಾರಿ, ಸಂಸ್ಕರಣೆ ಮಾಡುವ ಮೂಲಕ ಹಾವೇರಿ ನಗರವನ್ನು ಸೌಂದರ್ಯೀಕರಣವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಹಾವೇರಿ: ನಗರಸಭೆ ಪೌರ ಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿ, ಆರೋಗ್ಯ ನಿರೀಕ್ಷಕರು ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು. ಕಸ ಸಂಗ್ರಹಣೆ, ಕಸ ವಿಲೇವಾರಿ, ಸಂಸ್ಕರಣೆ ಮಾಡುವ ಮೂಲಕ ಹಾವೇರಿ ನಗರವನ್ನು ಸೌಂದರ್ಯೀಕರಣವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಜಂಟಿಯಾಗಿ ಹಮ್ಮಿಕೊಂಡಿದ್ದ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು 2026-27ರ ಅಂಗವಾಗಿ ಜರುಗಿದ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಾವೇರಿ ನಗರದಲ್ಲಿ 31 ವಾರ್ಡಗಳು ಇದ್ದು, ಸುಮಾರು 90 ಸಾವಿರ ಜನಸಂಖ್ಯೆ ಇದೆ. ನಗರದ ಜನತೆ ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದು, ನಗರವನ್ನು ಸುಂದರವಾಗಿ ಇಡುವುದು ನಗರಸಭೆಯ ಕೆಲಸವಾಗಿದೆ. ಚಿಕ್ಕ ಏರಿಯಾ ಇದ್ದು, ಆ ಏರಿಯಾ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನಾನ್ಯಾಕೆ ಸ್ವಚ್ಛತೆ ಮಾಡಲಿ ಎಂಬುವ ಮನಸ್ಥಿತಿ ಹಾಗೂ ಪರಸ್ಪರ ದೂರು ನೀಡುವುದನ್ನು ಬಿಡಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತ ಪೌರ ಕಾರ್ಮಿಕರಿಗೆ, ಸ್ವಚ್ಛತಾಗಾರರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬರು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು. ಹಾವೇರಿ ನಗರವನ್ನು ಸುಂದರ ನಗರವಾಗಿಸಬೇಕು ಎಂದು ತಿಳಿಸಿದರು.15 ದಿನಗಳ ಗಡುವು ಎಚ್ಚರಿಕೆ: ಪೌರ ಕಾರ್ಮಿಕರು, ಮೇಲ್ವಿಚಾರಕರು ನಗರವನ್ನು ಸುತ್ತಾಡಬೇಕು. ಎಲ್ಲಿ, ಯಾವ ಏರಿಯಾದಲ್ಲಿ ಕಸ ತ್ಯಾಜ್ಯ ಸಂಗ್ರಹಗೊಂಡಿದೆ. ಚರಂಡಿ ಎಲ್ಲಿ ಬ್ಲಾಕ್ ಆಗಿದೆ, ಜನರಿಗೆ ಏನು ತೊಂದರೆ ಆಗುತ್ತಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗಮನಿಸಬೇಕು. ಇಲ್ಲಿ ಯಾವ ಸಿಬ್ಬಂದಿಯೂ ಕೂಡ ಆರಾಮಾಗಿ ಎಸಿ ರೂಂನಲ್ಲಿ ಕೂತು ಹೋಗಲಿಕ್ಕೆ ಬಂದಿಲ್ಲ. ಎಲ್ಲರಿಗೂ 15 ದಿನಗಳ ಕಾಲಾವಕಾಶ ಕೊಡುತ್ತೇನೆ, ರಸ್ತೆ ಬದಿಯಲ್ಲಿ, ಏರಿಯಾಗಳಲ್ಲಿ ಕಸ ಸಂಗ್ರಹಗೊಂಡಿದ್ದರ ಬಗ್ಗೆ ದೂರು ಬರಬಾರದು. ಹಾಗೇನಾದರೂ ದೂರು ಬಂದರೆ ಸಂಬಂಧಿಸಿದ ಪೌರ ಕಾರ್ಮಿಕರು, ಮೇಲ್ವಿಚಾರಕರು, ಸಿಬ್ಬಂದಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಪೌರಾಯುಕ್ತ ಎಚ್. ಕಾಂತರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿ.ಚಂದ್ರಪ್ಪ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಕಮ್ಯೂನಿಟಿ ಮೊಬೈಲೈಸರ್‌ಗಳು, ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಇದ್ದರು. ಎಲ್ಲೆಂದರಲ್ಲಿ ತ್ಯಾಜ್ಯ ಕಸ ಎಸೆಯದಂತೆ, ಹಸಿ ಮತ್ತು ಒಣ ಕಸ ಬೇರ್ಪಡಿಸುವಂತೆ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. ಆದಾಗ್ಯೂ ತ್ಯಾಜ್ಯ ಎಸೆಯುವುದು ಕಂಡುಬಂದರೆ, ಅಂತಹವರಿಗೆ ತ್ಯಾಜ್ಯ ಕಸ ಎಸೆಯದಂತೆ ಮನವರಿಕೆ ಮಾಡಿ. ಅಷ್ಟಕ್ಕೂ ಕೇಳಲಿಲ್ಲ ಎಂದಾದರೆ ದಂಡ ವಿಧಿಸಿ, ವಸೂಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.