ಸಾರಾಂಶ
ಹಾವೇರಿ: ಹಾವೇರಿ ನಗರಸಭೆ ಆಡಳಿತ ವ್ಯವಸ್ಥೆ ಸುಧಾರಣೆಗೆ ಅಧಿಕಾರಿಗಳು ಆಸಕ್ತಿಯಿಂದ ಹಾಗೂ ಕ್ರಿಯಾಶೀಲರಾಗಿ ಚುರುಕಿನಿಂದ ಕೆಲಸ ಮಾಡಬೇಕು. ಕೆಲಸ ಮಾಡದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ ನೀಡಿದರು.ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಚೇರಿಯ ಆಡಳಿತದ ವಸ್ತುಸ್ಥಿತಿ ಅರಿಯಲು ಸಭೆ ಮಾಡಲಾಗುತ್ತಿದೆ. ಸಮಸ್ಯೆಗಳ ಕುರಿತು ಯಾರಾದರೂ ಕರೆ ಮಾಡಿದರೆ ಸ್ವೀಕರಿಸಬೇಕು ಹಾಗೂ ಆ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹರಿಸುವ ಮೂಲಕ ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅಧಿಕಾರಿಗಳಿಗೆ ತರಾಟೆ: ನಗರಸಭೆ ಸದಸ್ಯರಿಂದ ಕಚೇರಿ ಆಡಳಿತ ವ್ಯವಸ್ಥೆ, ನೀರು, ಚರಂಡಿ, ನಗರಸಭೆ ಆಸ್ತಿ, ಕರ ವಸೂಲಿ ಸೇರಿದಂತೆ ವಿವಿಧ ವಿಷಯಗಳ ಸಮಸ್ಯೆಗಳನ್ನು ಆಲಿಸಿದ ಅವರು, ಸಭೆಯಲ್ಲಿ ಕರ ವಸೂಲಿ, ಮಳಿಗೆ ಬಾಡಿಗೆ, ನಗರಸಭೆ ಮಂಜೂರಾದ ಹುದ್ದೆಗಳ ಸೇರಿದಂತೆ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಮಳಿಗೆಗಳು, ನಗರಸಭೆ ಆಸ್ತಿ, ಕರ ವಸೂಲಿ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಏನ ಕೆಲಸ ಮಾಡ್ತಿರಿ, ಪೌರಾಯುಕ್ತರು ಇಲ್ಲ ಅಂದರೆ ನೀವು ಕೆಲಸ ಮಾಡಬಾರದು ಎಂದು ಇದೆಯಾ? ಎಲ್ಲರೂ ನಿಮ್ಮ ನಿಮ್ಮ ಕೆಲಸವನ್ನು ಜವಾಬ್ದಾರಿಯಿಂದ ಮಾಡಬೇಕು ಎಂದು ಸೂಚನೆ ನೀಡಿದರು. ನಗರದಲ್ಲಿ ₹33 ಕೋಟಿ ಮೊತ್ತದ ಯುಜಿಡಿ ಕಾಮಗಾರಿ ಕುರಿತು ತನಿಖೆ ಮಾಡಿಸಿ ತಪ್ಪಿಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.ಸಮಸ್ಯೆಗಳ ಮಹಾಪೂರ: ನಗರದ 24x7 ಕುಡಿಯುವ ನೀರಿನ ಸಮಸ್ಯೆ, ಗಟಾರ ಸ್ವಚ್ಛತೆ, ಪೈಪ್‌ಲೈನ್ ದುರಸ್ತಿ, ನಗರಸಭೆ ಮಳಿಗೆ ಹರಾಜು ಪ್ರಕ್ರಿಯೆ, ಅಸಮರ್ಪಕ ಕಸ ವಿಲೇವಾರಿ, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ, ಯುಜಿಡಿ ಕಾಮಗಾರಿ ಅವ್ಯವಹಾರ, ನಗರಸಭೆಯಲ್ಲಿ ಹಣದ ಕೊರತೆ, ಗ್ಯಾಸ್ ಪೈಪ್‌ಲೈನ್‌ನಿಂದ ರಸ್ತೆಗಳಲ್ಲಿ ಗುಂಡಿ, ಸರಿಯಾಗಿ ಕರ ವಸೂಲಿ ಮಾಡುತ್ತಿಲ್ಲ. ಕಚೇರಿಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಇರುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ನಗರಸಭೆಗೆ ಕಾಯಂ ಆಯುಕ್ತರ ನೇಮಕ ಮಾಡಬೇಕು ಎಂದು ನಗರಸಭೆ ಸದಸ್ಯರಾದ ಸಂಜೀವಕುಮಾರ ನೀರಲಗಿ, ಬಸವರಾಜ ಬೆಳವಡಿ, ಶಿವಯೋಗಿ ಹೂಲಿಕಂತಿಮಠ, ವೆಂಕಟೇಶ ಪೂಜಾರ ಇತರ ಸದಸ್ಯರು ಮತ್ತು ಆಶ್ರಯ ಸಮಿತಿ ಸದಸ್ಯರು ಸಚಿವರಿಗೆ ಮನವಿ ಮಾಡಿದರು.
ಸದಸ್ಯರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ಇಲ್ಲಿನ ಆಡಳಿತ ಸುಧಾರಣೆಗೆ ಇಲ್ಲಿ ಸಭೆ ಮಾಡಲಾಗಿದೆ. ಕಾಯಂ ಆಯುಕ್ತರ ನೇಮಕ್ಕೆ ಆದ್ಯತೆ ಮೇರೆಗೆ ಕ್ರಮ ವಹಿಸಲಾಗುವುದು ಎಂದರು.ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಉಪವಿಭಾಗಾಧಿಕಾರಿ ಚೆನಪ್ಪ ಇತರರು ಉಪಸ್ಥಿತರಿದ್ದರು.