ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಬರುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಬರುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ನವೆಂಬರ-2025 ಮಾಹೆಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಇಲಾಖೆಯವರು ನಿಗದಿಪಡಿಸಿದ ಅನುದಾನವನ್ನು ಖರ್ಚು ಮಾಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಕೌಶಲ್ಯ ತರಬೇತಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದಾಗ ಶಾಲಾ ಕಾಲೇಜುಗಳಲ್ಲಿ ಕಲಿಕೆಯ ಜೊತೆಗೆ ಕೌಶಲ್ಯ ತರಬೇತಿ ಕೂಡಾ ಮಹತ್ವವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡಿ, ವಿವಿಧ ಇಲಾಖೆಯ ಯೋಜನೆಗಳ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳುವಂತಾಗಬೇಕು. ಅಂದಾಗ ಮಾತ್ರ ಅವರು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದರು.ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಮಾಹಿತಿಯನ್ನು ಪಡೆದುಕೊಂಡು ಸರಕಾರ ಮೀಸಲಿಟ್ಟ ಅನುದಾನ ಸದ್ಬಳಕೆಯಾಗುವಂತೆ ಮಾಡಬೇಕು. ಈಗಾಗಲೇ ಎಷ್ಟು ಜನರಿಗೆ ಸರಕಾರದ ಯೋಜನೆಗಳು ತಲುಪಿ ಅವರ ಆರ್ಥಿಕ ಮಟ್ಟದ ಸುಧಾರಣೆ ಆಗಿರುವ ಬಗ್ಗೆ ತಿಳಿದು. ಲಾಭ ಪಡೆಯ ಫಲಾನುಗಳ ಪಟ್ಟಿ ಮಾಡಿಕೊಂಡು ಯೋಜನೆಗಳ ಸದುಪಯೋಗ ಪಡೆಯುವಂತೆ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಇಲಾಖೆವಾರು ನಿಗದಿಪಡಿಸಿದ ಪ್ರಗತಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಕಾರ್ಯವಾಗಬೇಕು. ಅಲ್ಲದೇ ಕಡಿಮೆ ಪ್ರಗತಿ ಸಾಧಿಸಿದ ಇಲಾಖೆಗಳು ಮುಂದಿನ ಸಭೆಯಲ್ಲಿ ಬಿಡುಗಡೆಯಾದ ಅನುದಾನ ಸಂಪೂರ್ಣವಾಗಿ ಖರ್ಚು ಭರಿಸುವ ಮೂಲಕ ಪ್ರಗತಿ ಸಾಧಿಸಲು ಸೂಚನೆ ನೀಡಿದರು. ಜಮಖಂಡಿಯಲ್ಲಿ ಇರುವ ಅಂಬೇಡ್ಕರ ಭವನವನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಜಮಖಂಡಿ ನಗರಸಭೆ ಪೌರಾಯುಕ್ತರ ಮೇಲೆ ಅಸಮಾದಾನಗೊಂಡ ಜಿಲ್ಲಾಧಿಕಾರಿಗಳು ಭವನದ ದುರಸ್ಥಿಗೆ ಪಂಚಾಯತ್ ರಾಜ್ ಇಲಾಖೆಗೆ ತಿಳಿಸಿದರು.
ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿಯ ಉಪಯೋಜನೆಯಡಿ ನಿಗದಿಪಡಿಸಿದ ಒಟ್ಟು ₹132.79 ಕೋಟಿ ಪೈಕಿ ₹65.39 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ₹46.71 ಕೋಟಿ ಅನುದಾನ ಖರ್ಚು ಮಾಡುವ ಮೂಲಕ ಶೇ.85.07ರಷ್ಟು ಪ್ರಗತಿ ಸಾಧಿಸಿದರೆ, ಗಿರಿಜನ ಉಪಯೋಜನೆಯಡಿ ನಿಗದಿಪಡಿಸಿದ ₹26.74 ಕೋಟಿ ಪೈಕಿ ₹17.27 ಕೋಟಿ ಬಿಡುಗಡೆಯಾಗಿದ್ದು, ಈ ಪೈಕಿ ₹13.83 ಕೋಟಿ ಖರ್ಚು ಮಾಡುವ ಮೂಲಕ ಶೇ.69 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಜಂಟಿ ಕೃಷಿ ನಿರ್ದೇಶಕ ರುದ್ರೇಶ, ಜಂಟಿ ತೋಟಗಾರಿಕೆ ನಿರ್ದೇಶಕ ರವೀಂದ್ರ ಹಕಾಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ, ಜಿಲ್ಲಾ ಪ್ರವಾಸೋದ್ಯಮ ಉಪನಿರ್ದೇಶಕ ಹಿತ್ತಲಮನಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಮೇಶ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.