ಸದಸ್ಯರ, ಕಾರ್ಮಿಕರ, ರೈತರ ಏಳಿಗೆಗೆ ಶ್ರಮ

| Published : Jun 21 2024, 01:03 AM IST

ಸಾರಾಂಶ

ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ(ಮಲ್ಟಿಸ್ಟೇಟ್)ಯಲ್ಲಿ ನೂತನ ಸೌರ ವಿದ್ಯುತ್ ಘಟಕಕ್ಕೆ ಶಾಸಕಿ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ನಿಪ್ಪಾಣಿ ಹಾಲಸಿದ್ದನಾಥ ಕಾರ್ಖಾನೆಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಿದ್ದರಿಂದ ಸಾಂಪ್ರದಾಯಿಕವಾಗಿ ಕಾರ್ಖಾನೆಯ ನಿರ್ವಹಣೆ ವೆಚ್ಚದಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ. ಪ್ರತಿದಿನ 500 ಕಿ.ವ್ಯಾಟ್ ವಿದ್ಯುತ್ ಉತ್ಪಾದನೆ ಹೊಂದಿದೆ. ಇದರಿಂದ ಕಾರ್ಖಾನೆಗೆ ಪ್ರತಿ ತಿಂಗಳು ₹4.5 ಲಕ್ಷ ಲಾಭವಾಗಲಿದೆ. ಸೋಲಾರ ಅಳವಡಿಸುವ ಮೂಲಕ ಕಾರ್ಖಾನೆಯು ಸಾಮಾಜಿಕ ಬದ್ಧತೆ ಮೆರೆದಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ (ಮಲ್ಟಿಸ್ಟೇಟ್)ಯಲ್ಲಿ ಬುಧವಾರ ಸೌರ ವಿದ್ಯುತ್ ಘಟಕದ ಉದ್ಘಾಟನೆ ಮತ್ತು ಯಾಂತ್ರಿಕ ರೋಲರ್‌ಗಳ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸೌರ ವಿದ್ಯುತ್ ಘಟಕವನ್ನು ಕಾರ್ಖಾನೆಯ 32500 ಚ.ಅ ವಿಸ್ತೀರ್ಣದಲ್ಲಿ ಗೋದಾಮಿನ ಚಾವಣಿಯ ಮೇಲೆ ಘಟಕವನ್ನು ಅಳವಡಿಸಲಾಗಿದೆ. 2024-25ನೇ ಸಾಲಿನ ಹಂಗಾಮಿನಲ್ಲಿ ನಿತ್ಯ 8500 ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದ್ದು, ಎಲ್ಲ ಕಾರ್ಮಿಕರು ಕೈಜೋಡಿಸಬೇಕು. ಕಾರ್ಖಾನೆಯ ಅಭಿವೃದ್ಧಿಯೊಂದಿಗೆ ಸದಸ್ಯರ, ಕಾರ್ಮಿಕರ, ರೈತರ ಏಳಿಗೆಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಮಾತನಾಡಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆಯವರ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ನಡೆಯುತ್ತಿರುವ ನಮ್ಮ ಕಾರ್ಖಾನೆಯಲ್ಲಿ ₹1.73 ಕೋಟಿ ವೆಚ್ಚದ 500 ಕೆವಿ ಉತ್ಪಾದನೆಯ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಲಾಗಿದೆ. ಇದು ಪ್ರತಿ ಗಂಟೆಗೆ ಸುಮಾರು 2 ಸಾವಿರ ಕೆ.ವಿ ವರೆಗೂ ವಿದ್ಯುತ್ ಉತ್ಪಾದಿಸಲಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಬಿಲ್ ಕಡಿಮೆಯಾಗಿ ಆಯದಲ್ಲಿ ವೃದ್ಧಿಯಾಗಲಿದೆ. ಕಾರ್ಖಾನೆಯು ಸಂಪೂರ್ಣವಾಗಿ ಆಧುನೀಕರಣದೊಂದಿಗೆ ಎಲ್ಲ ಆಯಾಮಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಪ್ರಸ್ತುತ ವರ್ಷ ಯಶಸ್ವಿ ಸಾಧನೆಗೆ ಪೂರ್ಣ ತಾಂತ್ರಿಕ ಮತ್ತು ಇತರ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

ಕಾರ್ಖಾನೆಯ ಅಧ್ಯಕ್ಷ ಮಲಗೊಂಡ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡ ಪಾಟೀಲ, ಮಹಾಲಿಂಗ ಕೋಠಿವಾಲೆ, ಜಯಕುಮಾರ ಖೋತ, ರಾಜೇಂದ್ರ ಗುಂದೆಶಾ, ವಿನಾಯಕ ಪಾಟೀಲ, ಶರದ ಜಾಂಗಟೆ, ರಮೇಶ ಪಾಟೀಲ, ಸಮಿತ ಸಾಸನೆ, ವೈಶಾಲಿ ನಿಕಾಡೆ, ರಾವಸಾಹೇಬ ಫರಳೆ, ಸುನೀಲ ಪಾಟೀಲ, ಕಾವೇರಿ ಮಿರ್ಜೆ, ಕಾರ್ಖಾನೆಯ ಸದಸ್ಯರು, ಸಿಬ್ಬಂದಿ, ರೈತರು ಉಪಸ್ಥಿತರಿದ್ದರು. ಸಂಚಾಲಕ ಶ್ರೀಕಾಂತ ಬನ್ನೆ ಸ್ವಾಗತಿಸಿದರು. ಅನೀಲ ಶಿಂಧೆ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಜಯವಂತ ಭಾಟಲೆ ವಂದಿಸಿದರು.